ನಟ ಮೋಹನ್ ಲಾಲ್
ಬೆಂಗಳೂರು: ಮಲಯಾಳಂ ಚಿತ್ರರಂಗದ ಖ್ಯಾತ ಹಿರಿಯ ನಟ ಮೋಹನ್ ಲಾಲ್ ಅವರು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಇತ್ತೀಚೆಗೆ ಭಾಜನರಾಗಿದ್ದಾರೆ.
‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಹಾಗೂ ಚಿತ್ರರಂಗದಲ್ಲಿ ಅವರ ಸಾಧನೆ ಮೆಚ್ಚಿ ಕೇರಳ ಸರ್ಕಾರ ಅವರಿಗೆ ಅಕ್ಟೋಬರ್ 4 ರಂದು ತಿರುವನಂತಪುರದಲ್ಲಿ ಸನ್ಮಾನ ಸಮಾರಂಭವನ್ನು ಆಯೋಜಿಸಿದೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇರಳ ಸಂಸ್ಕೃತಿ ಸಚಿವ ಸಾಜಿ ಚೇರಿಯನ್ ಅವರು ಈ ವಿಷಯ ತಿಳಿಸಿದ್ದಾರೆ. ಮೋಹನ್‌ಲಾಲ್ ಅವರು ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಭಾಜನರಾಗಿದ್ದು ಕೇರಳಕ್ಕೆ ದೊಡ್ಡ ಗೌರವ ಸಿಕ್ಕಂತಾಗಿದೆ ಎಂದು ಬಣ್ಣಿಸಿದ್ದಾರೆ.
ತಿರುವನಂತಪುರದಲ್ಲಿ ಅಕ್ಟೋಬರ್ 4 ರಂದು ಸಂಜೆ 5ರಿಂದ ಲಾಲ್ ಸಲಾಂ ಹೆಸರಿನಲ್ಲಿ ನಡೆಯುವ ಭವ್ಯ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಕಾರ್ಯಕ್ರಮದಲ್ಲಿ ಗಾಯಕರಾದ ಕೆ.ಜೆ. ಯೇಸುದಾಸ್ ಹಾಗೂ ಚಿತ್ರಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದ್ದಾರೆ.
‘ಸಿನಿಮಾ ಕ್ಷೇತ್ರದಲ್ಲಿ ಮೋಹನ್‌ಲಾಲ್ ಅವರ ಅಸಾಧಾರಣ ಪಯಣವು ಹಲವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ’ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 23ರಂದು ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಪ್ರದಾನ ಮಾಡಲಾಗಿತ್ತು.
ಮೋಹನ್‌ಲಾಲ್ ಅವರಿಗೆ 2001ರಲ್ಲಿ ಪದ್ಮಶ್ರೀ ಮತ್ತು 2019ರಲ್ಲಿ ಪದ್ಮಭೂಷಣ ಪುರಸ್ಕಾರ ಲಭಿಸಿದ್ದವು.
ಮೋಹನ್ ಲಾಲ್, ನನ್ನ ಸಿನಿ ಪಯಣದಲ್ಲಿ ಭಾಗಿಯಾದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನನಗೆ ಸಂದ ಗೌರವವನ್ನು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅರ್ಪಿಸುತ್ತೇನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.