ADVERTISEMENT

ಅಂಗವಿಕಲರ ಅವಹೇಳನ: ವಿವಾದದ ಸುಳಿಯಲ್ಲಿ ಮಲಯಾಳಂ ಚಿತ್ರ ‘ಕಡುವ’

ಪಿಟಿಐ
Published 10 ಜುಲೈ 2022, 14:40 IST
Last Updated 10 ಜುಲೈ 2022, 14:40 IST
ಕಡುವ ಚಿತ್ರದ ಪೋಸ್ಟರ್‌
ಕಡುವ ಚಿತ್ರದ ಪೋಸ್ಟರ್‌    

ಕೊಚ್ಚಿ: ಮಲಯಾಳಂ ಚಿತ್ರ 'ಕಡುವ' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿವಾದಕ್ಕೆ ಗುರಿಯಾಗಿದೆ. ಅಂಗವಿಕಲರು, ಅವರ ಪೋಷಕರ ಕುರಿತು ಚಿತ್ರದಲ್ಲಿ ಅನುಚಿತ ಸಂಭಾಷಣೆಗಳಿವೆ ಎನ್ನಲಾಗಿದ್ದು, ನಿರ್ದೇಶಕ ಶಾಜಿ ಕೈಲಾಸ್ ಮತ್ತು ನಾಯಕ ನಟ ಪೃಥ್ವಿರಾಜ್ ಸುಕುಮಾರನ್ ಭಾನುವಾರ ಕ್ಷಮೆಯಾಚಿಸಿದ್ದಾರೆ.

ಜುಲೈ 7 ರಂದು ಬಿಡುಗಡೆಯಾದ, ಪೃಥ್ವಿರಾಜ್ ನಾಯಕನಾಗಿ ನಟಿಸಿರುವ ಚಿತ್ರದ ಒಂದು ದೃಶ್ಯದಲ್ಲಿ, ಅಂಗವಿಕಲರು ಮತ್ತು ಅವರ ಪೋಷಕರ ವಿರುದ್ಧ ಅನುಚಿತ ಸಂಭಾಷಣೆಗಳು ಇರುವುದು ಕಂಡು ಬಂದಿದೆ.

ಚಲನಚಿತ್ರ ಸಂಭಾಷಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬೌದ್ಧಿಕ ಮತ್ತು ಬೆಳವಣಿಗೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳ ಪೋಷಕರ ಸಂಘ ‘ಪರಿವಾರ’ವು ರಾಜ್ಯ ಅಂಗವಿಕಲರ ಆಯೋಗದ ಮೊರೆ ಹೋಗಿದೆ.

ADVERTISEMENT

ಅವಹೇಳನಕಾರಿ ಸಂಭಾಷಣೆಗಳಿಗೆ ವಿವರಣೆ ಕೋರಿ ಚಿತ್ರ ನಿರ್ಮಾಪಕ ಕೈಲಾಸ್ ಮತ್ತು ನಿರ್ಮಾಪಕರಾದ ಸುಪ್ರಿಯಾ ಮೆನನ್ ಮತ್ತು ಲಿಸ್ಟಿನ್ ಸ್ಟೀಫನ್ ಅವರಿಗೆ ರಾಜ್ಯ ಅಂಗವಿಕಲರ ಆಯೋಗದ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ನಿರ್ದೇಶಕ ಕೈಲಾಸ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದು, ಹೃದಯಪೂರ್ವಕವಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ‘ನನ್ನ ನಿರ್ದೇಶನದ ‘ಕಡುವ’ ಚಿತ್ರದಲ್ಲಿ ಅಂಗವಿಕಲ ಮಕ್ಕಳ ಪೋಷಕರಿಗೆ ನೋವುಂಟು ಮಾಡುವ ಸಂಭಾಷಣೆ ಇರುವುದಕ್ಕಾಗಿ ನಾನು ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಚಿತ್ರದಲ್ಲಿನ ಆ ಸಂಭಾಷಣೆ ತಪ್ಪಾಗಿದೆ. ಎಲ್ಲರೂ ನನ್ನನ್ನು ಕ್ಷಮಿಸಬೇಕೆಂದು ಕೋರುತ್ತೇನೆ. ಸಂಭಾಷಣೆ ಬರೆದಿರುವ ಚಿತ್ರಕಥೆಗಾರ ಜಿನು ಅಥವಾ ನಟ ಪೃಥ್ವಿರಾಜ್ ಅಥವಾ ದೃಶ್ಯವನ್ನು ಚಿತ್ರೀಕರಿಸಿದ ನಾನು ಅದರ ಸಂಭವನೀಯ ಅರ್ಥವನ್ನು ಅರಿತುಕೊಂಡಿಲ್ಲ‘ ಎಂದು ಕೈಲಾಸ್ ಬರೆದುಕೊಂಡಿದ್ದಾರೆ.

ಕೈಲಾಸ್ ಅವರ ಪೋಸ್ಟ್ ಅನ್ನು ಹಂಚಿಕೊಂಡ ಪೃಥ್ವಿರಾಜ್, "ಕ್ಷಮಿಸಿ. ತಪ್ಪಾಗಿದೆ. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ’ ಎಂದು ಬರೆದಿದ್ದಾರೆ.

ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್‌ಗಳು ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.