ADVERTISEMENT

ಜ್ಞಾನಪೀಠ ಪುರಸ್ಕೃತ ಮಲಯಾಳಂ ಸಾಹಿತಿ ಎಂ.ಟಿ. ವಾಸುದೇವನ್‌ ನಾಯರ್ ನಿಧನ

ಪಿಟಿಐ
Published 25 ಡಿಸೆಂಬರ್ 2024, 18:13 IST
Last Updated 25 ಡಿಸೆಂಬರ್ 2024, 18:13 IST
<div class="paragraphs"><p>ಎಂ.ಟಿ ವಾಸುದೇವನ್‌ ನಾಯರ್</p></div>

ಎಂ.ಟಿ ವಾಸುದೇವನ್‌ ನಾಯರ್

   

ಕೋಯಿಕ್ಕೋಡ್‌: ಮಲಯಾಳದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ.ಟಿ.ವಾಸುದೇವನ್‌ ನಾಯರ್ (91) ಹೃದಯಾಘಾತದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ನಾಯರ್‌ ಅವರನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಸ
ಲಾಗಿತ್ತು. ಹೃದ್ರೋಗ ತಜ್ಞರು ಸೇರಿ ವಿವಿಧ ವೈದ್ಯರನ್ನು ಒಳಗೊಂಡ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. 

ADVERTISEMENT

‘ಎಂ.ಟಿ’ ಎಂದೇ ಪ್ರಸಿದ್ಧರಾಗಿದ್ದ ಅವರು ಒಟ್ಟು 9 ಕಾದಂಬರಿ, 19 ಸಣ್ಣ ಕತೆಗಳ ಸಂಕಲನಗಳನ್ನು ರಚಿಸಿದ್ದರು. 6 ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಅವರು, 54 ಚಿತ್ರಗಳಿಗೆ ಚಿತ್ರಕತೆ ಬರೆದಿದ್ದರು. 7 ದಶಕಗಳ ಸಾಹಿತ್ಯಕ ಪಯಣದಲ್ಲಿ ಅವರು, ಪ್ರಬಂಧಗಳ ಹಲವು ಸಂಕಲನಗಳನ್ನು ಹಾಗೂ ಸ್ಮರಣ ಸಂಚಿಕೆಗಳನ್ನು ರಚಿಸಿದ್ದರು.

ಅವರ ‘ನಾಲುಕೆಟ್ಟು’ (ಪೂರ್ವಿಕರ ಮನೆ) ಕಾದಂಬರಿಯನ್ನು ಮಲಯಾಳ ಸಾಹಿತ್ಯದ ಮೇರು ಕೃತಿ ಎಂದೇ ಪರಿಗಣಿಸಲಾಗುತ್ತದೆ. 

‘ಅರಸುವೀಟ್ಟು’, ‘ಮಂಜು’ ಹಾಗೂ ‘ಕಾಲಮ್’ನಂತಹ ಹಲವು ಮಹಾನ್‌ ಕೃತಿಗಳನ್ನು ರಚಿಸಿದ್ದರು.

ಸಾಹಿತ್ಯ ಸೇವೆ ಪರಿಗಣಿಸಿ 1995ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಯಲಾರ್‌ ಪ್ರಶಸ್ತ್ರಿ, ವಲ್ಲತ್ತೋಳ್‌ ಪ್ರಶಸ್ತಿ, ಎಳುತ್ತಚ್ಚನ್ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ, ಒ.ಎನ್.ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದರು.

2005ರಲ್ಲಿ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮಭೂಷಣ, ಮಲಯಾಳ
ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ 2013ರಲ್ಲಿ ಅವರಿಗೆ ಜೆ.ಸಿ.ಡ್ಯಾನಿಯಲ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ರಾಜ್ಯ ಸರ್ಕಾರ ಸ್ಥಾಪಿಸಿದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಕೇರಳ ಜ್ಯೋತಿ ಪ್ರಶಸ್ತಿ’ಯನ್ನು 2022ರಲ್ಲಿ ಮೊದಲು ವಾಸುದೇವನ್‌ ನಾಯರ್ ಅವರಿಗೆ ನೀಡಲಾಗಿತ್ತು.

ಕೆಲ ವರ್ಷಗಳ ಕಾಲ ಅವರು ಮಾತೃಭೂಮಿ ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

ಎರಡು ದಿನ ಶೋಕಾಚರಣೆ: ಎಂ.ಟಿ.ವಾಸುದೇವನ್ ನಾಯರ್ ಗೌರವಾರ್ಥ ಕೇರಳ ಸರ್ಕಾರ ಡಿ.26 ಹಾಗೂ 27ರಂದು ರಾಜ್ಯದಲ್ಲಿ ಶೋಕಾಚರಣೆ ಘೋಷಿಸಿದೆ.

ಡಿ.26ರಂದು ನಡೆಸಲು ಉದ್ದೇಶಿಸಿದ್ದ ಸಚಿವ ಸಂಪುಟ ಸಭೆ ಸೇರಿದಂತೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆದೇಶಿಸಿದ್ದಾರೆ.

ಎಂ.ಟಿ.ವಾಸುದೇವನ್‌ ನಾಯರ್ ಅವರು ತಮ್ಮ ಕೃತಿಗಳ ಮೂಲಕ ಕೇರಳದ ಬದುಕಿನ ಸೌಂದರ್ಯ ಮತ್ತು ಸಂಕೀರ್ಣತೆಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ
ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.