
ಚಿತ್ರರಂಗದಲ್ಲಿ ಅದೊಂದು ಕಾಲವಿತ್ತು. ಪ್ರೇಕ್ಷಕರ ಮನಮೆಚ್ಚಿದ ಚಿತ್ರಗಳು ಒಂದೊಂದು ಏಕ ಪರದೆಯ ಚಿತ್ರಮಂದಿರಗಳಲ್ಲಿ ನೂರು ದಿನ, ವರ್ಷ, ಎರಡು ವರ್ಷ ಹೀಗೆ ಸುದೀರ್ಘ ಪ್ರದರ್ಶನ ಕಾಣುತ್ತಿದ್ದವು. ಈ ಚಿತ್ರಮಂದಿರಗಳಲ್ಲಿ ಸಿಳ್ಳೆ, ಜೈಕಾರದ ನಡುವೆ ಸಿನಿಮಾ ನೋಡುವ ಮಜವೇ ಬೇರೆಯಾಗಿತ್ತು. ಇಂತಹ ಏಕ ಪರದೆಯ ಐಕಾನಿಕ್ ಚಿತ್ರಮಂದಿರಗಳೇ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್‌ನಾಗ್, ಅನಂತ್‌ನಾಗ್, ರವಿಚಂದ್ರನ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಮುಂತಾದ ಖ್ಯಾತ ನಟರಿಗೆ ಅಭಿಮಾನಿಗಳ ಹೃದಯದಲ್ಲಿ ಆರಾಧ್ಯ ಸ್ಥಾನ ತಂದುಕೊಟ್ಟಿದ್ದವು. ಸೂಪರ್ ಸ್ಟಾರ್‌ಗಳಾಗಿ ಮೆರೆಸಿದ್ದವು. ಅಂತಹ ಗತವೈಭವಕ್ಕೆ ಸಾಕ್ಷಿಯಾದ ಬೆಂಗಳೂರಿನ ಏಕಪರದೆಯ ಚಿತ್ರಮಂದಿರಗಳು ಕಳೆದ ದಶಕದಿಂದ ಮರೆಯಾಗುತ್ತಿವೆ. ಆ ಸಾಲಿಗೆ ಈಗ ಬೆಂಗಳೂರಿನ ಲಾಲ್ ಬಾಗ್ ಸಮೀಪವಿರುವ ಊರ್ವಶಿ ಚಿತ್ರಮಂದಿರ ಸಹ ಸೇರುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಭೂಮಿ ವಿವಾದಕ್ಕೆ ಸಿಲುಕಿರುವ ಊರ್ವಶಿ ಚಿತ್ರಮಂದಿರ 2026ರ ಫೆಬ್ರುವರಿಗೆ ಬಾಗಿಲು ಮುಚ್ಚುತ್ತಿದೆ ಎನ್ನಲಾಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಪ್ರದರ್ಶನಕ್ಕೆ ಸಾಕ್ಷಿಯಾಗಿದೆ. 1970ರಲ್ಲಿ ಡಾ ರಾಜಕುಮಾರ್ ಉದ್ಘಾಟಿಸಿದ್ದ 1100 ಆಸನಗಳ ವ್ಯವಸ್ಥೆ, ಸುಸಜ್ಜಿತ ಪಾರ್ಕಿಂಗ್ ಮೂಲಕ ಬೆಂಗಳೂರು ಮಹಾನಗರದ ಕೆಲವೇ ಕೆಲವು ದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿತ್ತು. ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ಚಿತ್ರಗಳು ಇಲ್ಲಿ ಮುಂಗಡ ಬುಕಿಂಗ್ ಮೂಲಕ ಭಾರಿ ಗಳಿಕೆ ಕಾಣುತ್ತಿದ್ದವು. ದೊಡ್ಡ ಚಿತ್ರಮಂದಿರ ಆಗಿದ್ದರಿಂದ ಬೇಡಿಕೆಯೂ ಇತ್ತು.
ಆಧುನಿಕತೆಯ ಅಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗದೇ ಬೆಂಗಳೂರಿನ ಅದೆಷ್ಟೋ ಚಿತ್ರಮಂದಿರಗಳು ಪರದೆ ಎಳೆದಿವೆ.
ಇತ್ತೀಚೆಗೆ ಮುಚ್ಚಿದ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳು
* ಕಾವೇರಿ ಚಿತ್ರಮಂದಿರ: ಸ್ಯಾಂಕಿ ರಸ್ತೆ ಬಳಿ 1974ರಲ್ಲಿ ಆರಂಭವಾದ 1,100 ಆಸನ ಸಾಮರ್ಥ್ಯದ ಥಿಯೇಟರ್ ಅನ್ನು 2023ರ ಏಪ್ರಿಲ್‌ನಲ್ಲಿ ಮುಚ್ಚಲಾಗಿದೆ. ಅಲ್ಲೊಂದು ವಾಣಿಜ್ಯ ಸಂಕೀರ್ಣ ಎದ್ದು ನಿಂತಿದೆ. ಕನ್ನಡ, ತೆಲುಗು, ತಮಿಳು ಭಾಷೆಯ ಚಿತ್ರಗಳು ಇಲ್ಲಿ ತೆರೆ ಕಾಣುತ್ತಿದ್ದವು.
* ಕಪಾಲಿ ಚಿತ್ರಮಂದಿರ: ಕೆ.ಜಿ. ರಸ್ತೆಯಲ್ಲಿದ್ದ ಈ ಚಿತ್ರಮಂದಿರವು ಬಿಗ್ ಬಜೆಟ್ ಚಿತ್ರಗಳ ಮುಖ್ಯ ಚಿತ್ರಮಂದಿರವಾಗಿರುತ್ತಿತ್ತು. ಕಪಾಲಿಯಲ್ಲಿ ಬಿಡುಗಡೆಯಾದರೆ ಆ ಚಿತ್ರಕ್ಕೆ ಒಂದು ಘನತೆ ಎಂಬ ಮಾತುಗಳಿದ್ದವು. 1968ರಲ್ಲಿ ಆರಂಭವಾಗಿದ್ದ ಈ ಚಿತ್ರಮಂದಿರ ಏಷ್ಯಾದಲ್ಲೇ ದೊಡ್ಡ ಸಿಂಗಲ್ ಸ್ಕ್ರೀನ್‌ಗಳಲ್ಲಿ ಒಂದಾಗಿತ್ತು. ಕಳೆದ ವರ್ಷ ಮುಚ್ಚಲ್ಪಟ್ಟಿತು. ಈ ಚಿತ್ರಮಂದಿರವಿದ್ದ ಜಾಗದಲ್ಲಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಡಾಲ್ಬಿ ಸ್ಕ್ರೀನ್ ಇರುವ ಎಎಂವಿ ಮಲ್ಟಿಪ್ಲೆಕ್ಸ್ ತಲೆ ಎತ್ತಿದೆ.
* ಚಾಮರಾಜಪೇಟೆಯ ಉಮಾ, ವಿಠ್ಠಲ್ ಮಲ್ಯ ರಸ್ತೆಯ ಪಲ್ಲವಿ, ರಾಜೀವ್ ಗಾಂಧಿ ಸರ್ಕಲ್‌ನ ನಟರಾಜ್, ಸಾಗರ್, ಕೃಷ್ಣ, ಸಂಗಮ್, ಸ್ಟೇಟ್ಸ್, ಮೂವಿ ಲ್ಯಾಂಡ್, ತುಳಸಿ, ಪುಟ್ಟಣ್ಣ ಚಿತ್ರಮಂದಿರಗಳು ಕಳೆದ ಕೆಲ ವರ್ಷಗಳಲ್ಲಿ ಸ್ಥಗಿತಗೊಂಡು ವಾಣಿಜ್ಯ ಮಳಿಗೆಗಳಿಗೆ ಜಾಗ ನೀಡಿವೆ.
ವರದಿಗಳ ಪ್ರಕಾರ, 1980ರ ದಶಕದಲ್ಲಿ ಬೆಂಗಳೂರಲ್ಲಿ ಸುಮಾರು 120ರಷ್ಟಿದ್ದ ಚಿತ್ರಮಂದಿರಗಳ ಪೈಕಿ ಅನೇಕವು ಮುಚ್ಚಲ್ಪಟ್ಟಿವೆ. ಲಿಡೋ, ಗ್ಯಾಲಕ್ಸಿ, ಇಂಪೀರಿಯಲ್, ಬ್ಲೂ ಮೂನ್, ಬ್ಲೂ ಡೈಮಂಡ್, ಶಿವಾಜಿ, ಭಾರತ, ಮಿನರ್ವಾ, ವಿಜಯಲಕ್ಷ್ಮಿ, ಶಾಂತಿ, ನ್ಯೂ ಓಪೆರಾ, ನ್ಯೂ ಇಂಪೀರಿಯಲ್, ಶಂಕರ್ ನಾಗ್ ಹೀಗೆ ಪಟ್ಟಿ ಬಹಳ ದೊಡ್ಡದಿದೆ. ಕೆ.ಜಿ. ರಸ್ತೆಯ ಸುತ್ತಮುತ್ತ ಕೆಂಪೇಗೌಡ, ಹಿಮಾಲಯ, ಕಲ್ಪನಾ, ಅಲಂಕಾರ, ಪ್ರಸಾದ್/ಪ್ರಭಾತ್, ಗೀತಾ, ತ್ರಿಭುವನ್, ಕೈಲಾಶ್ ಇತ್ಯಾದಿ ಚಿತ್ರಮಂದಿರಗಳು ಶಾಪಿಂಗ್ ಕಾಂಪ್ಲೆಕ್ಸ್‌ಗಳಿಗೆ ಜಾಗ ನೀಡಿ ಅಸ್ತಂಗತವಾಗಿವೆ.
ಏಕಪರದೆಯ ಚಿತ್ರಮಂದಿರಗಳ ಅವಸಾನಕ್ಕೆ ಏನು ಕಾರಣ?
ಚಿತ್ರರಂಗದ ಬೆಳವಣಿಗೆಯ ಉದ್ದಕ್ಕೂ ಸಾಕ್ಷಿಯಾದ ಏಕಪರದೆಯ ಚಿತ್ರಮಂದಿರಗಳು ಬಾಗಿಲು ಮುಚ್ಚಲು ಕಾರಣವೇನೆಂದು ಹುಡುಕುತ್ತಾ ಹೋದರೆ ಆಧುನಿಕತೆಯ ಬಿರುಗಾಳಿ ಕಣ್ಣಿಗೆ ರಾಚುತ್ತದೆ. ಹೊಸ ತಂತ್ರಜ್ಞಾನ, ಚಿತ್ರಮಂದಿರಗಳಲ್ಲಾದ ಬದಲಾವಣೆ, ಏಕ ಪರದೆಯ ಜಾಗದಲ್ಲಿ ಮಲ್ಟಿಫ್ಲೆಕ್ಸ್‌ಗಳು, ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರಲು ಕಾರಣವಾದ ಸುಸಜ್ಜಿತ ಸೀಟುಗಳು, ಹವಾ ನಿಯಂತ್ರಿತ ಐಶಾರಾಮಿ ವ್ಯವಸ್ಥೆ, ಮಾಲ್‌ಗಳಲ್ಲೇ ಸಿನಿಮಾ ನೋಡುವ ಅವಕಾಶ ಪ್ರೇಕ್ಷಕರನ್ನು ಹಳೆಯ ಏಕಪರದೆ ಚಿತ್ರಮಂದಿರಗಳಿಂದ ಮಲ್ಟಿಪ್ಲೆಕ್ಸ್ ಎಡೆಗೆ ಸೆಳೆದಿದೆ. ಇಷ್ಟು ಸೌಲಭ್ಯ ಕೊಟ್ಟ ಮೇಲೆ ಟಿಕೆಟ್ ದರ ಹೆಚ್ಚಾದರೂ ಪ್ರೇಕ್ಷಕರು ಮುನ್ನುಗ್ಗಿ ನೋಡುತ್ತಾರೆ. ಆರ್ಥಿಕವಾಗಿಯೂ ಸಹ ಇದು ಲಾಭದಾಯಕವಾಗಿರುವುದು ಚಿತ್ರಮಂದಿರಗಳ ಅವಸಾನಕ್ಕೆ ಕಾರಣವಾಗಿದೆ.
ಇನ್ನೂ ಏಕಪರದೆಯ ಚಿತ್ರಮಂದಿರಗಳಲ್ಲಿ ಪಾರ್ಕಿಂಗ್ ಕೊರತೆ, ಶುಚಿಯಾದ ಆಹಾರ ಕೊರತೆ, ಕುಟುಂಬ ಸಮೇತ ಬರಲು ಶೌಚಾಲಯ ಕೊರತೆಗಳು ಇದಕ್ಕೆ ಕಾರಣ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಏಕಪರದೆ ಚಿತ್ರಮಂದಿರಗಳು ತಾಂತ್ರಿಕವಾಗಿ ಅಪ್‌ಡೇಟ್ ಆಗಿದ್ದರೂ ಗುಣಮಟ್ಟದಲ್ಲಿ ಮಲ್ಟಿಪ್ಲೆಕ್ಸ್‌ಗಳ ಮಟ್ಟಕ್ಕೆ ತಲುಪಿಲ್ಲ ಎಂಬುದು ಅಷ್ಠೆ ಸತ್ಯ..
ಮಲ್ಟಿಪ್ಲೆಕ್ಸ್ ಅಬ್ಬರದ ನಡುವೆಯೂ ಕೆಲ ಚಿತ್ರಮಂದಿರಗಳು ಈಗಲೂ ಜನರನ್ನು ರಂಜಿಸುತ್ತಿವೆ.
* ರಾಜಾಜಿನಗರದ ನವರಂಗ್: ಬೆಂಗಳೂರಿನ ಹಳೆಯ ಮತ್ತು ಜನಪ್ರಿಯ ಚಿತ್ರಮಂದಿರಗಳಲ್ಲಿ ಒಂದಾಗಿದ್ದು, ಕಡಿಮೆ ಟಿಕೆಟ್ ದರದಲ್ಲಿ ಜನರನ್ನು ರಂಜಿಸುತ್ತಿದೆ. ಪ್ರೇಕ್ಷಕರಿಗೆ ಸಾಕಷ್ಟು ಪರಿಚಿತವಿರುವ ಈ ಥಿಯೇಟರ್ ಸಣ್ಣಪುಟ್ಟ ತಂತ್ರಜ್ಞಾನ ಬದಲಾವಣೆಗಳೊಂದಿಗೆ ಮುಂದುವರಿಯುತ್ತಿದೆ.
* ತಾವರೆಕೆರೆಯ ಲಕ್ಷ್ಮಿ: RGB 4K 3D ಸ್ಕ್ರೀನ್ ಅಪ್ಡೇಟ್‌ನೊಂದಿಗೆ ಈ ಥಿಯೇಟರ್ ಈಗಲೂ ಪ್ರೇಕ್ಷಕರನ್ನು ರಂಜಿಸುತ್ತಿದೆ. ಪೇಯ್ಡ್ ಪಾರ್ಕಿಂಗ್ ಮತ್ತು ಫುಡ್ ಸೌಲಭ್ಯ ಇರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರವಾಗಿದೆ.
* ಜಾಲಹಳ್ಳಿಯ ಎಚ್‌ಎಂಟಿ, ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರಗಳು 4 ಅಪ್‌ಡೇಟ್ ಮೂಲಕ ಚಿತ್ರ ಪ್ರದರ್ಶನ ಮಾಡುತ್ತಿವೆ. ಸಂತೋಷ, ಕಮಲಾಕ್ಷಿ, ಗೋಪಾಲ, ಸಂಪಿಗೆ ಇತ್ಯಾದಿ ಏಕಪರದೆಗಳ ಚಿತ್ರಮಂದಿರಗಳು ಇವೆ.
ಚಿತ್ರಮಂದಿರದ ಮಾಲೀಕರು ಹೇಳೋದೇನು?
‘ಸ್ಟಾರ್ ಇಲ್ಲದ ಸಿನಿಮಾಗಳಿಂದ ಶುಕ್ರವಾರ, ಶನಿವಾರ, ಭಾನುವಾರ ತಲಾ ಶೋಗೆ ಸರಾಸರಿ ₹2,000 ಸಂಗ್ರಹವಾಗುತ್ತದೆ. ಒಂದು ಶೋಗೆ ₹65,000 ಸಂಗ್ರಹವಾಗಬೇಕು. ಚಿತ್ರಮಂದಿರದ ಜಾಗದ ಬಾಡಿಗೆ, ಕಾರ್ಮಿಕರ ವೇತನ, ಕರೆಂಟ್ ಬಿಲ್ ಮೊದಲಾದವುಗಳನ್ನು ಪರಿಗಣಿಸಿದರೆ ಇವತ್ತು ಚಿತ್ರಮಂದಿರ ನಡೆಸುವುದು ಬಹಳ ಕಷ್ಟದ ಕೆಲಸ. ಬಹುತೇಕ ಎಲ್ಲ ಚಿತ್ರಮಂದಿರಗಳು ಫ್ಯಾಮಿಲಿ ಆಡಿಯನ್ಸ್‌ಗೆ ತಕ್ಕಂತೆ ಸುವ್ಯವಸ್ಥಿತವಾಗಿ ಅಪ್‌ಡೇಟ್ ಆಗಿವೆ’ ಎಂದು ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದ ಮಾಲೀಕ ಹಾಗೂ ಚಿತ್ರ ನಿರ್ಮಾಪಕರೂ ಆಗಿರುವ ದೇವೇಂದ್ರ ರೆಡ್ಡಿ ಈ ಹಿಂದೆ ಪ್ರಜಾವಾಣಿಗ ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.