ADVERTISEMENT

ಸಂಗೀತದ ಒಲವಿನಲ್ಲಿ ಬಿಂದು ಪಯಣ

ರೇಷ್ಮಾ
Published 5 ಜೂನ್ 2020, 4:02 IST
Last Updated 5 ಜೂನ್ 2020, 4:02 IST
ಬಿಂದು ಮಾಲಿನಿ
ಬಿಂದು ಮಾಲಿನಿ   

‘ಸಂಗೀತ ಜಾದೂ ಇದ್ದಂತೆ. ಯಾರನ್ನೂ ಬೇಕಾದರೂ ಮೋಡಿ ಮಾಡುವ ಶಕ್ತಿ ಸಂಗೀತಕ್ಕಿದೆ. ಇದು ಜೀರೊ ವೇಸ್ಟ್‌ ಉತ್ಪನ್ನದಂತೆ. ನನ್ನ ಪ್ರಕಾರ ಸಂಗೀತ ಎನ್ನುವುದು ಗೋಡೆಯಿಲ್ಲದ ವಿಶ್ವವಿದ್ಯಾಲಯದ ಹಾಗೆ. ಸಂಗೀತದಿಂದ ಕಲಿಯುವುದು ಬೇಕಾದಷ್ಟಿದೆ. ಒಂದು ಹಾಡಿಗೆ ಜೀವನವನ್ನು ಬದಲಿಸುವ ಶಕ್ತಿ ಇದೆ. ಸಂಗೀತ ಎಂದರೆ ಒಂದು ಶಕ್ತಿ ಎನ್ನುತ್ತಾ ಸಂಗೀತ ಮೇಲಿನ ಅಪಾರ ಒಲವನ್ನು ಮಾತಿನಲ್ಲೇ ವ್ಯಕ್ತಪಡಿಸುತ್ತಾರೆ ಗಾಯಕಿ, ಸಂಗೀತ ಸಂಯೋಜಕಿ ಹಾಗೂ ನಿರ್ದೇಶಕಿ ಬಿಂದುಮಾಲಿನಿ ನಾರಾಯಣಸ್ವಾಮಿ.

ಕನ್ನಡದ ನಾತಿಚರಾಮಿ ಚಿತ್ರದ ‘ಭಾವಲೋಕದೊಳಗೆ’ ಹಾಗೂ ‘ಮಾಯಾವಿ ಮನವೆ’ ಹಾಡು ಕೇಳಿದವರು ಇವರ ದನಿಯನ್ನು ಮರೆತಿರಲಿಕ್ಕಿಲ್ಲ. ಅಲ್ಲದೇ ಈ ಹಾಡುಗಳಿಗೆ ರಾಷ್ಟ್ರಪ್ರಶಸ್ತಿ ಹಾಗೂ ಫಿಲ್ಮಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ ಬಿಂದು.

ಚೆನೈ ಮೂಲದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೊದಲು ತಮಿಳು ಸಿನಿಮಾಗಳಿಂದ ಸಂಗೀತ ಪಯಣ ಆರಂಭಿಸಿದ್ದರು. ಕನ್ನಡದ ‘ಹರಿಕಥಾ ಪ್ರಸಂಗ’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕಿ ಎನ್ನಿಸಿಕೊಂಡರು. ತಮಿಳಿನ ‘ಅರುವಿ’ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವ ಜೊತೆಗೆ ಚಿತ್ರದ ಎಲ್ಲಾ ಹಾಡುಗಳನ್ನು ಹಾಡಿದ್ದಾರೆ. ಸದ್ಯ ಕನ್ನಡ ‘ಬ್ರಾಹ್ಮಿ’ ಹಾಗೂ ಇನ್ನೂ ಹೆಸರಿಡದ ತಮಿಳು ಚಿತ್ರವೊಂದಕ್ಕೆ ಮ್ಯೂಸಿಕ್ ಕಂಪೋಸ್‌ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ADVERTISEMENT

ಸಂಗೀತವನ್ನು ಬದುಕಿನ ಭಾಗವನ್ನಾಗಿಸಿಕೊಂಡಿರುವ ಇವರು ಈಗಾಗಲೇ ಐದು ಕರ್ಮಷಿಯಲ್‌ ಸಿನಿಮಾ ಹಾಗೂ 4 ಡಾಕ್ಯುಮೆಂಟರಿ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಒಬ್ಬ ಸಂಗೀತ ನಿರ್ದೇಶಕಿ ಹಾಗೂ ಸಂಯೋಜಕಿಯಾಗಿ ಯಾವ ಪ್ರಕಾರದ ಸಂಗೀತ ನಿಮಗೆ ಇಷ್ಟ ಎಂದರೆ ಅವರು ಹೇಳುವುದು ಹೀಗೆ ‘ನನಗೆ ಸಂಗೀತದ ಇಂತಹದ್ದೇ ಪ್ರಕಾರ ಇಷ್ಟ ಎನ್ನುವುದಕ್ಕಿಂತ ನನ್ನ ಹೃದಯಕ್ಕೆ ತಟ್ಟಿ, ಮನಸ್ಸಿಗೆ ಇಷ್ಟವಾಗುವಂತಹ ಸಂಗೀತದ ಮೇಲೆ ನನಗೆ ಒಲವು ಜಾಸ್ತಿ. ಹಿಂದೂಸ್ತಾನಿ, ಪಾಶ್ಚಾತ್ಯ, ಹಿಪ್‌ಹಾಪ್‌ ಯಾವುದೇ ಇರಲಿ ಅದರ ಮೇಲೆ ಪ್ರೀತಿ ಹುಟ್ಟಬೇಕು. ಅಂತಹ ಸಂಗೀತ ನನಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ.

‘ಸಿನಿ ಕ್ಷೇತ್ರದಲ್ಲಿ ಮಹಿಳಾ ಸಂಗೀತ ಸಂಯೋಜಕಿಯರು ಇರುವುದು ಕಡಿಮೆ ಎನ್ನುವುದು ಸತ್ಯ. ಎಲ್ಲಾ ಕ್ಷೇತ್ರದಲ್ಲಿಯೂ ಇರುವಂತೆ ಇಲ್ಲಿಯೂ ಕಾಲು ಎಳೆಯುವವರಿರುತ್ತಾರೆ, ಪ್ರೋತ್ಸಾಹ ನೀಡುವವರು ಇರುತ್ತಾರೆ. ಆದರೆ ಈಗೀಗ ಅನೇಕ ಹೊಸ ಪ್ರತಿಭೆಗಳು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಪ್ರತಿಭೆ ಇದ್ದೂ, ಅದನ್ನು ಹೇಗೆ ಪ್ರಸ್ತುತ ಪಡಿಸಬೇಕು ಎಂಬುದು ಅರಿವಿದ್ದರೆ ಪ್ರೋತ್ಸಾಹ ಹಾಗೂ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಪ್ರತಿಭೆಗಳನ್ನು ಗುರುತಿಸುವವರು ಇದ್ದೇ ಇರುತ್ತಾರೆ’ ಎನ್ನುತ್ತಾ ಮಹಿಳಾ ಸಂಗೀತ ನಿರ್ದೇಶಕಿಯರ ಸಂಖ್ಯೆ ಹೆಚ್ಚುತ್ತಿರುವುದು ಸಂತಸ ವ್ಯಕ್ತಪಡಿಸುತ್ತಾರೆ.

ರಾಷ್ಟ್ರಪ್ರಶಸ್ತಿ ಪಡೆದ ಸಂಭ್ರಮದ ಬಗ್ಗೆ ಬಿಂದು ಹೇಳುವುದು ಹೀಗೆ ‘ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎನ್ನುವ ನಿರೀಕ್ಷೆಗಿಂತ ಕೆಲಸ ಚೆನ್ನಾಗಿ ಮಾಡಿದ್ದೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು. ನಿರ್ದೇಶಕ ಮಂಸೋರೆ, ಸಿನಿಮಾದ ಚಿತ್ರಕತೆ ಹಾಗೂ ಸಿನಿತಂಡ ಎಲ್ಲರೂ ಸೇರಿ ಒಂದು ಉತ್ತಮ, ಪ್ರಯೋಗಾತ್ಮಕ ಚಿತ್ರವನ್ನು ಹೊರ ತಂದಿದ್ದೇವೆ ಎಂಬುದು ಮನಸ್ಸಿನಲ್ಲಿತ್ತು. ಅದರೊಂದಿಗೆ ಮಾಡಿದ ಕೆಲಸವನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ನಿಜಕ್ಕೂ ಖುಷಿಯ ವಿಚಾರ. ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿಗಳು ಸಿಗುತ್ತವೆ. ಆದರೆ ಒಬ್ಬ ಮಹಿಳಾ ಸಂಗೀತ ಸಂಯೋಜಕಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಇತಿಹಾಸವಾಗಿ ಉಳಿಯುತ್ತದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರಿಂದ ನನ್ನ ಭವಿಷ್ಯ ಮಾತ್ರವಲ್ಲದೇ ಮುಂದೆ ಈ ಕ್ಷೇತ್ರಕ್ಕೆ ಬರುವವರಿಗೂ ಸ್ಫೂರ್ತಿ ಸಿಕ್ಕಂತಾಗಿದೆ. ಇದು ಸಂಗೀತ ಕ್ಷೇತ್ರದ ಹೊಸ ಬದಲಾವಣೆಗೂ ನಾಂದಿಯಾಗಬಹುದು ಎನ್ನಿಸುತ್ತದೆ’ ಎಂದು ತುಂಬು ಮನಸ್ಸಿನಿಂದ ನುಡಿಯುತ್ತಾರೆ.

ಬಿಂದು ಹಾಗೂ ಅವರ ಪತಿ ವಸು ದೀಕ್ಷಿತ್‌ ಸೇರಿ ‘ನಹಿ ಕೋಯಿ ಗಿಲ’ ಎಂಬ ಮ್ಯೂಸಿಕ್ ವಿಡಿಯೊ ಒಂದನ್ನು ಹೊರ ತರುತ್ತಿದ್ದಾರೆ. ಅದರ ಕೆಲಸ ಸಂಪೂರ್ಣವಾಗಿ ಮುಗಿದಿದ್ದು ಅದು ಬಿಡುಗಡೆಗೆ ಸಿದ್ಧವಾಗಿದೆ.

ವಿಶ್ವ ಪರಿಸರ ದಿನದ ಅಂಗವಾಗಿ ತಯಾರಾದ ‘ಕೊರಲ್ ವುಮೆನ್’‌ ಎಂಬ ಡಾಕ್ಯುಮೆಂಟರಿ ಸಿನಿಮಾಕ್ಕೂ ಬಿಂದು ಸಂಗೀತ ನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.