ADVERTISEMENT

ಇಂದಲ್ಲದಿದ್ದರೆ ನಾಳೆ ಜನರಿಗೆ ‘ಮನ್ಮಥುಡು–2’ ಇಷ್ಟವಾಗುತ್ತೆ: ನಾಗಾರ್ಜುನ

ಪೃಥ್ವಿರಾಜ್ ಎಂ ಎಚ್
Published 12 ಆಗಸ್ಟ್ 2019, 9:56 IST
Last Updated 12 ಆಗಸ್ಟ್ 2019, 9:56 IST
‘ಮನ್ಮಥುಡು–2’ ಚಿತ್ರದಲ್ಲಿ ನಾಗಾರ್ಜುನ ಮತ್ತು ರಕೂಲ್ ಪ್ರೀತ್ ಸಿಂಗ್
‘ಮನ್ಮಥುಡು–2’ ಚಿತ್ರದಲ್ಲಿ ನಾಗಾರ್ಜುನ ಮತ್ತು ರಕೂಲ್ ಪ್ರೀತ್ ಸಿಂಗ್   

ಟಾಲಿವುಡ್‌ನಲ್ಲಿ ಕಿಂಗ್ ಎಂದೇ ಕರೆಸಿಕೊಳ್ಳುವ ಅಕ್ಕಿನೇನಿ ನಾಗಾರ್ಜುನ ಆಗಾಗ್ಗೆ ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸುತ್ತಾ ಗಮನ ಸೆಳೆಯುತ್ತಾರೆ. 2002ರಲ್ಲಿ ‘ಮನ್ಮಥುಡು’ ಮೂಲಕ ರಂಜಿಸಿದ್ದ ಅವರು ಈಗ ಅದೇ ಚಿತ್ರದ ಅವತರಣಿಕೆ ‘ಮನ್ಮಥುಡು–2’ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಮನ್ಮಥುಡು ಚಿತ್ರದಲ್ಲಿ ಮಹಿಳೆಯರೆಂದರೆ ಗಾವುದದೂರವಿರುವ ಪಾತ್ರದಲ್ಲಿ ನಾಗಾರ್ಜುನ ನಟಿಸಿದ್ದರು. ಈ ಪಾತ್ರವೇ ಚಿತ್ರದ ಪ್ರಮುಖ ಆಕರ್ಣೆಯಾಗಿತ್ತು. ಇದರ ಜೊತೆಗೆಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಬರೆದ ಸಂಭಾಷಣೆ ಹೆಚ್ಚು ಗಮನ ಸೆಳೆದಿತ್ತು. ಇದಕ್ಕಿಂತಲೂಭಿನ್ನ ಎನಿಸುವ ಕಥೆಯೊಂದಿಗೆ ‘ಮನ್ಮಥುಡು–2’ ತೆರೆಕಂಡಿದೆ.

ರೊಮ್ಯಾಂಟಿಕ್ ಫ್ಯಾಮಿಲ್ ಎಂಟರ್‌ಟೈನರ್ ಎಂಬ ಮುದ್ರೆಯೂ ಚಿತ್ರಕ್ಕೆ ಬಿದ್ದಿದೆ. ಆದರೆ ಮನ್ಮಥುಡುಚಿತ್ರ ಮಾಡಿದಷ್ಟು ಸದ್ದು ಈ ಚಿತ್ರ ಮಾಡಿಲ್ಲ. ಭಿನ್ನ ಎನಿಸುವ ಕಥೆಯಾಗಿರುವುದರಿಂದ ನಾಗುರ್ಜನ ಅವರ ಮೇಲೆ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಹೇಳಿಕೊಳ್ಳುವಷ್ಟು ತೃಪ್ತಿ ಸಿಕ್ಕಿಲ್ಲ ಎಂಬ ಮಾತುಗಳೂ ಹರಿದಾಡುತ್ತಿವೆ.

ADVERTISEMENT

ಭಾನುವಾರ ಇದೇ ವಿಷಯದ ಬಗ್ಗೆ ಮಾತನಾಡಲು ಹೈದಾರಾಬಾದ್‌ನಲ್ಲಿ ಪತ್ರಿಕಾಗೋಷ್ಠಿಕರೆದಿದ್ದ ನಾಗರ್ಜುನ ‘ಯುವ ಸಮುದಾಯದ ಆಲೋಚನೆಗಳು ಹೇಗಿರುತ್ತವೆ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತೇನೆ. ಏನಾದರೂ ಹೊಸದಾಗಿ ಹೇಳಬೇಕು ಎಂಬ ಭಾವನೆ ನನ್ನದು. ಹೀಗಾಗಿ ಇಂತಹ ಭಿನ್ನ ಸಿನಿಮಾ ಮಾಡಿದ್ದೇನೆ’ ಎಂದು ಹೇಳಿದರು.

‘ನನ್ನ ವೃತ್ತಿ ಜೀವನದಲ್ಲಿ ‘ಅನ್ನಮಯ್ಯ’ಚಿತ್ರ ಮೈಲುಗಲ್ಲು. ಆದರೆ ಬಿಡುಗಡೆಯಾದ 9ನೇ ದಿನಕ್ಕೆ ಚಿತ್ರವನ್ನು ಥಿಯೇಟರ್‌ಗಳಿಂದ ತೆಗೆಯಲು ನಿರ್ಧರಿಸಲಾಗಿತ್ತು. ಆದರೆ 11 ದಿನಕ್ಕೆ ಚಿತ್ರ ಮಂದಿರಗಳು ಭರ್ತಿಯಾಗಿದ್ದವು. ಈಗ ಮನ್ಮಥುಡು–2 ಚಿತ್ರಕ್ಕೂ ಪ್ರೇಕ್ಷಕರಿಂದ ನಿರೀಕ್ಷಿಸಿದ ಮಟ್ಟಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲಎಂದು ನಿರ್ದೇಶಕ ವಿಜಯ್ ಭಾಸ್ಕರ್‌ ಆಂತಕ ವ್ಯಕ್ತಪಡಿಸಿದ್ದಾರೆ. ಹೊಸ ಬಗೆಯ ಕಥೆಗಳು ಬಂದಾಗ ಪ್ರೇಕ್ಷಕರಿಗೆ ಹತ್ತಿರವಾಗಲು ಸಮಯ ಬೇಕಾಗುತ್ತದೆ’ ಎಂದರು.

‘ನನ್ನನ್ನು ನಾನು ಹೊಸದಾಗಿ ತೋರಿಸಿಕೊಳ್ಳುವುದಕ್ಕೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಇಂತಹ ಪ್ರಯೋಗಗಳಿಗೆ ಆಗಾಗ್ಗೆ ಒಗ್ಗಿಕೊಂಡಿರುವುದರಿಂದಲೇ ಇಷ್ಟು ದಿನ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗಿದೆ. ಚಿತ್ರದ ನಾಯಕನಟನಾಗಿ, ನಿರ್ಮಾಪಕನಾಗಿ ನನಗೆ ತೃಪ್ತಿ ಇದೆ’ ಎಂದರು.

ಕಥೆ ಏನು?

ಮದುವೆ ಎಂದರೆ ಭಯ ಬೀಳುವ ಮಧ್ಯವಯಸ್ಕ ವ್ಯಕ್ತಿ. ಯೌವನದಲ್ಲಿವಿಫಲ ಪ್ರೀತಿಗೆ ಬಲಿಯಾಗಿ ಮನಸ್ಸಿಗೆ ಗಾಯ ಮಾಡಿಕೊಂಡಿರುವ ಆತ, ಮಹಿಳೆಯರೊಂದಿಗೆ ದೀರ್ಘಕಾಲಿಕ ಸಂಬಂಧಗಳನ್ನು ಇಟ್ಟುಕೊಳ್ಳಬಾರದು ಎಂಬ ಆಶಯದೊಂದಿಗೆ ಬದುಕುತ್ತಿರುತ್ತಾನೆ. ಆದರೆ ಮನೆಯವರ ಒತ್ತಡದಿಂದಾಗಿ ಮದುವೆಯಾಗಲು ಒಪ್ಪಿರುವುದಾಗಿ ನಾಟಕವಾಡುತ್ತಾನೆ. ಆದರೆ ಮದುವೆ ಪ್ರಸಂಗ ಆ ವ್ಯಕ್ತಿಯ ಜೀವನದಲ್ಲಿ ನಿರೀಕ್ಷಿಸದ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ. ಆ ಪರಿಣಾಮಗಳೇನು? ಕೊನೆಗೂ ಆತ ಮದುವೆ ಆದನೆ, ಇಲ್ಲವೇ ಎಂಬುದನ್ನು ತೆರೆಯ ಮೇಲೆ ನೋಡಬೇಕು.

ಚಿತ್ರದಲ್ಲಿ ರಕೂಲ್‌ ಪ್ರೀತ್‌ಸಿಂಗ್ ನಾಯಕಿಯಾಗಿ ನಟಿಸಿದ್ದು, ತಮ್ಮ ಬೋಲ್ಡ್‌ ಲುಕ್ ಮತ್ತು ನಟನೆ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಪಂಚಭಾಷಾ ನಟಿ ಲಕ್ಷ್ಮಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವೆನ್ನೆಲ ಕಿಶೋರ್, ರಾವು ರಮೇಶ್‌ ಗಮನ ಸೆಳೆದಿದ್ದಾರೆ. ರಾಹುಲ್ ರವೀಂದ್ರನ್ ಸಂಭಾಷಣೆ ಬರೆದಿದ್ದು, ಚೈತನ್ಯ ಭರದ್ವಾಜ್ ಸಂಗೀತ ನೀಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.