
ಹೈದರಾಬಾದ್: 6 ತಿಂಗಳ ಹಿಂದೆ ಸೈಬರ್ ವಂಚಕರು ತಮ್ಮ ಕುಟುಂಬದ ಓರ್ವ ಸದಸ್ಯರನ್ನು ಎರಡು ದಿನಗಳ ಕಾಲ ‘ಡಿಜಿಟಲ್ ಬಂಧನಕ್ಕೆ’ ಒಳಪಡಿಸಿದ್ದರು ಎಂದು ನಟ ನಾಗಾರ್ಜುನ ಅಕ್ಕಿನೇನಿ ಸೋಮವಾರ ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಜೊತೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನಾಗರ್ಜುನ, ಪೊಲೀಸರ ಮಧ್ಯಪ್ರವೇಶದ ಬಳಿಕ ದುಷ್ಕರ್ಮಿಗಳು ಮಾಯವಾದರು ಎಂದು ಹೇಳಿದರು.
‘ನನ್ನ ಸ್ವಂತ ಮನೆಯಲ್ಲಿ ಸುಮಾರು 6 ತಿಂಗಳ ಹಿಂದೆ ಒಂದು ಘಟನೆ ನಡೆದಿರುವುದು ನನಗೆ ನೆನಪಿದೆ. ನನ್ನ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನು ಎರಡು ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿ ಇಡಲಾಗಿತ್ತು. ವಂಚಕರು ನಮ್ಮನ್ನು ಟ್ರ್ಯಾಪ್ ಮಾಡಿ, ನಮ್ಮ ದೌರ್ಬಲ್ಯಗಳನ್ನು ಗುರುತಿಸಿ ನಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಾರೆ’ ಎಂದರು
ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ ಬಳಿಕ ಘಟನೆ ಇತ್ಯರ್ಥಗೊಂಡಿತು. ಹಾಗಾಗಿ, ಯಾವುದೇ ದೂರು ದಾಖಲಿಸಿಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.
ಪೈರೇಟೆಡ್ ಚಲನಚಿತ್ರಗಳನ್ನು ಪ್ರದರ್ಶಿಸುವ ವೆಬ್‌ಸೈಟ್‌ಗಳನ್ನು ನಡೆಸುತ್ತಿರುವ ಎಮ್ಮಡಿ ರವಿ ಎಂಬಾತನ ಬಂಧನದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದರು.
‘ವಂಚನೆಯ ವೆಬ್‌ಸೈಟ್‌ಗಳ ಬಗ್ಗೆ ಜನರು ಎಚ್ಚರದಿಂದಿರಬೇಕು. ತೆಲಂಗಾಣ ಪೊಲೀಸರು ಆರೋಪಿಗಳನ್ನು ಬಂಧಿಸಿ ಉತ್ತಮ ಕೆಲಸ ಮಾಡಿದ್ದಾರೆ. ಈ ರೀತಿ ಪೈರೇಟ್ ಮಾಡುವವರನ್ನು ಬಂಧಿಸುವುದರಿಂದ ತೆಲುಗು ಚಲನಚಿತ್ರೋದ್ಯಮ ಮಾತ್ರವಲ್ಲ, ಇತರೆ ಭಾಷೆಯ ಚಲನಚಿತ್ರಗಳು ಸಹ ಪ್ರಯೋಜನ ಪಡೆಯುತ್ತವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.