ನಾಗಾರ್ಜುನ ಅಕ್ಕಿನೇನಿ ( ಸಂಗ್ರಹ ಚಿತ್ರ)
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಡೆದ ‘ಮನ್ ಕಿ ಬಾತ್‘ 117ನೇ ಸಂಚಿಕೆಯಲ್ಲಿ ತಮ್ಮ ತಂದೆ, ನಟ ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‌ಆರ್) ಅವರ ಸಿನಿ ಬದುಕಿನ ಪಯಣದ ಕುರಿತು ವಿಡಿಯೊ ಹಂಚಿಕೊಂಡು ಸ್ಮರಿಸಿದ್ದಕ್ಕಾಗಿ ನಟ ನಾಗಾರ್ಜುನ ಅವರು ಧನ್ಯವಾದ ಅರ್ಪಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಾಗಾರ್ಜುನ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಕಿನೇನಿ ನಾಗೇಶ್ವರ ರಾವ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅವರು ಅಭಿನಯಿಸಿರುವ ಸಿನಿಮಾಗಳ ದೃಶ್ಯಗಳನ್ನು ಹಂಚಿಕೊಂಡು 'ಭಾರತೀಯ ಸಂಪ್ರದಾಯ ಮತ್ತು ಮೌಲ್ಯಗಳನ್ನು ಸುಂದರವಾಗಿ ತಮ್ಮ ಸಿನಿಮಾಗಳಲ್ಲಿ ಚಿತ್ರಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಮಹತ್ವದ್ದು ಎಂದು ಮೆಚ್ಚುಗೆ' ವ್ಯಕ್ತಪಡಿಸಿದ್ದರು ಎಂದು ನಟ ನಾಗಾರ್ಜುನ ತಿಳಿಸಿದ್ದಾರೆ.
'ಭಾರತೀಯ ಚಿತ್ರರಂಗಕ್ಕೆ ಎಎನ್‌ಆರ್ ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾದದ್ದು, ಅವರಿಗೆ ಸಿಕ್ಕ ಈ ಮನ್ನಣೆಯು ಅವರ ಅಭಿಮಾನಿಗಳಿಗೆ ಹಾಗೂ ನಮ್ಮ ಕುಟುಂಬಕ್ಕೆ ಅಮೂಲ್ಯವಾದದ್ದು' ಎಂದೂ ನಾಗಾರ್ಜುನ ಹೇಳಿದ್ದಾರೆ.
2024ರ ತಮ್ಮ ಕೊನೆಯ ಮನ್ ಕಿ ಬಾತ್ ಭಾಷಣದಲ್ಲಿ ಮೋದಿ ಅವರು, ಎಎನ್‌ಆರ್ ಜತೆಗೆ, ರಾಜ್ ಕಪೂರ್, ಮೊಹಮ್ಮದ್ ರಫಿ ಮತ್ತು ತಪನ್ ಸಿನ್ಹಾ ನೆಪಿಸಿಕೊಂಡರು.
ನಾಗೇಶ್ವರ ರಾವ್ ಅವರು ತಮ್ಮ ಏಳು ದಶಕಗಳ ವೃತ್ತಿಜೀವನದಲ್ಲಿ 'ವಿಪ್ರ ನಾರಾಯಣ', 'ತೆನಾಲಿ ಕೃಷ್ಣ', 'ಶ್ರೀರಾಮದಾಸು', 'ಲೈಲಾಮಜ್ನು', ಮತ್ತು 'ಬಾಲರಾಜು' ಮುಂತಾದ ವೈವಿಧ್ಯಮಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.