
ಬೆಂಗಳೂರು: ರಮೇಶ್ ಕಾಮತ್ ನಿರ್ದೇಶನದ, ಕಿರಣ್ಮಯಿ ಕಾಮತ್ ನಿರ್ಮಾಣದ ಕೊಂಕಣಿ ಸಿನಿಮಾ ‘ನಗ್ನಸತ್ಯ’ ಜ.26ರಂದು ಪ್ರದರ್ಶನಗೊಳ್ಳಲಿದೆ.
‘ಬೆಂಗಳೂರಿನ ಸೌತ್ ಎಂಡ್ ವೃತ್ತದ ಸಮೀಪವಿರುವ ಪೈ ವಿಸ್ತಾ ಕನ್ವೆನ್ಷನ್ ಹಾಲ್‌ನಲ್ಲಿ ಸಂಜೆ 5ರಿಂದ ಸಿನಿಮಾ ಪ್ರದರ್ಶನಗೊಳ್ಳಲಿದ್ದು, ಪ್ರವೇಶ ಉಚಿತವಾಗಿರಲಿದೆ’ ಎಂದು ರಮೇಶ್ ಕಾಮತ್ ತಿಳಿಸಿದ್ದಾರೆ.
‘ಇದೊಂದು ಸಾಮಾಜಿಕ ಕೌಟುಂಬಿಕ ಸಿನಿಮಾವಾಗಿದೆ. ಇದೇ ಮೊದಲ ಬಾರಿಗೆ ಮೂರು ಕೊಂಕಣಿ ಭಾಷೆಯ ವಿಧಗಳನ್ನು ಇಲ್ಲಿ ಕಾಣಬಹುದು. ಮಧ್ಯಮ ವರ್ಗಕ್ಕೆ ಸೇರಿದ ಮಹಿಳೆಯೊಬ್ಬಳು ಪ್ರಬಲ ವ್ಯಕ್ತಿಯೊಬ್ಬನಿಂದ ಮೋಸಕ್ಕೆ ಒಳಗಾಗುತ್ತಾಳೆ. ಆಕೆ ನ್ಯಾಯ ಸಿಗದೆ ಹೆಣ್ಣು ಮಗುವಿಗೆ ಜನನ ನೀಡಿ ನಿಧನಳಾಗುತ್ತಾಳೆ. ಪತ್ರಕರ್ತೆಯಾಗುವ ಆಕೆಯ ಮಗಳು ಇಪ್ಪತ್ತು ವರ್ಷದ ಬಳಿಕ ತಾಯಿಯ ಸಾವಿನ ಪ್ರಕರಣವನ್ನು ಭೇದಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದೇ ಚಿತ್ರದ ಕಥಾಹಂದರ. ಸಿನಿಮಾದಲ್ಲಿ ಆದ್ಯಾ ನಾಯಕ್ ಮುಖ್ಯ ಭೂಮಿಕೆಯಲ್ಲಿದ್ದು, ಬಹುಭಾಷಾ ನಟ ಗೋಪಿನಾಥ್ ಭಟ್, ಗ್ರೀಷ್ಮಾ ಪ್ರಭು, ಕರ್ನಲ್ ಅಶೋಕ್ ಕಿಣಿ, ದಯಾನಂದ ಪೈ, ಬಿ.ವಿ.ಗಣೇಶ್ ಪ್ರಭು, ಆನಂದ್ ನಗರ್ಕರ್ ಮುಂತಾದವರು ತಾರಾಬಳಗದಲ್ಲಿದ್ದಾರೆ’ ಎಂದು ರಮೇಶ್ ಕಾಮತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.