ADVERTISEMENT

‘ನಮ್‌ ನಾಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 9:55 IST
Last Updated 12 ಡಿಸೆಂಬರ್ 2021, 9:55 IST
‘ನಮ್‌ ನಾಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಸಚಿವ ಎಸ್‌.ಟಿ. ಸೋಮಶೇಖರ್‌, ಹೇಮಂತ್‌ ಹೆಗಡೆ, ಟಿ.ಎನ್‌. ಸೀತಾರಾಂ, ಶ್ರೇಯಾ ವಸಂತ್‌, ಶ್ರುತಿ ನಂದೀಶ್‌ ಇದ್ದರು
‘ನಮ್‌ ನಾಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಸಚಿವ ಎಸ್‌.ಟಿ. ಸೋಮಶೇಖರ್‌, ಹೇಮಂತ್‌ ಹೆಗಡೆ, ಟಿ.ಎನ್‌. ಸೀತಾರಾಂ, ಶ್ರೇಯಾ ವಸಂತ್‌, ಶ್ರುತಿ ನಂದೀಶ್‌ ಇದ್ದರು   

ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ನಮ್ ನಾಣಿ ಮದ್ವೆ ಪ್ರಸಂಗ’ಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿತು. ಸಚಿವ ಎಸ್‌.ಟಿ. ಸೋಮಶೇಖರ್‌ ಕ್ಯಾಮೆರಾಕ್ಕೆ ಚಾಲನೆ ನೀಡಿದರು.

ಚಿತ್ರಕ್ಕೆ ಹೇಮಂತ್‌ ಹೆಗಡೆ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಇದೆ.ನಿರ್ದೇಶಕ ಟಿ.ಎನ್.ಸೀತಾರಾಂ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದರು.

ಹೇಮಂತ್‌ ಹೆಗಡೆ ಮಾತನಾಡಿ, ‘ಎರಡು ವರ್ಷಗಳ ನಂತರ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಮಲೆನಾಡು ಹುಡುಗನ ಕಥೆ ಇದು. ಮಲೆನಾಡಿನಲ್ಲಿ ಕೃಷಿ ಮಾಡುವ ಹುಡುಗರಿಗೆ ಹುಡುಗಿ ಸಿಗುವುದಿಲ್ಲ. ಜ್ವಲಂತ ಸಮಸ್ಯೆಯೊಂದನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ನನ್ನ ಸಹೋದರ ಸಂಬಂಧಿ, ಮದುವೆಯಾಗುವುದಕ್ಕೆ ಕಾಶ್ಮೀರದವರೆಗೂ ಹೋಗಿ ಬಂದ. ಸಾಮಾಜಿಕ ಸಂದೇಶವಿರುವ ಸುಂದರ ಚಿತ್ರ ಇದಾಗಲಿದೆ ಎಂಬ ನಂಬಿಕೆ ನನಗಿದೆ. ಜನ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ’ ಎಂದರು.

ADVERTISEMENT

‘ನನ್ನ ಮಾಯಾಮೃಗ ಧಾರಾವಾಹಿಯಲ್ಲಿ ಹೇಮಂತ್ ಅವರಿಂದ ಒಂದು ಪಾತ್ರ ಮಾಡಿಸಿದ್ದೆ. ಆ ನಂತರ ಅವರ ಪಾತ್ರ ಬಹಳ ಜನಪ್ರಿಯವಾಯಿತು. ‘ಮತದಾನ’ ಚಿತ್ರ ಮಾಡುವಾಗ ನನಗೆ ಸೌಮ್ಯ ಮುಖದ ಹೀರೋ ಬೇಕಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು ಹೇಮಂತ್ ಅವರನ್ನು. ಮಾಯಾಮೃಗದಲ್ಲಿ ಹೇಮಂತ್ ಪಾತ್ರ ಮದುವೆಗಾಗಿ ಬಹಳ ಕಷ್ಟಪಡುತ್ತದೆ. ಮತದಾನದಲ್ಲಿ ಮದುವೆಯೇ ಆಗುವುದು. ಇದರಲ್ಲೂ ಮದುವೆಗಾಗಿ ಕಷ್ಟಪಡುವ ಪಾತ್ರ ಎಂದು ಕೇಳಿದ್ದೇನೆ. ನಟನೆ ಮಾಡುವಾಗ ದುರಂತ ಪಾತ್ರಗಳನ್ನು ಮಾಡಿದರೂ, ನಿರ್ದೇಶನ ಮಾಡುವಾಗ ಹಾಸ್ಯಮಯ ಚಿತ್ರಗಳನ್ನೇ ಮಾಡುತ್ತಾರೆ. ಜನರನ್ನು ನಗಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ ಹೇಮಂತ್. ನಗು ಮತ್ತು ವಿಷಾದದ ನಡುವೆ ನಾಣಿಯ ಮದುವೆ ಮಾಡಿಸುವುದಕ್ಕೆ ಅವರು ಹೊರಟಿದ್ದಾರೆ’ ಎಂದರು ಸೀತಾರಾಂ.

ಹೇಮಂತ್ ಹೆಗಡೆ ಅವರಿಗೆ ನಾಯಕಿಯರಾಗಿ ಶ್ರೇಯಾ ವಸಂತ್ ಮತ್ತು ಶ್ರುತಿ ನಂದೀಶ್ ಇದ್ದಾರೆ. ರಾಜೇಶ್ ನಟರಂಗ, ಶರತ್ ಲೋಹಿತಾಶ್ವ, ನಾರಾಯಣಸ್ವಾಮಿ ಮತ್ತು ರಿತೇಶ್ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜನವರಿ 15ರ ನಂತರ ಶಿರಸಿ ಸುತ್ತಮುತ್ತ ಒಂದೇ ಹಂತದ 30 ದಿನಗಳ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.