ADVERTISEMENT

6 ವರ್ಷದ ಹಿಂದೆಯೇ ಮದುವೆಯಾಗಿದ್ದರು ನಯನತಾರಾ-ವಿಘ್ನೇಶ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2022, 5:22 IST
Last Updated 17 ಅಕ್ಟೋಬರ್ 2022, 5:22 IST
ನಯನತಾರಾ–ವಿಘ್ನೇಶ್‌
ನಯನತಾರಾ–ವಿಘ್ನೇಶ್‌    

ನಯನತಾರಾ–ವಿಘ್ನೇಶ್‌ ದಂಪತಿಗೆ ಬಾಡಿಗೆ ತಾಯ್ತನದಿಂದ ಜನಿಸಿದ ಮಕ್ಕಳ ವಿವಾದಕ್ಕೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಇಬ್ಬರೂ 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎಂಬ ಅಚ್ಚರಿಯ ಮಾಹಿತಿ ಅವರು ಆರೋಗ್ಯ ಇಲಾಖೆಗೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಬಹಿರಂಗಗೊಂಡಿದೆ.

ಕಳೆದ ಭಾನುವಾರ ನಯನತಾರಾ ಹಾಗೂ ವಿಘ್ನೇಶ್‌ ದಂಪತಿ ಬಾಡಿಗೆ ತಾಯ್ತನದಿಂದ ಅವಳಿ ಮಕ್ಕಳನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ ಮದುವೆಯಾಗಿ 4 ತಿಂಗಳಿನೊಳಗೆ ಹೇಗೆ ಇವರು ಮಕ್ಕಳನ್ನು ಪಡೆದರು ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿತ್ತು. ಇದರಿಂದ ಎಚ್ಚೆತ್ತ ತಮಿಳುನಾಡು ಸರ್ಕಾರ ಮಕ್ಕಳನ್ನು ಪಡೆದ ಬಾಡಿಗೆ ತಾಯ್ತನದ ಪ್ರಕ್ರಿಯೆ ಕುರಿತು ಪ್ರಶ್ನೆಗಳನ್ನು ಕೇಳಿ, ವಿಚಾರಣೆ ನಡೆಸುವುದಾಗಿ ಹೇಳಿತ್ತು.

ಇದೀಗ ಈ ದಂಪತಿ ತಮಿಳುನಾಡು ಆರೋಗ್ಯ ಇಲಾಖೆಗೆ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಈ ಇಬ್ಬರು 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್‌ ಮಾಡಿಕೊಂಡಿದ್ದಾರೆ. ಅದರ ದಾಖಲೆಗಳನ್ನೀಗ ಆರೋಗ್ಯ ಇಲಾಖೆಗೆ ಸಲ್ಲಿಸಿದ್ದಾರೆ.

ADVERTISEMENT

ಅ.9ರಂದು ಈ ಜೋಡಿ ಅವಳಿ ಮಕ್ಕಳನ್ನು ಪಡೆದಿರುವುದಾಗಿ ಘೋಷಿಸಿತ್ತು. ಆದರೆ ಜನವರಿಯಿಂದ ಭಾರತದಲ್ಲಿ ಕೆಲವು ವಿಶೇಷ ಸನ್ನಿವೇಶಗಳನ್ನು ಹೊರತುಪಡಿಸಿ ಬಾಡಿಗೆ ತಾಯ್ತನವನ್ನು ಅಕ್ರಮವೆಂದು ಘೋಷಿಸಿಲಾಗಿದೆ. ಹೀಗಾಗಿ ಈ ಜೋಡಿ ಕಾನೂನು ಉಲ್ಲಂಘಿಸಿದ್ದಾರೆಯೇ ಎಂಬ ಚರ್ಚೆ ನಡೆದಿತ್ತು.

ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್‌ ಕೂಡ ದಂಪತಿಯ ಬಾಡಿಗೆ ತಾಯ್ತನ ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಅವರು ಕಾನೂನು ರೀತ್ಯ ಬಾಡಿಗೆ ತಾಯ್ತನ ಪ್ರಕ್ರಿಯೆಗೊಳಗಾಗಿದ್ದಾರಾ ಎಂಬುದನ್ನು ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದರು.

ಬಾಡಿಗೆ ತಾಯ್ತನ ಕಾಯ್ದೆ 2021ರ ಪ್ರಕಾರ ದಂಪತಿ ಮಕ್ಕಳನ್ನು ಪಡೆಯಲು ಮದುವೆಯಾಗಿ ಕನಿಷ್ಠ 5 ವರ್ಷವಾಗಿರಬೇಕು. ಜೊತೆಗೆ ಬಾಡಿಗೆ ತಾಯಿ ದಂಪತಿಯ ಹತ್ತಿರದ ಸಂಬಂಧಿಯಾಗಿರಬೇಕು. ಈ ಬಗ್ಗೆ ನಯನತಾರಾ ಜೋಡಿ ಆರೋಗ್ಯ ಇಲಾಖೆಗೆ ಪ್ರಮಾಣ ಪತ್ರ ನೀಡಿದೆ ಎಂದು ಫ್ರಿಪ್ರೆಸ್‌ ಜರ್ನಲ್‌ ವರದಿ ಮಾಡಿದೆ. ಆದರೆ ವಿಘ್ನೇಶ್‌ ಜೋಡಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.