ಚಿತ್ರರಂಗಕ್ಕೆ ಬರುವ ಬಹುತೇಕರು ‘ಸ್ಟಾರ್’ ಆಗಿ ಬೆಳ್ಳಿತೆರೆಯಲ್ಲಿ ಮಿಂಚಬೇಕೆಂಬ ಕನಸು ಕಟ್ಟಿಕೊಂಡು ಬರುತ್ತಾರೆ. ಆದರೆ ಇದು ಆ ರೀತಿ ಸ್ಟಾರ್‌ಗಳ ಕಥೆಯಲ್ಲ. ಬದಲಿಗೆ ‘ಸ್ಟಾರ್’ ಎಂಬ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟ ಹೊಸಬರ ಕಥೆ!
‘ಪ್ಯಾಟಿ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನಲ್ಲಿ ವಿಜೇತರಾಗಿದ್ದ ಶರತ್ ತಮ್ಮದೇ ನಿರ್ಮಾಣದೊಂದಿಗೆ ‘ಸ್ಟಾರ್’ ಎಂಬ ಸಿನಿಮಾ ಪ್ರಾರಂಭಿಸಿದ್ದಾರೆ. ಚಿತ್ರಕ್ಕೆ ನಾಯಕ ಕೂಡ ಅವರೇ. ಅನು–ವಿಜಯಸೂರ್ಯ ದಂಪತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಮತ್ತೊಂದು ವಿಶೇಷ. ಇತ್ತೇಚೆಗಷ್ಟೇ ಈ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ರವಿ ಸುಬ್ರಮಣ್ಯ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಚಿತ್ರದ ನಾಯಕ ಹಾಗೂ ನಿರ್ಮಾಪಕ ಶರತ್ ಮಾತನಾಡಿ, ‘ನಮ್ಮ ತಂದೆ ಪ್ರಕಾಶ್ ಫೈಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅದೇ ನಾನು ಚಿತ್ರರಂಗಕ್ಕೆ ಬರಲು ಕಾರಣ. ಈ ಹಿಂದೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತನಾಗಿದ್ದೆ. ಜೊತೆಗೆ ರಂಗಭೂಮಿ ಹಿನ್ನಲೆಯೂ ನನಗಿದೆ. ಇದೊಂದು ರೌಡಿಸಂ ಆಧಾರಿತ ಕಥೆ. ಚಿತ್ರದಲ್ಲಿ ಒಂದಷ್ಟು ನೈಜ ಘಟನೆಗಳನ್ನು ಹೇಳಿದರೂ, ಯಾರ ಹೆಸರನ್ನೂ ಸಹ ಬಳಸಿಕೊಳ್ಳುವುದಿಲ್ಲ’ ಎಂದರು.
‘16 ವರ್ಷಗಳ ಹಿಂದೆ ನಾನು ಒಬ್ಬ ಲೈಟ್ ಬಾಯ್ ಆಗಿ ಸಿನಿ ಪಯಣ ಆರಂಭಿಸಿ, ಬರವಣೆಗೆಯಲ್ಲೇ ಹೆಚ್ಚು ಸಮಯ ಕಳೆದೆ. ಈಗ ನಿರ್ದೇಶಕನಾಗುತ್ತಿದ್ದೇನೆ. ಬೆಂಗಳೂರಿನಲ್ಲೇ ಹೆಚ್ಚು ಭಾಗದ ಶೂಟಿಂಗ್ ಮಾಡುತ್ತೇವೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಇದೆ. ಕುತೂಹಲ ಕಾಪಾಡಿಕೊಂಡು ಹೋಗುವ ಕಥೆ’ ಎಂದು ನಿರ್ದೇಶಕ ವಿಜಯಸೂರ್ಯ ಹೇಳಿದರು.
‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದಲ್ಲಿ ನಟಿಸಿದ್ದ ರಜತ ರಕ್ಷಾ ಈ ಚಿತ್ರಕ್ಕೆ ನಾಯಕಿ. ಪ್ರವೀಣ್ ಎಂ ಛಾಯಾಗ್ರಹಣವಿದೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.