ADVERTISEMENT

Kannada Movie Releases | ಈ ವಾರ ತೆರೆಯಲ್ಲಿ ಆರು ಹೊಸ ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 23:28 IST
Last Updated 20 ನವೆಂಬರ್ 2025, 23:28 IST
ಸೋನಲ್‌, ಅಜಯ್‌ ರಾವ್‌
ಸೋನಲ್‌, ಅಜಯ್‌ ರಾವ್‌   

ರಾಧೇಯ

ಕೃಷ್ಣ ಅಜಯ್ ರಾವ್ ನಾಯಕನಾಗಿ ಅಭಿನಯಿಸಿರುವ ಚಿತ್ರವಿದು. ಸೋನಲ್‌ ಮೊಂತೆರೋ ನಾಯಕಿ. ಹಲವಾರು ನಿರ್ದೇಶಕರ ಜತೆ ಕೆಲಸ ಮಾಡಿ ಅನುಭವ ಪಡೆದ ವೇದಗುರು ಮೊದಲ ಸಲ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ದೆಶಕರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

‘ಮಹಾಭಾರತದ ಕರ್ಣನ ಇನ್ನೊಂದು ಹೆಸರು ‘ರಾಧೇಯ’. ಕರ್ಣನ ಸಾಕು ತಾಯಿ ರಾಧಾ ಆಗಿದ್ದರಿಂದ, ಕರ್ಣನಿಗೆ ರಾಧೇಯ ಎಂದೂ ಕರೆಯುತ್ತಾರೆ. ಕರ್ಣನಲ್ಲಿದ್ದ ತ್ಯಾಗದ ಗುಣ ನಾಯಕನಿಗಿದೆ. ಹೀಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ. ಇದೊಂದು ಲವ್ ಜಾನರ್ ಚಿತ್ರವಾದರೂ, ಕಥೆ ಹೇಳಿಕೊಂಡು ಹೋಗಿರುವ ರೀತಿ ಭಿನ್ನವಾಗಿದೆ. ನಾಯಕ ರಾಧೇಯ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ?, ಅದಕ್ಕಾಗಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾನೆ ಎಂಬುದೇ ಕಥೆ. ಜೈಲಿನಲ್ಲಿರುವ ವ್ಯಕ್ತಿಯೊಬ್ಬನ ಸುತ್ತ‌ ಈ ಚಿತ್ರದ ಕಥೆ ಸಾಗಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ ನಿರ್ದೇಶಕ.

ADVERTISEMENT

ಸೋನಲ್‌ ಮೊಂತೆರೋ ಸುದ್ದಿವಾಹಿನಿಯೊಂದರ ಕ್ರೈಮ್ ರಿಪೋರ್ಟರ್ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಯಾನ್ (ಸ್ಯಾಂಡಿ) ಸಂಗೀತ, ರಮ್ಮಿ  ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಅವರ ಸಂಕಲನವಿದೆ. 

ಮಾರುತ

ಎಸ್‌. ನಾರಾಯಣ್ ನಿರ್ದೇಶಿಸಿ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವಿದು. ಕೆ.ಮಂಜು, ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೇಯಸ್ ಮಂಜುಗೆ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ. ಸಾಧು ಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ವಿ. ರವಿಚಂದ್ರನ್ ನಟಿಸಿದ್ದಾರೆ.

‘ಸಾಮಾಜಿಕ ಜಾಲತಾಣ ಬಳಕೆ ಕುರಿತು ಜಾಗೃತಿ ಮೂಡಿಸುವ ಕಮರ್ಷಿಯಲ್‌ ಸಿನಿಮಾ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೋ, ಅದಕ್ಕಿಂತ ಹೆಚ್ಚು ಅಪಾಯವಿದೆ. ಈ ನಿಟ್ಟಿನಲ್ಲಿ ಪೋಷಕರು ಯುವಜನತೆಯ ಮೇಲೆ ಹೆಚ್ಚು ಗಮನ ನೀಡಬೇಕು ಎಂಬ ಸಂದೇಶವಿದೆ’ ಎಂದು ನಿರ್ದೇಶಕ ಎಸ್ ನಾರಾಯಣ್ ಹೇಳಿದ್ದಾರೆ.

ಎಸ್‌.ನಾರಾಯಣ್‌ ಹಾಗೂ ಜೆಸ್ಸಿಗಿಫ್ಟ್‌ ಸಂಗೀತ ನೀಡಿದ್ದು, ಪಿ.ಕೆ.ಹೆಚ್ ದಾಸ್ ಛಾಯಾಚಿತ್ರಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನವಿದೆ.

ಫುಲ್‌ ಮೀಲ್ಸ್‌

ಲಿಖಿತ್‌ ಶೆಟ್ಟಿ ನಿರ್ಮಾಣ ಹಾಗೂ ನಟನೆಯ ಚಿತ್ರವಿದು. ಇವರು ಈ ಹಿಂದೆ ‘ಫ್ಯಾಮಿಲಿ ಪ್ಯಾಕ್‌’, ‘ಸಂಕಷ್ಟಕರ ಗಣಪತಿ’ ಚಿತ್ರಗಳಲ್ಲಿ ನಟಿಸಿದ್ದರು. ಖುಷಿ ರವಿ, ತೇಜಸ್ವಿನಿ ಶರ್ಮಾ ನಾಯಕಿಯರಾಗಿ ನಟಿಸಿರುವ ಈ ಚಿತ್ರವನ್ನು ಎನ್‌. ವಿನಾಯಕ ನಿರ್ದೇಶಿಸಿದ್ದಾರೆ. 

‘ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ. ಲಿಖಿತ್ ಶೆಟ್ಟಿ ವೆಡ್ಡಿಂಗ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ಕಥೆ ಕೂಡ ಫೋಟೋಗ್ರಾಫರ್ ಸುತ್ತ ಸಾಗುತ್ತದೆ‌’ ಎಂದಿದ್ದಾರೆ ನಿರ್ದೇಶಕ. 

‘ನಿರ್ದೇಶಕರು ಕಥೆ ಹೇಳಲು ಬಂದಾಗ, ನಾನು ಮೊದಲು ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಕಥೆ ಒಪ್ಪಿಸಲು ಹೇಳಿದೆ. ಗುರುಕಿರಣ್ ಅವರು ಕಥೆ ಮೆಚ್ಚಿಕೊಂಡು, ಸಂಗೀತವನ್ನು ನೀಡಲು ಒಪ್ಪಿಕೊಂಡರು. ನಾನೇ ಈ ಚಿತ್ರದ ನಿರ್ಮಾಣಕ್ಕೆ ಮುಂದಾದೆ. ವಿಜಯ್ ಚಂಡೂರ್, ಸೂರಜ್ ಲೋಕ್ರೆ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ರವಿಶಂಕರ್ ಗೌಡ, ಕೋಟೆ ಪ್ರಭಾಕರ್ ಹೀಗೆ ಅನೇಕ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ’ ಎಂದು ಲಿಖಿತ್‌ ಶೆಟ್ಟಿ ತಿಳಿಸಿದ್ದಾರೆ. 

ಮನೋಹರ್ ಜೋಶಿ ಛಾಯಾಚಿತ್ರಗ್ರಹಣ ಹಾಗೂ ದೀಪು ಎಸ್‌. ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ದಿ ಟಾಸ್ಕ್‌

ರಾಘು ಶಿವಮೊಗ್ಗ ನಿರ್ದೇಶನದ ಚಿತ್ರ ಬಹುತೇಕ ಹೊಸ ಕಲಾವಿದರಿಂದಲೇ ಕೂಡಿದೆ. ಸಾಗರ್‌ ಹಾಗೂ ಸೂರ್ಯ‌ ಚಿತ್ರದ ನಾಯಕರು.

‘ಹಲವು ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಆ್ಯಕ್ಷನ್‌ ಮಾಸ್‌ ಜತೆಗೆ ಮನರಂಜನೀಯ ಕಥೆ ಹೊಂದಿರುವ ಚಿತ್ರವಿದು’ ಎಂದಿದ್ದಾರೆ ನಿರ್ದೇಶಕ. 

ಲೋಕಪೂಜ್ಯ ಪಿಕ್ಚರ್ ಹೌಸ್‌ ಮೂಲಕ ವಿಜಯ್ ಕುಮಾರ್ ಮತ್ತು ರಾಮಣ್ಣ ನಿರ್ಮಾಣ ಮಾಡಿದ್ದಾರೆ. ರಾಘು ಶಿವಮೊಗ್ಗ ಅವರು ನಿರ್ದೇಶನದ ಜೊತೆಗೆ ಒಂದು ಮುಖ್ಯ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಅರವಿಂದ್ ಕುಪ್ಳಿಕರ್, ಸಂಪತ್ ಮೈತ್ರೇಯ, ಬಿ.ಎಂ.ಗಿರಿರಾಜ್, ಬಾಲಾಜಿ ಮನೋಹರ್ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.

Congratulations ಬ್ರದರ್‌

ಈ ಚಿತ್ರದಲ್ಲಿ ಯುವ ನಟ ರಕ್ಷಿತ್ ನಾಗ್‌ಗೆ ಸಂಜನಾ ದಾಸ್ ಮತ್ತು ಅನುಷಾ ಜೋಡಿಯಾಗಿದ್ದಾರೆ. ಪ್ರತಾಪ್ ಗಂಧರ್ವ ನಿರ್ದೆಶನದ ಚಿತ್ರಕ್ಕೆ ಪ್ರಶಾಂತ್ ಕಲ್ಲೂರ್ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಚಿತ್ರವಿದು.

ಎಂ.ಬಿ.ಧ್ರುವ್‌, ಸೂರಜ್ ಜೋಯಿಸ್ ಸಂಗೀತ, ಗುರುಪ್ರಸಾದ್‌ ಎಂ.ಜಿ. ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ.

‘ಗಿಡುಗ’

‘ಗಿಡುಗ’ ಚಿತ್ರ ಕೂಡ ಈ ವಾರ ತೆರೆ ಕಾಣುತ್ತಿವೆ. 

ರಕ್ಷಿತ್‌ ನಾಗ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.