ADVERTISEMENT

2022 ಜೀವನದಲ್ಲಿ ಬದಲಾವಣೆ ತರಲಿರುವ ವರ್ಷ ಎಂದ ಪ್ರಿಯಾಂಕಾ ಚೋಪ್ರಾ: ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 6:27 IST
Last Updated 22 ಏಪ್ರಿಲ್ 2022, 6:27 IST
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ   

ಭಾರತಕ್ಕೆ ಭೇಟಿ ನೀಡುವುದನ್ನು ಕಾತರದಿಂದ ಎದುರುನೋಡುತ್ತಿರುವುದಾಗಿ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ಮುಂಬರುವ ರಜಾದಿನಗಳು, ತಮ್ಮ ಹುಟ್ಟುಹಬ್ಬದ ಬಗ್ಗೆ ‘ಟ್ರಾವೆಲ್ ಪ್ಲಸ್’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ನನ್ನ ಮೆದುಳು ಪ್ರತಿ ದಿನ ರಾತ್ರಿ ರಜೆ ತೆಗೆದುಕೊಳ್ಳುತ್ತಿದೆ. ಆದರೆ ನಾನು ಭಾರತಕ್ಕೆ ತೆರಳಲು ಕಾತರಳಾಗಿದ್ದೇನೆ ಎಂದು ಹೇಳಿರುವ ಚೋಪ್ರಾ, 2022 ತಮ್ಮ ಪಾಲಿಗೆ ಜೀವನದಲ್ಲಿ ಬದಲಾವಣೆ ತರುವ ವರ್ಷ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಈ ವರ್ಷ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೊನಾಸ್ ದಂಪತಿ ಬಾಡಿಗೆ ತಾಯ್ತನದ (ಸರೊಗಸಿ) ಮೂಲಕ ಮಗು ಪಡೆದಿದ್ದರು.

‘ಮಗುವನ್ನು ಪಡೆದಿರುವುದು ಜೀವನದಲ್ಲಿ ಬದಲಾವಣೆ ತರುವ ಅಂಶ. ಮುಂದಿನ ದಶಕದಲ್ಲಿ ನನ್ನ ಜೀವನ ಎಲ್ಲಿಗೆ ತಲುಪಲಿದೆಯೋ ಗೊತ್ತಿಲ್ಲ. ನಾನು ಮತ್ತು ಪತಿ ಪರಸ್ಪರ ಹುಟ್ಟುಹಬ್ಬಕ್ಕೆ ಯೋಜನೆ ರೂಪಿಸುತ್ತೇವೆ. ನಾನು ಯಾವ ಮನಸ್ಥಿತಿಯಲ್ಲಿ ಇರಬೇಕು ಎಂಬುದು ನನಗೆ ತಿಳಿದಿದೆ. ಭವಿಷ್ಯದ ಬಗ್ಗೆ ತುಂಬಾ ಕಾತರಳಾಗಿದ್ದೇನೆ. ವೃತ್ತಿಯು ನನ್ನನ್ನು ಮುಂದೆ ಎಲ್ಲಿಗೆ ಕೊಂಡೊಯ್ಯುತ್ತದೆ, ಜೀವನವು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬ ಕುತೂಹಲ ನನಗಿದೆ. ಎಲ್ಲವನ್ನೂ ಸ್ವೀಕರಿಸಲು ಮತ್ತು ಬರಮಾಡಿಕೊಳ್ಳಲು ನಾನು ಸಿದ್ಧಳಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡುವುದೇ ಸಂತಸ: ಭಾರತ ಭೇಟಿ ವಿಚಾರವಾಗಿ ಮಾತನಾಡಿದ ಅವರು ಭಾಷೆ, ಸಂಸ್ಕೃತಿ, ಪಾಕಪದ್ಧತಿ ಹಾಗೂ ಇಂಥ ಅನೇಕ ವಿಚಾರಗಳಲ್ಲಿ ವೈವಿಧ್ಯತೆಯೇ ನಮ್ಮ ದೇಶದ ಆಕರ್ಷಣೆ. ಪ್ರತಿ ಬಾರಿ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದಾಗ ಹೊಸದೊಂದು ದೇಶಕ್ಕೆ ಕಾಲಿಟ್ಟಂತೆಯೇ ಭಾಸವಾಗುತ್ತದೆ ಎಂದೂ ಅವರು ಹೇಳಿದ್ದಾರೆ.

‘ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಲಿಖಿತ ಭಾಷೆ, ಆಡು ಭಾಷೆ, ಬಟ್ಟೆ–ಬರೆ, ಆಹಾರ ಹಾಗೂ ರಜಾದಿನಗಳನ್ನು ಹೊಂದಿವೆ. ಹೀಗಾಗಿ ಭಾರತದಲ್ಲಿ ಪ್ರತಿ ಬಾರಿಯೂ ರಾಜ್ಯವೊಂದರ ಗಡಿ ದಾಟಿದಾಗ ಹೊಸದೊಂದು ದೇಶಕ್ಕೆ ತೆರಳಿದ ಅನುಭವವಾಗುತ್ತದೆ. ಪ್ರತಿ ಬಾರಿ ನಾನು ಮನೆಗೆ ಹೋಗುವಾಗ (ಭಾರತಕ್ಕೆ) ಸ್ವಲ್ಪ ರಜೆ ಪಡೆದುಕೊಳ್ಳಲು ಮತ್ತು ಪ್ರಯಾಣಕ್ಕಾಗಿ ಸಮಯ ಮೀಸಲಿರಿಸುವುದುನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.