ಬೆಂಗಳೂರು: 74ನೇ ವಸಂತಕ್ಕೆ ಕಾಲಿಟ್ಟ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಚಿತ್ರರಂಗದ ಕಲಾವಿದರು, ರಾಜಕೀಯ ನಾಯಕರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಪ್ರತಿ ವರ್ಷ ರಜನಿಕಾಂತ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಅವರ ಅಭಿಮಾನಿಗಳು ಈ ಬಾರಿ ಮಧುರೈನ ತಿರುಮಂಗಲಂನಲ್ಲಿರುವ ಅರುಲ್ಮಿಗು ಶ್ರೀ ರಜನಿ ದೇವಸ್ಥಾನದಲ್ಲಿ ರಜನಿಕಾಂತ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
ಪ್ರತಿಮೆಯನ್ನು 1989ರಲ್ಲಿ ಬಿಡುಗಡೆಯಾದ ‘ಮಾಪಿಳ್ಳೈ’ ಚಿತ್ರದ ರಜನಿಕಾಂತ್ ಪಾತ್ರವನ್ನು ಸ್ಫೂರ್ತಿಯಾಗಿ ಪಡೆದುಕೊಂಡು ರಚಿಸಲಾಗಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಚಿತ್ರರಂಗಕ್ಕೆ ರಜನಿಕಾಂತ್ ಅವರ ಕೊಡುಗೆಗಳನ್ನು ಸ್ಮರಿಸಲು ಇದೊಂದು ಸಣ್ಣ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್, ಆರಂಭದಲ್ಲಿ ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕರಾಗಿಯೂ ಕಾರ್ಯನಿರ್ವಹಿಸಿದ್ದರು.
1975ರಲ್ಲಿ ಕೆ. ಬಾಲಚಂದರ್ ಅವರ ತಮಿಳು ಸಿನಿಮಾ ಅಪೂರ್ವ ರಾಗಂಗಳ್ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದರು.
ರಜನಿಕಾಂತ್ ಅವರು ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮ ವಿಭೂಷಣ, ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ, ಪದ್ಮ ಭೂಷಣ ಮತ್ತು ಹಲವಾರು ಪ್ರಶಸ್ತಿಗಳು ಸಂದಿವೆ.
ಸದ್ಯ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಹುಕುಂ(ಜೈಲರ್ 2) ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದ ಚಿತ್ರೀಕರಣದಲ್ಲಿ ರಜನಿ ನಿರತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.