ADVERTISEMENT

ಎಂದೂ ಮರೆಯಾಗದ ಭಾರತದ ಗಾನ ಸುಧೆ ಲತಾ ಮಂಗೇಶ್ಕರ್‌

ಐಎಎನ್ಎಸ್
Published 6 ಫೆಬ್ರುವರಿ 2022, 9:03 IST
Last Updated 6 ಫೆಬ್ರುವರಿ 2022, 9:03 IST
ಲತಾ ಮಂಗೇಶ್ಕರ್‌
ಲತಾ ಮಂಗೇಶ್ಕರ್‌   

ನವದೆಹಲಿ: ಸುದೀರ್ಘ ಎಪ್ಪತ್ತು ವರ್ಷಗಳು ಸಾವಿರಾರು ಗೀತೆಗಳ ಸುಮಧುರ ಗಾಯನದಿಂದ ಕೋಟ್ಯಂತರ ಅಭಿಮಾನಿಗಳ ಅಂತರಾಳದಲ್ಲಿ ನೆಲೆಯಾಗಿರುವ 'ಗಾನ ಕೋಗಿಲೆ' ಲತಾ ಮಂಗೇಶ್ಕರ್‌ ಈಗ ನೆನಪು. ಗಾನ ಸುಧೆಯಿಂದ ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಅವರ ಕಣ್ಣಾಲಿಗಳಲ್ಲಿ ಕಂಬನಿ ತುಂಬುವಂತೆ ಮಾಡಿತ್ತು ಲತಾ ದೀದಿ ಗಾನ. ಹಲವು ಸಾಹಿತಿಗಳ ಸಾಲುಗಳಿಗೆ, ನಾಯಕಿ, ನಟಿಯರ ಭಾವನೆಗಳಿಗೆ ಅವರ ದನಿಯು ಜೀವ ತುಂಬಿ ಕೇಳುಗರ ಮನ ಮುಟ್ಟಿತ್ತು.

ಮರಾಠಿ ಸಿನಿಮಾಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದ ಲತಾ, ನಿರ್ಮಾಪಕಿಯೂ ಹೌದು. ಅವರಿಗೆ ಭಾರತ (ಭಾರತ ರತ್ನ) ಮತ್ತು ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪುರಸ್ಕಾರಗಳು ಸಂದಿವೆ. 92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್‌ ಭಾನುವಾರ ಬೆಳಿಗ್ಗೆ ನಮ್ಮನ್ನು ಅಗಲಿದ್ದಾರೆ. ಕೋವಿಡ್‌ ಸಂಬಂಧಿತ ಕಾರಣಗಳಿಂದಾಗಿ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಜನವರಿ ಎರಡನೇ ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಕುಟುಂಬದವರು ಮತ್ತು ಅಭಿಮಾನಿಗಳು ಪ್ರೀತಿಯಿಂದ 'ಲತಾ ದೀದಿ' ಎಂದೇ ಕರೆಯುತ್ತಿದ್ದರು. ಅವರ ಒಡಹುಟ್ಟಿದವರೆಲ್ಲರೂ ಸಹ ಸಂಗೀತ ಕ್ಷೇತ್ರದಲ್ಲೇ ತೊಡಗಿಸಿಕೊಂಡಿದ್ದಾರೆ. ಗಾಯಕಿ ಮತ್ತು ಸಂಯೋಜಕಿ ಮೀನಾ ಖಾಡಿಲ್ಕರ್‌, ಗಾಯಕಿ ಆಶಾ ಭೋಸ್ಲೇ, ಗಾಯಕಿ ಉಷಾ ಮಂಗೇಶ್ಕರ್‌ ಹಾಗೂ ಸಂಗೀತ ನಿರ್ದೇಶಕ ಹೃದಯಂತ ಮಂಗೇಶ್ಕರ್‌ ಸಂಗೀತ ಕ್ಷೇತ್ರದಲ್ಲೇ ನಿರತಾಗಿದ್ದಾರೆ.

ADVERTISEMENT

ಮರಾಠಿ ಮೂಲದ ಗಾಯಕ, ರಂಗಭೂಮಿ ನಟ ಪಂಡಿತ್‌ ದೀನಾನಾಥ್‌ ಮಂಗೇಶ್ಕರ್‌ ಅವರ ಹಿರಿಯ ಮಗಳಾಗಿ 1929ರ ಅಕ್ಟೋಬರ್‌ 28ರಂದು ಲತಾ ಜನಿಸಿದರು. ಅವರು ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷರಾಗಿದ್ದ (1996–1999) ದಿವಂಗತ ರಾಜ್‌ ಸಿಂಗ್‌ ಡುಂಗರ್ಪುರ್‌ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದರಾದರೂ ಮದುವೆ ಆಗಿರಲಿಲ್ಲ. ಅವರು ಅವಿವಾಹಿತೆಯಾಗಿಯೇ ಬದುಕು ಸಾಗಿಸಿದರು.

ಅವರ ಗಾಯನಕ್ಕೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಏಳು ಫಿಲ್ಮ್‌ಫೇರ್‌ ಪ್ರಶಸ್ತಿಗಳು, 1989ರಲ್ಲಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ದೊರೆತಿತ್ತು. 2001ರಲ್ಲಿ ದೇಶದ ಅತ್ಯುತ್ತಮ ಗೌರವ ಭಾರತ ರತ್ನ ನೀಡಿ ಗೌರವಿಸಲಾಯಿತು. ಎಂ.ಎಸ್‌.ಸುಬ್ಬಲಕ್ಷ್ಮಿ ನಂತರ ಭಾರತ ರತ್ನ ಗೌರವಕ್ಕೆ ಪಾತ್ರರಾದ ಎರಡನೇ ಗಾಯಕಿ ಲತಾ ಮಂಗೇಶ್ಕರ್‌.

1974ರಲ್ಲಿ ಲತಾ ಅವರು ಲಂಡನ್‌ನ ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಅಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದು. 1942ರಲ್ಲಿ ಮರಾಠಿ ಸಿನಿಮಾ 'ಕಿತಿ ಹಸಾಲ್‌'ಗಾಗಿ ಮೊದಲ ಬಾರಿಗೆ ಹಾಡೊಂದರ ರೆಕಾರ್ಡಿಂಗ್‌ ಮಾಡಲಾಗಿತ್ತು. ಆದರೆ, ಅಂತಿಮವಾಗಿ ಅವರ ದನಿಯಲ್ಲಿದ್ದ ಹಾಡು ಆ ಸಿನಿಮಾದಲ್ಲಿ ಇರಲಿಲ್ಲ. ತಂದೆ ದೀನಾನಾಥ್‌ ಮಂಗೇಶ್ಕರ್‌ ಅವರ ಸಂಗೀತ ನಾಟಕಗಳೊಂದಿಗೆ ಆಗಿನ 'ಹೇಮಾ' (ಲತಾ ಮಂಗೇಶ್ಕರ್‌) ಪ್ರದರ್ಶನ ಶುರುವಾಯಿತು. ಐದನೇ ವಯಸ್ಸಿನಲ್ಲೇ ಸಂಗೀತದೊಂದಿಗೆ ಬಾಂಧವ್ಯ ಬೆಳೆದಿತ್ತು.

1942ರಲ್ಲಿ ಲತಾ ಅವರ ತಂದೆಯ ಅಕಾಲಿಕ ಮರಣಾ ನಂತರ, ನಿರ್ದೇಶಕ ವಿನಾಯಕ್ ದಾಮೋದರ್‌ ಕರ್ನಾಟಕಿ ಅವರು ಕುಟುಂಬದ ಹೊಣೆ ಹೊತ್ತರು. ವಿನಾಯಕರ್‌ ಅವರು ಲತಾ ಅವರನ್ನು ಮುಂಬೈನಲ್ಲಿ ಸಿನಿಮಾ ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಡೆಸಿದ್ದರು. ಉಸ್ತಾದ್‌ ಅಮನ್‌ ಅಲಿ ಖಾನ್‌ ಅವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸಕ್ಕೆ ಸೇರಿಸಿದ್ದರು.

ಲತಾ ಅವರಿಗೆ ಮೊದಲ ಯಶಸ್ಸು ಸಿಕ್ಕಿದ್ದು, ಸಂಗೀತ ನಿರ್ದೇಶಕ ಗುಲಾಮ್‌ ಹೈದರ್‌ ಅವರ ಮಜಬೂರ್‌ (1948) ಸಿನಿಮಾದಲ್ಲಿ 'ದಿಲ್‌ ಮೇರಾ ತೋಡಾ, ಮುಝೆ ಕಹಿ ಕಾ ನಾ...' ಹಾಡಿನ ಮೂಲಕ. ಮಧುಬಾಲಾ ಅಭಿನಯದ ಮಹಲ್‌ (1949) ಸಿನಿಮಾದ 'ಆಯೇಗಾ ಆನೇವಾಲಾ' ಹಾಡು ಸಿನಿಮಾ ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು.

ಅನಿಲ್‌ ಬಿಸ್ವಾಲ್‌, ಎಸ್‌.ಡಿ.ಬರ್ಮನ್‌, ನೌಶಾದ್‌, ಮದನ್‌ ಮೋಗನ್‌, ಶಂಕರ್‌ ಜೈಕಿಶನ್‌, ಲಕ್ಷ್ಮೀಕಾಂತ್‌ ಪ್ಯಾರೆಲಾಲ್‌ ಅವರಿಂದ ಹಿಡಿದು ಇಳಯರಾಜ, ಎ.ಆರ್‌.ರಹಮಾನ್‌ ವರೆಗೂ ಹತ್ತಾರು ಸಂಗೀತ ನಿರ್ದೇಶಕರೊಂದಿಗೆ ಸಿನಿಮಾ ಸಂಗೀತದಲ್ಲಿ ದನಿಯಾಗಿದ್ದಾರೆ.

ಮರಾಠಿ, ಹಿಂದಿ, ತಮಿಳು, ಕನ್ನಡ, ಮಲೆಯಾಳಂ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಲ್ಲಿ ಲತಾ ಮಂಗೇಶ್ಕರ್‌ ಹಾಡಿದ್ದಾರೆ ಹಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ.

ಗಿನ್ನಿಸ್‌ ದಾಖಲೆ

1948ರಿಂದ 1974ರ ವರೆಗೂ ಭಾರತದ 20 ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಿನ್ನೆಲೆ ಗಾಯನವನ್ನು ರೆಕಾರ್ಡ್‌ ಮಾಡಿರುವ ಏಕೈಕ ಗಾಯಕಿ ಎಂಬ ಗಿನ್ನಿಸ್‌ ದಾಖಲೆಯು 1974ರಲ್ಲಿ ಲತಾ ಮಂಗೇಶ್ಕರ್‌ ಅವರ ಹೆಸರಿನಲ್ಲಿ ದಾಖಲಾಯಿತು. 1987ರ ಹೊತ್ತಿಗೆ ಅವರ ಹಾಡಿನ ಸಂಖ್ಯೆ 30,000 ದಾಟಿತ್ತು.

2015ರ 'ಡುನೊ ವೈ2...ಲೈಫ್‌ ಇಸ್‌ ಎ ಮೊಮೆಂಟ್‌' (Dunno Y2...Life Is A Moment) ಸಿನಿಮಾಗಾಗಿ ಮಾಡಿದ ಗಾಯನ, ಲತಾ ಅವರು ರೆಕಾರ್ಡ್‌ ಮಾಡಿದ ಕೊನೆಯ ಹಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.