ADVERTISEMENT

ನಿಖಿಲ್‌ ವಿವಾಹ ಸಿದ್ಧತೆಗೆ ಚಾಲನೆ

ಎಚ್‌ಡಿಕೆ–ಮಂಜುನಾಥ್‌ ಕುಟುಂಬ ಭಾಗಿ; ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 9:42 IST
Last Updated 22 ಫೆಬ್ರುವರಿ 2020, 9:42 IST
ಅರ್ಚಕರಹಳ್ಳಿ ಬಳಿಯ ಜಮೀನಿನಲ್ಲಿ ಶುಕ್ರವಾರ ಎಚ್‌.ಡಿ. ಕುಮಾರಸ್ವಾಮಿ–ಅನಿತಾ ಹಾಗೂ ರೇವತಿ ಮಂಜುನಾಥ್‌– ಶ್ರೀದೇವಿ ದಂಪತಿ ಭೂಮಿಪೂಜೆ ನೆರವೇರಿಸಿದರು
ಅರ್ಚಕರಹಳ್ಳಿ ಬಳಿಯ ಜಮೀನಿನಲ್ಲಿ ಶುಕ್ರವಾರ ಎಚ್‌.ಡಿ. ಕುಮಾರಸ್ವಾಮಿ–ಅನಿತಾ ಹಾಗೂ ರೇವತಿ ಮಂಜುನಾಥ್‌– ಶ್ರೀದೇವಿ ದಂಪತಿ ಭೂಮಿಪೂಜೆ ನೆರವೇರಿಸಿದರು   

ರಾಮನಗರ: ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಹಾಗೂ ರೇವತಿ ಅವರ ಕಲ್ಯಾಣದ ಸಿದ್ಧತಾ ಕಾರ್ಯಗಳಿಗೆ ಶುಕ್ರವಾರ ಜಾನಪದ ಲೋಕದ ಬಳಿ ಚಾಲನೆ ದೊರೆಯಿತು.

ಎಚ್‌.ಡಿ. ಕುಮಾರಸ್ವಾಮಿ–ಅನಿತಾ ದಂಪತಿ ಹಾಗೂ ರೇವತಿ ಅವರ ಪೋಷಕರಾದ ಮಂಜುನಾಥ್‌–
ಶ್ರೀದೇವಿ ದಂಪತಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಹರಿಶಾಸ್ತ್ರಿ ಹಾಗೂ ರಾಮನಗರದ ಬಲಮುರಿ ಗಣಪತಿ ದೇಗುಲದ ಗಣೇಶ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ಏಪ್ರಿಲ್ 17ರಂದು ವಿವಾಹ ನಿಶ್ಚಯ ಆಗಿದೆ. ಅದಕ್ಕೆ ಬೇಕಾದ ಸಿದ್ಧತೆಗಳಿಗೆ ಇಂದು ಪೂಜೆ ಮೂಲಕ ಚಾಲನೆ ನೀಡುತ್ತಿದ್ದೇವೆ. ಗಣ ಹೋಮ ಜೊತೆಗೆ ಭೂಮಿಪೂಜೆ ನಡೆಯಿತು. ಇದು ನನ್ನ ಕುಟುಂಬದ ಮೊದಲ ಹಾಗೂ ಕೊನೆಯ ಶುಭ ಸಮಾರಂಭ. ಇದಕ್ಕಾಗಿ ನನ್ನೆಲ್ಲ ಕಾರ್ಯಕರ್ತರ ಜೊತೆಗೂಡಿ ಇಲ್ಲಿನ ಪ್ರತಿ ಕುಟುಂಬಕ್ಕೆ ಆಹ್ವಾನ ನೀಡುತ್ತೇನೆ. ಮದುವೆ ಹೆಸರಿನಲ್ಲಿ ನನ್ನೆಲ್ಲ ಮತದಾರರಿಗೆ ಧನ್ಯವಾದ ಹೇಳುತ್ತೇನೆ. ಸಪ್ತಪದಿ ಮಂಟಪ ಸೇರಿದಂತೆ ಹಲವು ವೇದಿಕೆ ಇಲ್ಲಿ ನಿರ್ಮಾಣ ಆಗಲಿದೆ' ಎಂದರು.

ADVERTISEMENT

‘ನನ್ನ ಹುಟ್ಟೂರಾದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಮದುವೆ ಮಾಡಬೇಕು ಎಂಬ ಆಲೋಚನೆ ಇತ್ತು. ಆದರೆ ಅಂತಿಮವಾಗಿ ನನಗೆ ರಾಜಕೀಯ ಜನ್ಮ ನೀಡಿದ ರಾಮನಗರವನ್ನೇ ಇದಕ್ಕೆ ಆಯ್ಕೆ ಮಾಡಿದ್ದೇನೆ. ನನ್ನ ಹೃದಯದಲ್ಲಿ ಇರುವುದು ಇಲ್ಲಿನ ಜನ' ಎಂದರು.

ಅದ್ದೂರಿ ಸೆಟ್‌ ಇಲ್ಲ: ‘ಮದುವೆ ಕಾರ್ಯಕ್ಕಾಗಿ 90ರಿಂದ 95 ಎಕರೆ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ.
ಅದ್ದೂರಿ ಸೆಟ್ ಹಾಕುವುದಿಲ್ಲ. ಆದರೆ ನನ್ನೆಲ್ಲ ಲಕ್ಷಾಂತರ ಕಾರ್ಯಕರ್ತರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮವೇ ಆಗಿರಲಿದೆ. ಮುಹೂರ್ತದ ಕಾರ್ಯಕ್ರಮ ಇಲ್ಲಿ ನಡೆಯಲಿದೆ. ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಬೇಕು ಎಂಬುದು ಹಲವರ ಅಭಿಪ್ರಾಯ. ಈ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.