ADVERTISEMENT

ಕಂಗನಾ, ಅನುಪಮ್ ಖೇರ್ ಜೊತೆಗೆ ‘ಎಮರ್ಜೆನ್ಸಿ’ ಚಿತ್ರ ವೀಕ್ಷಿಸಿದ ಗಡ್ಕರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2025, 5:45 IST
Last Updated 12 ಜನವರಿ 2025, 5:45 IST
   

ನಾಗ್ಪುರ(ಮಹಾರಾಷ್ಟ್ರ): ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ನಾಗ್ಪುರದ ವಿಶೇಷ ಪ್ರದರ್ಶನದಲ್ಲಿ ‘ಎಮರ್ಜೆನ್ಸಿ’ ಚಿತ್ರ ವೀಕ್ಷಿಸಿದ್ದಾರೆ.

1975ರ ತುರ್ತು ಪರಿಸ್ಥಿತಿ ಕಥಾ ಹಂದರವನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿರುವ ನಟಿ ಕಂಗನಾ ರನೌತ್ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಪಾತ್ರ ನಿರ್ವಹಿಸಿರುವ ಹಿರಿಯ ನಟ ಅನುಪಮ್ ಕೇರ್ ಜೊತೆಗಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಪ್ರದರ್ಶನ ಕುರಿತಂತೆ ಕಂಗನಾ ಚಿತ್ರಗಳನ್ನು ಹಂಚಿಕೊಂಡಿದ್ದು, ಒಂದು ಚಿತ್ರದಲ್ಲಿ ಕಂಗನಾ, ಗಡ್ಕರಿ ಮತ್ತು ಅನುಪಮ್ ಖೇರ್ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ.

ADVERTISEMENT

ಇದೇ 17ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರವನ್ನು ನಿತಿನ್‌ಜೀ ಅವರ ಜೊತೆ ವೀಕ್ಷಿಸಿದೆವು ಎಂದು ಕಂಗನಾ ಅಡಿಬರಹ ನೀಡಿದ್ದಾರೆ.

'ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಅಂತಹ ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯೊಂದಿಗೆ ಪ್ರಸ್ತುತಪಡಿಸಿದ್ದಕ್ಕಾಗಿ ಎಮರ್ಜೆನ್ಸಿ ಚಿತ್ರತಂಡವನ್ನು ಪ್ರಶಂಸಿಸುತ್ತೇನೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಗಡ್ಕರಿ ತಿಳಿಸಿದ್ದಾರೆ.

ಚಿತ್ರದಲ್ಲಿ ಅನುಪಮ್ ಖೇರ್ ಅವರ ಅಭಿನಯವನ್ನು ಕೊಂಡಾಡಿರುವ ಕಂಗನಾ, ಅನುಪಮ್ ಖೇರ್ ಚಿತ್ರದ ಹೀರೊ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಅವರಿಲ್ಲದೆ ಸಿನಿಮಾ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ.

‘ಈ ಚಿತ್ರದಲ್ಲಿ ಅನುಪಮ್ ಜೀ ನಟಿಸುವುದು ನನಗೆ ಬಹಳ ಮುಖ್ಯವಾಗಿತ್ತು. ಅವರು ನಟಿಸಲು ನಿರಾಕರಿಸಿದ್ದರೆ ನಾನು ಈ ಚಿತ್ರವನ್ನೇ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪರದೆ ಮೇಲೆ ಅವರ ವ್ಯಕ್ತಿತ್ವದ ಚಿತ್ರಣವನ್ನು ಗಮನಿಸಿದರೆ ನಿಮಗೆ ಗೊತ್ತಾಗುತ್ತದೆ. ಮುಖದಲ್ಲಿ ಪ್ರಾಮಾಣಿಕತೆ ಎದ್ದು ಕಾಣುತ್ತದೆ. ಜಯಪ್ರಕಾಶ್ ನಾರಾಯಣ್ ಅವರ ಪಾತ್ರಕ್ಕೆ ಖೇರ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನ್ಯಾಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ’ಎಂದು ಕಂಗನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.