ADVERTISEMENT

ಕನ್ನಡ ಚಿತ್ರದಲ್ಲೂ ನಟಿಸುವೆ: ಬೆಂಗಳೂರಿನ ನಂಟು ಬಿಚ್ಚಿಟ್ಟ ವಿಜಯ್ ದೇವರಕೊಂಡ

‘ಅವಕಾಶ ಸಿಕ್ಕಿದರೆ ಕನ್ನಡ ಚಿತ್ರದಲ್ಲೂ ನಟಿಸುವೆ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 13:31 IST
Last Updated 3 ಅಕ್ಟೋಬರ್ 2018, 13:31 IST
ತೆಲುಗಿನ ‘ನೋಟ’ ಚಿತ್ರದ ಪ್ರಚಾರಕ್ಕಾಗಿ ಬುಧವಾರ ಬೆಂಗಳೂರಿಗೆ ಭೇಟಿ ನೀಡಿದ್ದ ನಟ ವಿಜಯ್‌ ದೇವರಕೊಂಡ ಅವರನ್ನು ನಟ ಶಿವರಾಜ್‌ ಕುಮಾರ್‌ ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು
ತೆಲುಗಿನ ‘ನೋಟ’ ಚಿತ್ರದ ಪ್ರಚಾರಕ್ಕಾಗಿ ಬುಧವಾರ ಬೆಂಗಳೂರಿಗೆ ಭೇಟಿ ನೀಡಿದ್ದ ನಟ ವಿಜಯ್‌ ದೇವರಕೊಂಡ ಅವರನ್ನು ನಟ ಶಿವರಾಜ್‌ ಕುಮಾರ್‌ ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು   

‘ನನಗೆ ಅವಕಾಶ ಸಿಕ್ಕಿದರೆ ಕನ್ನಡದಲ್ಲಿಯೂ ನಟಿಸುತ್ತೇನೆ. ನನಗೆ ಬೆಂಗಳೂರು ಅಂದರೆ ಇಷ್ಟ. ನಟನಾಗುವ ಮೊದಲು ಸಾಕಷ್ಟು ಬಾರಿ ಇಲ್ಲಿನ ಒರಾಯನ್ ಮಾಲ್, ಜಾಲಹಳ್ಳಿಯಲ್ಲಿ ಸುತ್ತಿದ್ದೇನೆ. ನನಗೆ ಇಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ’ ಎಂದು ಕಣ್ಣರಳಿಸಿ ನಕ್ಕರು ನಟ ವಿಜಯ್ ದೇವರಕೊಂಡ.

ವಿಜ‌ಯ್‌ ನಟಿಸಿರುವ ‘ನೋಟ’ ಚಿತ್ರ ಇದೇ 5ರಂದು ತೆರೆಕಾಣುತ್ತಿದೆ. ಆನಂದ್‌ ಶಂಕರ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಇದು ಪೊಲಿಟಿಕಲ್‌ ಥ್ರಿಲ್ಲರ್ ಚಿತ್ರ. ಸಾಮಾನ್ಯ ವ್ಯಕ್ತಿಯೊಬ್ಬ ರಾಜಕೀಯ ಕ್ಷೇತ್ರ ಪ್ರವೇಶಿಸಿದರೆ ಏನೆಲ್ಲಾ ಆಗುತ್ತದೆ ಎನ್ನುವುದರ ಸುತ್ತ ಚಿತ್ರಕಥೆ ಹೆಣೆಯಲಾಗಿದೆಯಂತೆ. ಕೆ.ಇ. ಜ್ಞಾನವೇಲ್ ರಾಜ ಬಂಡವಾಳ ಹೂಡಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ತೆರೆ ಕಾಣುತ್ತಿದೆ.

ಚಿತ್ರದ ಪ್ರಚಾರಕ್ಕಾಗಿ ಬುಧವಾರ ಬಂದಿದ್ದ ವಿಜಯ್‌ ದೇವರಕೊಂಡ ಬೆಂಗಳೂರಿನ ಜೊತೆಗಿರುವ ನಂಟನ್ನು ಬಿಚ್ಚಿಟ್ಟರು. ‘ಬೆಂಗಳೂರಿನ ಹಲವು ಸ್ಥಳಗಳ ಪರಿಚಯ ನನಗಿದೆ. ಅಲ್ಲೆಲ್ಲಾ ತಿರುಗಾಡಿ ಟೀ ಕುಡಿದಿದ್ದೇನೆ. ಶಿವಣ್ಣ, ಚಿರಂಜೀವಿ ಸರ್‌ ನನ್ನ ನಟನೆ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಖುಷಿ ಕೊಟ್ಟಿದೆ’ ಎಂದರು.

ADVERTISEMENT

‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ ಕುಮಾರ್, ‘ನಾನು ರಜನಿಕಾಂತ್‌ ಅವರ ಅಭಿಮಾನಿ. ನಾನು ಅವರನ್ನು ಮೊದಲು ತಬ್ಬಿಕೊಂಡಾಗ ಮೂರು ದಿನಗಳ ಕಾಲ ಸ್ನಾನ ಮಾಡಿರಲಿಲ್ಲ. ನಾನು ಈಗ ವಿಜಯ್‌ ದೇವರಕೊಂಡ ಅವರ ಅಭಿಮಾನಿ ಆಗಿದ್ದೇನೆ’ ಎಂದು ಹೇಳಿಕೊಂಡರು.

ನಿರ್ಮಾಪಕ ಜ್ಞಾನವೇಲ್ ರಾಜ ಅವರಿಗೆ ಶಿವರಾಜ್‌ ಕುಮಾರ್‌ ಅವರ ಚಿತ್ರಗಳೆಂದರೆ ಇಷ್ಟವಂತೆ. ಶಿವಣ್ಣ ನಟಿಸಲಿರುವ ಮುಂದಿನ ಚಿತ್ರವೊಂದಕ್ಕೆ ಬಂಡವಾಳ ಹೂಡಲು ಅವರು ನಿರ್ಧರಿಸಿದ್ದಾರೆ. ಈ ಚಿತ್ರವನ್ನು ತೆಲುಗಿನ ಮುತ್ತಣ್ಣ ನಿರ್ದೇಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.