ADVERTISEMENT

ಖನ್ನಾ ಡೈಲಾಗ್, ಜೆಕೆಗೆ ಟಾನಿಕ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:30 IST
Last Updated 27 ಫೆಬ್ರುವರಿ 2020, 19:30 IST
ಅನುಸ್ಮೃತಿ ಸರ್ಕಾರ್‌
ಅನುಸ್ಮೃತಿ ಸರ್ಕಾರ್‌   

ಎಪ್ಪತ್ತರ ದಶಕದ ಸೂಪರ್‌ ಹಿಟ್‌ ಚಿತ್ರ ‘ಅಮರ್‌ಪ್ರೇಮ್‌’ನಲ್ಲಿ ನಾಯಕ ರಾಜೇಶ್‌ ಖನ್ನಾ ಹೇಳುವ ‘ಓ ಪುಷ್ಪಾ ಐ ಹೇಟ್‌ ಟಿಯರ್ಸ್‌’ ಡೈಲಾಗ್‌ ಬಹಳಷ್ಟು ಮಂದಿ ಚಿತ್ರರಸಿಕರಿಗೆ ನೆನಪಿರಬಹುದು. ಈ ಡೈಲಾಗ್‌ ಆಗಿನ ಕಾಲದಲ್ಲೂ ತುಂಬಾ ಜನಪ್ರಿಯಗೊಂಡಿತ್ತು. ಇದೇ ಡೈಲಾಗ್‌ ಶೀರ್ಷಿಕೆಯಾಗಿಟ್ಟುಕೊಂಡು ನಿರ್ಮಿಸಿರುವ‘ಓ ಪುಷ್ಪಾ ಐ ಹೇಟ್‌ ಟಿಯರ್ಸ್‌’ ಚಿತ್ರವು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಇದೇ ಶುಕ್ರವಾರ (ಫೆ.28) ತೆರೆಕಾಣುತ್ತಿದೆ.ವಿತರಕ ನರ್ಗಿಸ್‍ ಬಾಬು ರಾಜ್ಯದಲ್ಲಿ ಸುಮಾರು 50 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ದಿನಕರ್‌ ಕಪೂರ್‌ ಮತ್ತು ನಾಯಕ ಜೆಕೆ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ರೊಮ್ಯಾನ್ಸ್‌,ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳಿರುವ ಚಿತ್ರದದೃಶ್ಯ ತುಣುಕುಗಳನ್ನು ಚಿತ್ರತಂಡ ಪ್ರದರ್ಶಿಸಿತು.

ತಾರಾ ನಿರ್ದೇಶಕ ಅಬ್ಬಾಸ್‌ ಮಸ್ತಾನ್ ಬಳಿ ಕೆಲಸ ಮಾಡಿರುವ ಅನುಭವಿ ದಿನಕರ್‌ ಕಪೂರ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಪ್ರೀತಿಯನ್ನು ಯಾರು ಬಿಡಲು ಆಗುವುದಿಲ್ಲ. ಈ ಪರಿಕಲ್ಪನೆಯೊಂದಿಗೆ ಚಿತ್ರದ ದೃಶ್ಯ ಹೆಣೆಯಲಾಗಿದೆ. ದಾಂಪತ್ಯ ಮತ್ತು ವಿವಾಹೇತರ ಸಂಬಂಧದ ಎಳೆ ಚಿತ್ರದ ಹೂರಣ.ಭಾರತೀಯ ಸಂಸ್ಕೃತಿಯೇ ಶ್ರೇಷ್ಠವೆಂಬ ಸಂದೇಶವನ್ನುಕ್ಲೈಮ್ಯಾಕ್ಸ್‌ನಲ್ಲಿ ತೋರಿಸಿದ್ದೇವೆ. ಮುಂಬೈ ಮತ್ತು ಭುವನೇಶ್ವರದಲ್ಲಿಚಿತ್ರೀಕರಣ ನಡೆಸಲಾಗಿದೆ’ ಎನ್ನುವ ಮಾತು ಸೇರಿಸಿದರು ಅವರು.

ADVERTISEMENT

ಈ ಚಿತ್ರದ ನಾಯಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡ, ಬಿಗ್‌ಬಾಸ್‌ ಖ್ಯಾತಿಯ ಕಾರ್ತಿಕ್‌ ಜಯರಾಮ್‌ (ಜೆಕೆ). ‘ಬಿಗ್‍ಬಾಸ್ ರಿಯಾಲಿಟಿ ಶೋ ನಂತರ ಹಿಂದಿಯ ‘ರಾವಣ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಆಗನಿರ್ದೇಶಕರು ಕರೆ ಮಾಡಿ ಈ ಚಿತ್ರದಲ್ಲಿ ನಟಿಸುವಅವಕಾಶ ಕೊಟ್ಟರು’ ಎಂದರು ಜೆಕೆ.

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಅರ್ಜುಮನ್‍ ಮುಘಲ್ ಗೈರುಹಾಜರಾಗಿದ್ದರು. ಮತ್ತೊಬ್ಬ ನಾಯಕಿ ಅನುಸ್ಮೃತಿ ಸರ್ಕಾರ್, ‘ತನ್ನದು ಗೆಳತಿಯ ಪಾತ್ರ’ವೆಂದು ಚುಟುಕಾಗಿ ಹೇಳಿದರು.

ಕಪಿಲ್‍ ಶರ್ಮ ಷೋನಲ್ಲಿಹೆಸರು ಮಾಡಿರುವ ಕೃಷ್ಣಾ ಅಭಿಷೇಕ್ ಈ ಚಿತ್ರದಲ್ಲಿ ಕಾಮಿಡಿ ವಿಲನ್ ಆಗಿ ನಟಿಸಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಗೂ ಅವರು ಧ್ವನಿಯಾಗಿದ್ದಾರೆ.

‘ಫಿಲ್ಮ್@50’ ಬ್ಯಾನರ್ ಮೂಲಕ ಅಮೂಲ್ಯ ಕುಮಾರ್‌ದಾಸ್‌ ಬಂಡವಾಳ ಹೂಡಿದ್ದಾರೆ. ಸಂಗೀತ ರಾಮ್‍ಜಿ ಗುಲಾಟಿ, ಛಾಯಾಗ್ರಹಣ ಅರವಿಂದ ಸಿಂಹ, ನೃತ್ಯ ನಿರ್ದೇಶನ ಲಾಲಿಪಾಪ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.