ADVERTISEMENT

‌ವರ್ಷಾಂತ್ಯಕ್ಕೆ ‘ಒಡೆಯ’ನ ದರ್ಶನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:30 IST
Last Updated 17 ಅಕ್ಟೋಬರ್ 2019, 19:30 IST
’ಒಡೆಯ’ ಚಿತ್ರದಲ್ಲಿ ದರ್ಶನ್
’ಒಡೆಯ’ ಚಿತ್ರದಲ್ಲಿ ದರ್ಶನ್   

‘ಒಡೆಯ’ ಎಂದರೆ ಮನೆಯ ಯಜಮಾನ ಎಂದರ್ಥ. ಈ ಚಿತ್ರದ ಅರ್ಥದಲ್ಲಿಯೇ ಯಜಮಾನ ಇದ್ದಾನೆ. ಹಾಗಾಗಿ, ಗಾಂಧಿನಗರದ ಗಲ್ಲಾಪೆಟ್ಟಿಗೆ ಯಜಮಾನನ ಈ ಸಿನಿಮಾಕ್ಕೂ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ’ ಎಂದು ನಕ್ಕರು ನಿರ್ದೇಶಕ ಎಂ.ಡಿ. ಶ್ರೀಧರ್.

ದರ್ಶನ್‌ ಮತ್ತು ಶ್ರೀಧರ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಮೂರನೇ ಚಿತ್ರ ‘ಒಡೆಯ’. ಎರಡು ಹಾಡುಗಳನ್ನು ಹೊರತುಪಡಿಸಿ ಉಳಿದ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೋಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿವೆ. ಈ ನಡುವೆಯೇ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಸ್ವಿಡ್ಜರ್ಲೆಂಡ್‌ನಲ್ಲಿ ಬೀಡುಬಿಟ್ಟಿದೆ. ಜಯಂತ ಕಾಯ್ಕಿಣಿ ಮತ್ತು ವಿ. ನಾಗೇಂದ್ರಪ್ರಸಾದ್‌ ಅವರುಈ ಹಾಡುಗಳನ್ನು ಹೊಸೆದಿದ್ದಾರೆ.

ಈ ಹಿಂದೆ ಶ್ರೀಧರ್‌ ನಿರ್ದೇಶಿಸಿದ್ದ ‘ಪೊರ್ಕಿ’ ಮತ್ತು ‘ಬುಲ್‌ ಬುಲ್‌’ ಸಿನಿಮಾಗಳು ಸೂಪರ್ ಹಿಟ್‌ ಆಗಿದ್ದವು. ಹಾಗಾಗಿ, ಈ ಚಿತ್ರದ ಮೇಲೂ ದರ್ಶನ್‌ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.‘ಒಡೆಯ’ನ ದರ್ಶನದ ಬಗ್ಗೆ ಶ್ರೀಧರ್‌ ವಿವರಿಸುವುದು ಹೀಗೆ; ‘ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್‌. ಮೂಲ ಸಿನಿಮಾ ವೀಕ್ಷಿಸಿ, ಅಲ್ಲಿನ ಕಲಾವಿದರು ನಟಿಸಿದಂತೆಯೇ ನಾವೂ ಅಭಿನಯಿಸಲು ಆಗುವುದಿಲ್ಲ. ನಮ್ಮ ಶೈಲಿಯಲ್ಲಿಯೇ ನಟನೆ ಮಾಡಬೇಕು. ಹಾಗಾಗಿ, ಇಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರದಲ್ಲಿ ಮಾರ್ಪಾಡು ಮಾಡಿಕೊಳ್ಳಲಾಗಿದೆ. ಸನ್ನಿವೇಶಗಳು, ಕಾಮಿಡಿ, ದರ್ಶನ್‌ ಅವರ ಡೈಲಾಗ್‌ ಶೈಲಿಯಲ್ಲೂ ಸಂಪೂರ್ಣ ಬದಲಾವಣೆ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸುತ್ತಾರೆ.

ADVERTISEMENT

‘ಯಜಮಾನ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಫಸಲು ತೆಗೆದಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ, ಒಡೆಯನ ಮೇಲೂ ನಿರೀಕ್ಷೆ ಹೆಚ್ಚಿರುವುದು ಸಹಜ. ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರ ಥಿಯೇಟರ್‌ಗೆ ಬರುವುದು ಗ್ಯಾರಂಟಿ’ ಎನ್ನುತ್ತಾರೆ. ‘ಒಡೆಯ’ ಚಿತ್ರದಲ್ಲಿ ಐವರು ಸಹೋದರರ ಪ್ರೀತಿಯ ಅಣ್ಣನ ಕಥೆ ಹೆಣೆಯಲಾಗಿದೆ. ಬೆಂಗಳೂರು, ಹೈದರಾಬಾದ್, ಮೈಸೂರು, ಚಿತ್ರದುರ್ಗದ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ.ಸಿನಿಮಾದ ನಾಲ್ಕು ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಂದೇಶ್‌ ಪ್ರೊಡಕ್ಷನ್‌ನಡಿ ಎನ್‌. ಸಂದೇಶ್‌ ಬಂಡವಾಳ ಹೂಡಿದ್ದಾರೆ. ಎ.ವಿ. ಕೃಷ್ಣಕುಮಾರ್‌ (ಕೆ.ಕೆ.) ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.