‘ಬೌ ಬುಟ್ಟು ಭೂತಾ’
ಬೆಂಗಳೂರು: ಇದೇ ಜೂನ್ 12 ರಂದು ಬಿಡುಗಡೆಯಾಗಿರುವ ಒಡಿಯಾ ಭಾಷೆಯ ‘ಬೌ ಬುಟ್ಟು ಭೂತಾ’ ಎಂಬ ಸಿನಿಮಾ ಸಿನಿಪ್ರಿಯರ ಗಮನ ಸೆಳೆದಿರುವುದಲ್ಲದೇ ಒಡಿಶಾದ ಆಚೆಗೂ ಥಿಯೇಟರ್, ಮಲ್ಟಿಪೆಕ್ಸ್‌ಗಳಲ್ಲಿ ಸದ್ದು ಮಾಡುತ್ತಿದೆ.
ಹಾರರ್–ಥ್ರಿಲ್ಲರ್, ಕಾಮಿಡಿ ಕಥಾ ಹಂದರವನ್ನು ಹೊಂದಿರುವ ಈ ಚಿತ್ರ ಒಡಿಯಾ ಸಿನಿಮಾರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡು ಐತಿಹಾಸಿಕ ದಾಖಲೆ ನಿರ್ಮಿಸಿದೆ ಎಂದು ಹೇಳಲಾಗಿದೆ. ಸುಮಾರು ₹2ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಹದಿನೈದೇ ದಿನಕ್ಕೆ ₹12ಕೋಟಿಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ ಎನ್ನಲಾಗಿದೆ.
ವಿಶೇಷ ಎಂದರೆ ಬೆಂಗಳೂರಿನ ಮಲ್ಟಿಪೆಕ್ಸ್‌ಗಳಲ್ಲೂ ಈ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಕೆಲ ವರದಿಗಳು ಹೇಳಿವೆ. ಅಲ್ಲದೇ ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 8.5 ರೇಟಿಂಗ್ ಸಹ ಇದೆ.
ಜಗದೀಶ್ ಮಿಶ್ರಾ ಎನ್ನುವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮೊಹಮ್ಮದ್ ಇಮ್ರಾನ್, ಪ್ರಣಭ್ ಪ್ರಸನ್ನ ಅವರು ಕಥೆ ಬರೆದಿದ್ದಾರೆ. ತೃಪ್ತಿ ಸಾತಪತಿ ಅವರು ನಿರ್ಮಾಣ ಮಾಡಿದ್ದಾರೆ.
ಒಡಿಯಾದ ಜನಪ್ರಿಯ ನಟ ಬಾಭೂಷಣ್ ಮೊಹಂತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಚಿತಾ, ಅಪರಾಜಿತ್ ಮೊಹಾಂತಿ ಮುಖ್ಯಪಾತ್ರಗಳಲ್ಲಿದ್ದಾರೆ.
‘ಹಳ್ಳಿಯೊಂದರಲ್ಲಿ ತನ್ನ ತಾಯಿಯೊಂದಿಗೆ ನೆಲೆಸಿದ್ದ ಬುಟ್ಟು (ಬಾಭೂಷಣ್ ಮೊಹಂತಿ) ಸಾಧಾರಣ ಜೀವನ ಮಾಡುತ್ತಾ ವಿದ್ಯಾಭ್ಯಾಸದ ನಂತರ ನಗರ ಸೇರಿ ಉತ್ತಮ ಜೀವನ ನಡೆಸುವ ಕನಸು ಕಂಡಿರುತ್ತಾನೆ. ಆದರೆ, ಮಾಟ–ಮಂತ್ರ ವಿದ್ಯೆ ಬಲ್ಲ ಅವನ ತಾಯಿ ಅವನನ್ನು ಮೀನು ಸಾಕಾಣೆಕೆಯನ್ನೇ ಮುಂದುವರೆಸು ಎಂದು ಒತ್ತಾಯಿಸುತ್ತಾಳೆ. ಆದರೆ ಇದಕ್ಕೆ ಬುಟ್ಟು ವಿರೋಧವಿರುತ್ತದೆ. ಇದೇ ವೇಳೆ ಗ್ರಾಮದ ವೈದ್ಯನ ಮಗಳನ್ನು ಬುಟ್ಟು ಪ್ರೀತಿಸುತ್ತಿರುತ್ತಾನೆ. ಒಂದು ದಿನ ನಗರದಿಂದ ವಾಪಸ್ ಬರುವಾಗ ಕಾಡಿನ ದಾರಿಯಲ್ಲಿ ಬುಟ್ಟುವಿಗೆ ದೆವ್ವ ಅವರಿಸಿಕೊಳ್ಳುತ್ತದೆ. ನಂತರ ಗ್ರಾಮದಲ್ಲಿ ನಡೆಯುವ ಮಾಟ–ಮಂತ್ರ, ಸರಣಿ ಕೊಲೆಗಳು, ಗ್ರಾಮಸ್ಥರ ವಿಚಿತ್ರ ವರ್ತನೆ, ಪೊಲೀಸ್ ತನಿಖೆಯ ಸುತ್ತ ಕಥೆ ಸಾಗಿ ಹೋಗುತ್ತದೆ. ಕೊಲೆಗಳ ರಹಸ್ಯ ಏನು? ಬುಟ್ಟು ಪ್ರೀತಿಸಿದವಳನ್ನು ಮದುವೆಯಾಗುತ್ತಾನೋ ಇಲ್ಲವೋ? ದೆವ್ವಕ್ಕೂ ಆತನ ತಾಯಿಗೂ ಏನು ಸಂಬಂಧ ?‘ ಎಂಬುದು ಚಿತ್ರದ ಕಥಾ ಹಂದರ.
‘ಒಡಿಯಾ ಸಿನಿಮಾವೊಂದು ತಾಂತ್ರಿಕ ಶ್ರೀಮಂತಿಕೆಯಿಂದ ಮೂಡಿಬಂದಿದೆ. ಒಂದು ಅತ್ಯುತ್ತಮ ಕಥೆಯನ್ನು ಅತ್ಯುತ್ತಮವಾಗಿ ಸಿನಿಮಾ ಪರದೆಯಲ್ಲಿ ತೋರಿಸಿದ್ದಾರೆ. ನಟರ ನಟನೆಯೂ ಅದ್ಭುತವಾಗಿದೆ’ ಎಂದು ಹಲವರು ಚಿತ್ರವನ್ನು ಮೆಚ್ಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.
‘2 ತಾಸು 56 ನಿಮಿಷದ ಈ ಚಿತ್ರವನ್ನು ಭಾರತದ ಬೇರೆ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಬೇಕು’ ಎಂದು ಹಲವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.