ADVERTISEMENT

‘ಒಂದ್ ಊರಲ್ ಒಂದು ಲವ್ ಸ್ಟೋರಿ’ ನೋಡೋಕೆ ರೆಡಿಯಾಗಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 13:05 IST
Last Updated 10 ಏಪ್ರಿಲ್ 2022, 13:05 IST
‘ಒಂದ್ ಊರಲ್ ಒಂದು ಲವ್ ಸ್ಟೋರಿ’ ಆಡಿಯೋ ಬಿಡುಗಡೆ ಸಂದರ್ಭ
‘ಒಂದ್ ಊರಲ್ ಒಂದು ಲವ್ ಸ್ಟೋರಿ’ ಆಡಿಯೋ ಬಿಡುಗಡೆ ಸಂದರ್ಭ   

ಹೊಸಬರೇ ಸೇರಿಕೊಂಡು ‘ಒಂದ್ ಊರಲ್ ಒಂದು ಲವ್ ಸ್ಟೋರಿ’ ಎನ್ನುವ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆದಿದೆ.

ವಕೀಲ, ಸಾಹಿತಿ ಮತ್ತು ರಂಗಭೂಮಿ ಕಲಾವಿದ ಡಾ.ರೇವಣ್ಣಬಳ್ಳಾರಿ ಅವರು ಶ್ರೀವೀರಭದ್ರೇಶ್ವರ ಸಿನಿ ಕಂಬೈನ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮುಖ್ಯ ಶಿಕ್ಷಕನ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಕೆ.ಪ್ರಕಾಶ್ ಪಾಲುದಾರರು. ಪ್ರಕಾಶ್‌ ಅವರ ಪುತ್ರ ಪೃಥ್ವಿ ನಾಯಕ. ಅರಕಲಗೂಡಿನ ಎಂ.ಪಿ.ಅರುಣ್ ರಚನೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿದ್ದಾರೆ.

‘ಇದೇ ನಮ್ ಲೈಫ್ ಸ್ಟೋರಿ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಿ ಕಿರುತೆರೆ ನಟಿ ಅಶ್ವಿನಿ ಬಂದಿದ್ದರು.

ADVERTISEMENT

‘ಪ್ರೌಢಶಾಲೆಗೆ ಬಂದ ಯುವ ಮನಸುಗಳು ಪ್ರೀತಿಯ ಬಲೆಗೆ ಬೀಳುತ್ತಾರೆ. ಅದು ವಯೋಮಾನದ ಆಕರ್ಷಣೆ. ಒಂದು ಕುಟುಂಬದಲ್ಲಿ ಹುಡುಗಿ, ಮಗ, ಮತ್ತೊಂದು ಕುಟುಂಬದಲ್ಲಿ ಒಬ್ಬನೇ ಪುತ್ರ. ಹೀಗೆ ಎರಡು ಕಡೆಯಿಂದ ಪ್ರೀತಿಯಲ್ಲಿಬಿದ್ದಾಗ ಜಾತಿ ಅಡ್ಡ ಬರುತ್ತದೆ. ತಂದೆ ತಾಯಿ ಮುಖ್ಯ ಅಂದುಕೊಂಡು ಪ್ರೀತಿಯನ್ನು ತ್ಯಾಗ ಮಾಡುತ್ತಾರೆ. ಒಂದು ಕಾಲಘಟ್ಟದಲ್ಲಿ ಪ್ರೀತಿಯೇ ಮುಖ್ಯವೆಂದು ನಿರ್ಧಾರ ತೆಗೆದುಕೊಂಡು ಒಂದಾಗುತ್ತಾರೆ. ಹತ್ತನೇ ತರಗತಿಗೆ ಬಂದಾಗ ನಮಗೆ ಗೊತ್ತಿಲ್ಲದೆ ಪ್ರೀತಿ ಮಾಡಿದರೆ ಏನಾಗುತ್ತದೆ ಎಂಬುದನ್ನು ಅರ್ಥಪೂರ್ಣ ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದಿದೆ ಚಿತ್ರತಂಡ.

ಪಲ್ಲವಿ ನಾಯಕಿ. ಉಳಿದಂತೆ ಮಮತಾ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎ.ಎಂ.ನೀಲ್ ಸಂಗೀತ ನೀಡಿದ್ದಾರೆ. ರವಿ ಛಾಯಾಗ್ರಹಣ, ಜೀವನ್ ಸಂಕಲನ , ಕೆ.ಜೆ.ಸ್ವಾಮಿ ಗೀತರಚನೆ, ಸುರೇಶ್ ನೃತ್ಯ, ಬಾಬುಖಾನ್ ಕಲೆ, ಕೌರವ ವೆಂಕಟೇಶ್ಸಾಹಸ ನಿರ್ವಹಿಸಿದ್ದಾರೆ.

ದಾವಣಗೆರೆ, ಹುಬ್ಬಳ್ಳಿ, ಕೂಟ್ಟೂರು, ಕಾರಿಗನೂರು, ಕಂಚಿಕೆರೆ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.