
ಸಡಗರ ರಾಘವೇಂದ್ರ ನಿರ್ದೇಶನದ ಚೊಚ್ಚಲ ಸಿನಿಮಾ ‘ಆಪರೇಷನ್ ಲಂಡನ್ ಕೆಫೆ’ ನ.28ರಂದು ತೆರೆಕಾಣುತ್ತಿದ್ದು, ಚಿತ್ರವು ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಉಡುಪಿ ಮೂಲದ ಇಂಡಿಯನ್ ಫಿಲಂ ಫ್ಯಾಕ್ಟರಿ, ಮರಾಠಿಯ ದೀಪಕ್ ರಾಣೆ ಫಿಲಂಸ್ ಲಾಂಛನದ ಅಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
‘ಜಿಲ್ಕಾ’ ಸಿನಿಮಾದಲ್ಲಿ ನಟಿಸಿದ್ದ ಕವೀಶ್ ಶೆಟ್ಟಿ ಈ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡು, ಬಳಿಕ ‘ತ್ರಿಬಲ್ ರೈಡಿಂಗ್’, ‘ದಿಲ್‌ಪಸಂದ್’, ‘ಕೈವ’ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದ ನಟಿ ಮೇಘಾ ಶೆಟ್ಟಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಹೈಸ್ಕೂಲು ಹುಡುಗಿಯಾಗಿ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಾನಿ ಸುರ್ವೆ, ವಿರಾಟ್ ಮಡ್ಕೆ, ಅರ್ಜುನ್ ಕಾಪಿಕಾಡ್, ಬಿ.ಸುರೇಶ್, ಧರ್ಮೇಂದ್ರ ಅರಸ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವತ್ಥ್, ಅಶ್ವಿನಿ ಚವೇರಾ ಮುಂತಾದ ಕನ್ನಡ ಮತ್ತು ಮರಾಠಿಯ ಹೆಸರಾಂತ ಕಲಾವಿದರು ತಾರಾಬಳಗದಲ್ಲಿದ್ದಾರೆ.
ಚಿತ್ರಕ್ಕೆ ಆರ್.ಡಿ.ನಾಗಾರ್ಜುನ್ ಛಾಯಾಚಿತ್ರಗ್ರಹಣ, ಪ್ರಾಂಶು ಝಾ ಸಂಗೀತ, ವರದರಾಜ್ ಕಾಮತ್ ಕಲಾ ನಿರ್ದೇಶನ, ವಿಕ್ರಂ ಮೊರ್, ಮಾಸ್ ಮಾದ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ಕವಿರಾಜ್ ಮತ್ತು ನಾಗೇಂದ್ರ ಪ್ರಸಾದ್ ಅವರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.