
ಇದೇ ನ.28ಕ್ಕೆ ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಚಿತ್ರದ ಹಾಡೊಂದು ಬಿಡುಗಡೆಯಾಗಿದೆ.
‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡು, ಬಳಿಕ ‘ತ್ರಿಬಲ್ ರೈಡಿಂಗ್’, ‘ದಿಲ್‌ಪಸಂದ್’, ‘ಕೈವ’ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದ ನಟಿ ಮೇಘಾ ಶೆಟ್ಟಿ, ಈ ಹಾಡಿನಲ್ಲಿ ಲಂಗದಾವಣಿ ತೊಟ್ಟ ಅಪ್ಪಟ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ‘ರೈ ರೈ ರೈ ಈ ಪ್ರೀತಿ ಶ್ಯಾನೆ ಮಜವಾಗುತೈತಿ’ ಎನ್ನುತ್ತಾ ಮೇಘಾ ಹೆಜ್ಜೆ ಹಾಕಿದ್ದಾರೆ. ‘ಜಿಲ್ಕಾ’ ಸಿನಿಮಾದಲ್ಲಿ ನಟಿಸಿದ್ದ ಕವೀಶ್ ಶೆಟ್ಟಿ ಈ ಸಿನಿಮಾದಲ್ಲಿ ನಕ್ಸಲೈಟ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸಿ ಈ ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಛಾಯಾಚಿತ್ರಗ್ರಾಹಕ ಆರ್.ಡಿ.ನಾಗಾರ್ಜುನ್ ಹಾಡಿಗೆ ತಕ್ಕ ಹಾಗೆ ಪ್ರಕೃತಿಯ ಸುಂದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಐಶ್ವರ್ಯ ರಂಗರಾಜನ್ ದನಿಯಲ್ಲಿ ಈ ಹಾಡು ಮೂಡಿಬಂದಿದೆ.
ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.