ADVERTISEMENT

‘ದಿ ಎಲಿಫೆಂಟ್‌ ವಿಸ್ಪರ್ಸ್’ ಚಿತ್ರೀಕರಣ ನಡೆದ ತೆಪ್ಪಕಾಡು ಆನೆ ಶಿಬಿರದ ಬಗ್ಗೆ...

ಐಎಎನ್ಎಸ್
Published 13 ಮಾರ್ಚ್ 2023, 16:18 IST
Last Updated 13 ಮಾರ್ಚ್ 2023, 16:18 IST
ಮದುಮಲೈ ಅರಣ್ಯದ ತೆಪ್ಪಕಾಡು ಆನೆ ಶಿಬಿರ
ಮದುಮಲೈ ಅರಣ್ಯದ ತೆಪ್ಪಕಾಡು ಆನೆ ಶಿಬಿರ    

ಚೆನ್ನೈ: ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' ಅನ್ನು ತಮಿಳುನಾಡಿನ ನೀಲಗಿರಿ ಪರ್ವತಗಳ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಚಿತ್ರೀಕರಿಸಲಾಗಿದೆ.

ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರವು ಏಷ್ಯಾದ ಅತ್ಯಂತ ಹಳೆಯ ಆನೆ ಶಿಬಿರವಾಗಿದ್ದು, ಇದನ್ನು 105 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ.

ಮೊಯಾರ್ ನದಿಯ ತಟದಲ್ಲಿರುವ ಶಿಬಿರದಲ್ಲಿ ಪ್ರಸ್ತುತ 28 ಆನೆಗಳಿವೆ. ಪರಿಣತ ಮಾವುತರು ಆನೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವುಗಳ ಆರೈಕೆಯಲ್ಲಿ ತೊಡಗಿದ್ದಾರೆ.

ADVERTISEMENT

ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಚಿತ್ರೀಕರಣಕ್ಕಾಗಿ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಐದು ವರ್ಷಗಳ ಕಾಲ ತಂಗಿದ್ದರು. ಅವರ ಪರಿಶ್ರಮದ ಫಲವಾಗಿ ಇಂದು ಅವರ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಂದಿದೆ.

41 ನಿಮಿಷಗಳ ಸಾಕ್ಷ್ಯಚಿತ್ರವು ಅನಾಥ ಆನೆ ರಘು ಮತ್ತು ಮಾವುತ ದಂಪತಿಯಾದ ಬೊಮ್ಮನ್– ಬೆಳ್ಳಿ ನಡುವಿನ ಅಮೂಲ್ಯ ಪ್ರೇಮ ಸಂಬಂಧವನ್ನು ತಿಳಿಸುತ್ತದೆ.

ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಟ್ಟುನಾಯಕನ್ ಎಂಬ ಬುಡಕಟ್ಟು ಜನರು ವಾಸಿಸುತ್ತಿದ್ದು, ಬೊಮ್ಮಿ ಮತ್ತು ಬೆಳ್ಳಿ ಆ ಸಮುದಾಯಕ್ಕೇ ಸೇರಿದವರಾಗಿದ್ದಾರೆ.

ಜನವಸತಿ ಪ್ರದೇಶಕ್ಕೆ ಬಂದು ಜನರೊಂದಿಗೆ ಸಂಘರ್ಷಕ್ಕೆ ಇಳಿಯುವ ಕಾಡಾನೆಗಳಿಗೆ ಪುನರ್ವಸತಿ ಕಲ್ಪಿಸಲೆಂದು ತೆಪ್ಪಕಾಡು ಆನೆ ಶಿಬಿರವನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಆನೆಗಳಿಗೆ ಸೂಕ್ತ ತರಬೇತಿ ನೀಡಿ ಕುಮ್ಕಿ ಆನೆಗಳನ್ನಾಗಿ ಪರಿವರ್ತಿಸಲಾಗುತ್ತದೆ.

ಜನವಸತಿ ಪ್ರದೇಶಗಳಿಗೆ ಬರುವ ಕಾಡಾನೆಗಳನ್ನು ಓಡಿಸಲು ಈ ಶಿಬಿರದ ಆನೆಗಳನ್ನೇ ಬಳಸಲಾಗುತ್ತದೆ. ಮಾವುತರಾದ ಕಿರುಮಾರನ್ ಮತ್ತು ವಾಸಿಮ್ ಎಂಬುವವರು ಎರಡು ಕಾಡಾನೆಗಳನ್ನು ಪರಿವರ್ತಿಸಿದ್ದು, ಅವುಗಳಿಗೆ ಮೂರ್ತಿ ಮತ್ತು ಈಶ್ವರನ್ ಎಂದು ಹೆಸರಿಟ್ಟಾದ್ದಾರೆ. ಈಗ ಎರಡೂ ಆನೆಗಳು ಸೌಮ್ಯಗೊಂಡಿದ್ದು, ಜನರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿವೆ.

ಮೂರ್ತಿ ಎಂಬ ಆನೆ ಪರಿವರ್ತನೆಗೊಳ್ಳುವುದಕ್ಕೂ ಮೊದಲು 22 ಮಂದಿಯನ್ನು ಕೊಂದಿತ್ತು. ಸದ್ಯ ಮಾವುತ ಕಿರುಮಾರನ್ ಅವರು ಮೂರ್ತಿಯನ್ನು ಯಾವ ಹಂತಕ್ಕೆ ತಿದ್ದಿದ್ದಾರೆಂದರೆ, ಅವರ ಮೊಮ್ಮಕ್ಕಳನ್ನು ಆನೆ ಬಳಿ ಆಟವಾಡಲು ಬಿಡುವಷ್ಟರ ಮಟ್ಟಿಗೆ.

ಈಶ್ವರನ್‌ನನ್ನು ಪಳಗಿಸುತ್ತಿರುವ ಮಾವುತ ವಾಸಿಮ್ ಮಾತ್ರ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಈಶ್ವರನ್‌ನನ್ನು ಪಳಗಿಸುವಾಗ ಮೂರು ಬಾರಿ ದಾಳಿಗೊಳಗಾಗಿ ಗಾಯಗೊಂಡಿರುವುದಾಗಿ ಅವರು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.