ADVERTISEMENT

ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ‘ನಾಟು..ನಾಟು..’

‘ಆಲ್‌ ದಟ್‌ ಬ್ರೀತ್‌’, ‘ಎಲಿಫೆಂಟ್ ವಿಸ್ಪರ್ಸ್‌’ ಸಾಕ್ಷ್ಯಚಿತ್ರಗಳ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 18:59 IST
Last Updated 24 ಜನವರಿ 2023, 18:59 IST
ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಗೀತೆಯ ದೃಶ್ಯ
ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಗೀತೆಯ ದೃಶ್ಯ   

ಲಾಸ್ ಏಂಜಲೀಸ್: ರಾಜಮೌಳಿ ನಿರ್ದೇಶನದ ತೆಲುಗಿನ ‘ಆರ್‌ಆರ್‌ಆರ್’ ಚಿತ್ರ ಆಸ್ಕರ್‌ ಪ್ರಶಸ್ತಿಗೆ ನಾಮಕರಣಗೊಂಡಿದೆ. ಅತ್ಯುತ್ತಮ ಮೂಲ ಗೀತೆ (ಒರಿಜಿನಲ್‌) ವರ್ಗದಲ್ಲಿ ಈ ಚಿತ್ರದ ‘ನಾಟು.. ನಾಟು...’ ಗೀತೆಯು ಸ್ಪರ್ಧೆಯಲ್ಲಿದೆ.

‘ಆಸ್ಕರ್’ ಹೆಸರಲ್ಲಿ ನೀಡುವ 95ನೇ ಅಕಾಡೆಮಿ ಅವಾರ್ಡ್ಸ್‌ಗೆ ಸ್ಪರ್ಧೆಯಲ್ಲಿರುವ ಚಿತ್ರಗಳ ವಿವರಗಳನ್ನು ಮಂಗಳವಾರ ಪ್ರಕಟಿಸಲಾಗಿದೆ. ‘ನಾವು ಇತಿಹಾಸ ಸೃಷ್ಟಿಸಿದೆವು..’ ಎಂದು ಆರ್‌ಆರ್‌ಆರ್ ಚಿತ್ರತಂಡ ತನ್ನ ವೆಬ್‌ಸೈಟ್‌ನಲ್ಲಿ ಸಂತಸ ಹಂಚಿಕೊಂಡಿದೆ.

ಭಾರತದ ಸಾಕ್ಷ್ಯಚಿತ್ರಗಳಾದ ’ಆಲ್‌ ದಟ್‌ ಬ್ರೀತ್‌‘, ‘ಎಲಿಫೆಂಟ್ ವಿಸ್ಪರ್ಸ್‌’ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ
ಯಲ್ಲಿವೆ. ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿದ್ದ ‘ದ ಲಾಸ್ಟ್ ಶೋ’ ಅಂತಿಮ ಐದರ ಸುತ್ತಿನಲ್ಲಿ ಸ್ಥಾನ ಪಡೆದಿಲ್ಲ.

ADVERTISEMENT

ಹಾಲಿವುಡ್‌ ನಟರಾದ ರಿಜ್‌ ಅಹ್ಮದ್ ಮತ್ತು ಅಲಿಸನ್‌ ವಿಲಿಯಮ್ಸ್‌ ಅವರು ಎಲ್ಲ 23 ವರ್ಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಚಿತ್ರಗಳ ವಿವರಗಳನ್ನು ಪ್ರಕಟಿಸಿದರು. ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 12ರಂದು ನಡೆಯಲಿದೆ.

‘ಟೆಲ್‌ ಇಟ್‌ ಲೈಕ್ ಎ ವುಮೆನ್‌’ ಚಿತ್ರದ ‘ಅಪ್ಲಾಸ್‌...’, ‘ಟಾಪ್‌ ಗನ್‌: ಮಾವೆರಿಕ್‌‘ ಚಿತ್ರದ ‘ಹೋಲ್ಡ್‌ ಮೈ ಹ್ಯಾಂಡ್..’, ಬ್ಲಾಕ್ ಪ್ಯಾಂಥರ್, ವಕಾಂಡಾ ಫಾರ್ ಎವೆರ್ ಚಿತ್ರದ ‘ಲಿಫ್ಟ್‌ ಮೀ ಅಪ್‌...’ ಮತ್ತು ‘ಎವೆರಿಥಿಂಗ್‌ ಎವೆರಿವೇರ್ ಆಲ್‌ ಅಟ್‌ ಒನ್ಸ್‌’ ಚಿತ್ರದ ‘ದಿಸ್‌ ಈಸ್‌ ದ ಲೈಫ್‌..’ ಆಸ್ಕರ್ ಪ್ರಶಸ್ತಿಗಾಗಿ ‘ಅತ್ಯುತ್ತಮ ಮೂಲಗೀತೆ ವರ್ಗ’ದಲ್ಲಿ ಸ್ಪರ್ಧೆಯಲ್ಲಿರುವ ಇತರೆ ಗೀತೆಗಳಾಗಿವೆ.

ಆರ್‌ಆರ್‌ಆರ್‌ ಚಿತ್ರದ, ಎಂ.ಎಂ.ಕೀರವಾಣಿ ಅವರು ಸಂಗೀತ ನಿರ್ದೇಶಿಸಿ, ಕಾಲಭೈರವ ಅವರು ಹಾಡಿರುವ ‘ನಾಟು ನಾಟು..’ ಈ ಮೂಲಕ ಮೂರನೇ ಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.

ಈ ಚಿತ್ರಗೀತೆಗಾಗಿ ಎಂ.ಎಂ.ಕೀರವಾಣಿ ಅವರು ಈಚೆಗೆ ‘ಗೋಲ್ಡನ್‌ ಗ್ಲೋಬ್’ ಮತ್ತು ಕಳೆದ ತಿಂಗಳು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅಲ್ಲದೆ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವರ್ಗದಲ್ಲಿ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗೆ ಆರ್‌ಆರ್‌ಆರ್ ಆಯ್ಕೆಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.