ADVERTISEMENT

ಘರ್ಜನೆಗೆ ಸಜ್ಜಾದ ಪಡ್ಡೆಹುಲಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:30 IST
Last Updated 4 ಏಪ್ರಿಲ್ 2019, 19:30 IST
ನಿಶ್ವಿಕಾ ನಾಯ್ಡು ಮತ್ತು ಶ್ರೇಯಸ್
ನಿಶ್ವಿಕಾ ನಾಯ್ಡು ಮತ್ತು ಶ್ರೇಯಸ್   

‘ಪಡ್ಡೆಹುಲಿ ಚಿತ್ರದ್ದು ಮಧ್ಯಮ ವರ್ಗದ ಹುಡುಗನ ಕಥೆ. ಅವನ ಬಾಲ್ಯ, ಯೌವ್ವನ, ಕಾಲೇಜು, ಗುರಿ, ಸಾಧನೆ ಎಲ್ಲವೂ ಚಿತ್ರದಲ್ಲಿ ಬಂದು ಹೋಗುತ್ತದೆ’ ಎಂದು ಮಾತು ಆರಂಭಿಸಿದರು ನಿರ್ದೇಶಕ ಗುರು ದೇಶಪಾಂಡೆ.

ಚಿತ್ರ ಇದೇ 19ರಂದು ತೆರೆಗೆ ಬರಲಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಚಿತ್ರದುರ್ಗದ ನೇಟಿವಿಟಿ ಚಿತ್ರದಲ್ಲಿ ಇದೆಯಂತೆ. ‘ನಮ್ಮ ನೆಲದ ಸಂಸ್ಕೃತಿ, ನಾಡಿನ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ’ ಎಂದು ಮಾತು ವಿಸ್ತರಿಸಿದರು ಗುರು ದೇಶಪಾಂಡೆ.

‘ಕನ್ನಡದ ಖ್ಯಾತ ಸಾಹಿತಿಗಳ ಐದು ಕವನಗಳನ್ನು ತೆಗೆದುಕೊಂಡಿದ್ದೇವೆ. ಸಂದರ್ಭಕ್ಕೆ ತಕ್ಕಂತೆ ತೆರೆಯ ಮೇಲೆ ಬರುತ್ತವೆ. ರಕ್ಷಿತ್‍ ಶೆಟ್ಟಿ ಗೌರವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದರು. ಮತ್ತೊಬ್ಬ ಸ್ಟಾರ್‌ ನಟ ಕೂಡ ನಟಿಸಿದ್ದು, ಇದರ ಬಗ್ಗೆ ಚಿತ್ರತಂಡ ಗುಟ್ಟು ಕಾಯ್ದುಕೊಂಡಿದೆ. ‘ನಾನು ಸೆಟ್‌ಗೆ ಹೋಗಿದ್ದು ಮೂರೇ ದಿನಗಳು. ಕಥೆ ಚೆನ್ನಾಗಿದೆ. ಶ್ರೇಯಸ್‌ ಫೈಟ್ ನೋಡಿ ಅವರ ಮೇಲೆ ನಂಬಿಕೆ ಬಂತು. ಅವರು ಹೊಸ ನಟ ಅನಿಸಲಿಲ್ಲ. ನಿರ್ದೇಶಕರು ಕೇಳಿದ್ದನೆಲ್ಲಾ ನೀಡಿದ್ದೇನೆ. ಚಿತ್ರವೂ ಚೆನ್ನಾಗಿ ಮೂಡಿಬಂದಿದೆ’ ಎಂದರು ನಿರ್ಮಾಪಕ ಎಂ. ರಮೇಶ್‍ ರೆಡ್ಡಿ. ‘ಭಾವಗೀತೆ, ರತ್ನನ ಪದಗಳು, ವಚನಗಳನ್ನು ಬಳಸಿಕೊಳ್ಳಲಾಗಿದೆ. ಇವುಗಳು ಈಗಾಗಲೇ ಪ್ರಸಿದ್ಧಿ ಪಡೆದಿವೆ. ಸೂಕ್ಷ್ಮವಾಗಿ ರಾಗ ಸಂಯೋಜನೆ ಮಾಡುವುದು ನಿಜಕ್ಕೂ ಸವಾಲಾಗಿತ್ತು. ಯುವಜನಾಂಗಕ್ಕೆ ಅರ್ಥಪೂರ್ಣ ಸಂದೇಶ ನೀಡಲಾಗಿದೆ’ ಎಂದರು ಸಂಗೀತ ನಿರ್ದೇಶಕ ಬಿ. ಅಜನೀಶ್‍ ಲೋಕನಾಥ್.

ADVERTISEMENT

‘ಹತ್ತು ಹಾಡಿನ ತುಣುಕುಗಳನ್ನು ಸೇರಿಸಿ ಮ್ಯಾಶ್‍ಅಪ್ ಮಾಡಿರುವುದನ್ನು ನೋಡಿದಾಗ ಸಂತಸವಾಯಿತು. ರವಿಚಂದ್ರನ್ ಸರ್‌ ಅಪ್ಪನ ಪಾತ್ರದಲ್ಲಿ ನಟಿಸಿ ಧೈರ್ಯ ತುಂಬಿದ್ದಾರೆ. ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್‌ ಅವರ ಪ್ರೋತ್ಸಾಹದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಇನ್ನೇನಿದ್ದರೂ ಜನರು ಒಪ್ಪಬೇಕು’ ಎಂದಷ್ಟೇ ಹೇಳಿದರು ನಾಯಕ ಶ್ರೇಯಸ್.

ನಿರ್ಮಾಪಕ ಕೆ. ಮಂಜು, ‘ಪ್ರಸ್ತುತ ಸಿನಿಮಾಗಳಲ್ಲಿ ಗಟ್ಟಿತನವಿಲ್ಲ. ಹಾಗಾಗಿ, ಹೆಚ್ಚುದಿನ ಚಿತ್ರಮಂದಿರದಲ್ಲಿ ಉಳಿಯುತ್ತಿಲ್ಲ. ಕೆಟ್ಟ ಚಿತ್ರಗಳಿಗೆ ಕಡಿವಾಣ ಹಾಕುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೋರಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.