ADVERTISEMENT

‘ಪೈಲ್ವಾನ್‌‘ ಕುಸ್ತಿಗೆ ದಿನಾಂಕ ಫಿಕ್ಸ್‌

ಆಗಸ್ಟ್‌ 29ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:30 IST
Last Updated 18 ಜುಲೈ 2019, 19:30 IST
‘ಪೈಲ್ವಾನ್‌’ ಚಿತ್ರದಲ್ಲಿ ಸುದೀಪ್
‘ಪೈಲ್ವಾನ್‌’ ಚಿತ್ರದಲ್ಲಿ ಸುದೀಪ್   

ನಟ ಸುದೀಪ್‌ ನಟನೆಯ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರ ಆಗಸ್ಟ್ 29ರಂದು ಕನ್ನಡ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಕಾಣಲಿದೆ. ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರತಂಡ ಪ್ರಚಾರ ಆರಂಭಿಸಿದೆ. ಜುಲೈ 27ರಂದು ಚಿತ್ರದುರ್ಗದಲ್ಲಿ ಆಡಿಯೊ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೂ ಮೊದಲು ಮೂರು ಹಾಡುಗಳನ್ನು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

‘ಹೆಬ್ಬುಲಿ’ ಚಿತ್ರದ ಬಳಿಕ ಸುದೀಪ್‌ ಮತ್ತು ಕೃಷ್ಣ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಹಾಗಾಗಿ, ಚಂದನವನದಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಮಲಯಾಳ ಭಾಷೆ ಹೊರತುಪಡಿಸಿ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಅವತರಣಿಕೆಯ ತಮ್ಮ ಪಾತ್ರಕ್ಕೆ ಸುದೀಪ್‌ ಅವರೇ ಡಬ್ಬಿಂಗ್‌ ಮಾಡಿದ್ದಾರಂತೆ.

ಚಿತ್ರದ ಶೇಕಡ 90ರಷ್ಟು ಭಾಗವನ್ನು ಸೆಟ್‌ನಲ್ಲಿಯೇ ಚಿತ್ರೀಕರಿಸಲಾಗಿದೆಯಂತೆ. ಆಗಸ್ಟ್‌ ಮೊದಲ ವಾರ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಹೋಗಲು ಚಿತ್ರತಂಡ ತೀರ್ಮಾನಿಸಿದೆ.

ADVERTISEMENT

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಮೊದಲ ಬಾರಿಗೆ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ನಿರ್ದೇಶಕ ಕೃಷ್ಣ, ‘ಇದು ನೈಜ ಕಥೆಯಲ್ಲ. ಕಾಲ್ಪನಿಕ ಕಥೆ. ಕುಸ್ತಿ ಕುರಿತು ಬಂದ ಹಲವು ಸಿನಿಮಾಗಳೇ ಪೈಲ್ವಾನ್‌ಗೆ ಸ್ಫೂರ್ತಿ’ ಎಂದು ಸ್ಪಷ್ಟಪಡಿಸಿದರು.

‘ಹೈದರಾಬಾದ್‌ನಲ್ಲಿ ಕುಸ್ತಿ ಅಖಾಡದ ಸೆಟ್‌ ಹಾಕಲಾಗಿತ್ತು. ಸುಡುತ್ತಿದ್ದ ಮಣ್ಣಿನಲ್ಲಿಯೇ ಸುದೀಪ್‌ ಕುಸ್ತಿಗೆ ಇಳಿದರು. ಕೆಲವು ದೃಶ್ಯಗಳಿಗೆ ಡೂಪ್‌ ಬಳಸುವುದಾಗಿ ಹೇಳಿದೆ. ಹಾಗೆ ಮಾಡಿದರೆ ಮತ್ತೆ ನಾನು ಸೆಟ್‌ಗೆ ಬರುವುದಿಲ್ಲ ಎಂದರು. ಎಲ್ಲಾ ಎಡರುತೊಡರು ಎದುರಿಸಿ ಪೈಲ್ವಾನ್‌ಗೆ ಜೀವ ತುಂಬಿದ್ದಾರೆ’ ಎಂದು ವಿವರಿಸಿದರು.

ನಟ ಸುದೀಪ್ ಅವರಿಗೆ ಮೊದಲಿಗೆ ಬಟ್ಟೆ ಇಲ್ಲದೆ ಕುಸ್ತಿಯ ಅಖಾಡಕ್ಕೆ ಇಳಿಯುವುದಕ್ಕೆ ಮುಜುಗರವಾಗುತ್ತಿತ್ತಂತೆ. ‘ನಾನು ಮೊದಲಿಗೆ ಕಣ್ಣು ಮುಚ್ಚಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದೆ. ಕೊನೆಗೆ, ಪೈಲ್ವಾನ್‌ ಧಿರಿಸು ಇಷ್ಟವಾಯಿತು. ಅದು ನನಗೆ ಖುಷಿ ಕೊಟ್ಟಿತು’ ಎಂದು ಹೇಳಿಕೊಂಡರು.

‘ಕೃಷ್ಣ ಅವರ ಪ್ರಾಮಾಣಿಕತೆ ಮತ್ತು ಶ್ರಮ ತೆರೆಯ ಮೇಲೆ ಕಾಣುತ್ತದೆ. ಇದಕ್ಕೆ ಎಲ್ಲರಿಂದಲೂ ಪ್ರಶಂಸೆ ಸಿಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಮ್‌ ಎಂದರೆ ನನಗೆ ಅಲರ್ಜಿ. ನಾನು ಇಷ್ಟಪಟ್ಟು ಜಿಮ್‌ನಲ್ಲಿ ಬೆವರು ಸುರಿಸಿಲ್ಲ. ಚಿತ್ರ ಒಪ್ಪಿಕೊಂಡ ಮೇಲೆ ಪೂರ್ಣಗೊಳಿಸುವುದು ನನ್ನ ಜವಾಬ್ದಾರಿ. ಹಲವು ಕಷ್ಟಗಳನ್ನು ಎದುರಿಸಿದರೂ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ’ ಎಂದು ಖುಷಿ ಹಂಚಿಕೊಂಡರು.

‘ಕೇವಲ ಕುಸ್ತಿಯಷ್ಟೇ ಚಿತ್ರದಲ್ಲಿಲ್ಲ. ಭಾವನಾತ್ಮಕ ದೃಶ್ಯಗಳು ಇವೆ. ಈ ಚಿತ್ರಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದೇನೆ. ಮತ್ತೆ ಇದರ ಮುಂದುವರಿದ ಭಾಗದಲ್ಲಿ ನಟಿಸುವುದಿಲ್ಲ. ಆದರೆ, ಅದರಲ್ಲಿ ಕೋಚ್‌ ಪಾತ್ರ ನೀಡಿದರೆ ನಟಿಸಲು ಸಿದ್ಧ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಿರ್ಮಾಪಕಿ ಸ್ವಪ್ನ ಕೃಷ್ಣ, ‘ಕಿರುತೆರೆಯಲ್ಲಿದ್ದ ನನಗೆ ಹಿರಿತೆರೆಯದ್ದು ಹೊಸ ಅನುಭವ. ಸುದೀಪ್‌ ಅವರ ಸಹಾಯವನ್ನು ನಾವೆಂದಿಗೂ ಮರೆಯುವುದಿಲ್ಲ’ ಎಂದು ಭಾವುಕರಾದರು.

ಆಕಾಂಕ್ಷಾ ಸಿಂಗ್‌ ಈ ಚಿತ್ರದ ನಾಯಕಿ. ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ, ಕಬೀರ್ ದುಹಾನ್‌ ಸಿಂಗ್‌, ಶರತ್‌ ಲೋಹಿತಾಶ್ವ ತಾರಾಗಣದಲ್ಲಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಕರುಣಾಕರ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.