ADVERTISEMENT

ಮಾಲಿನಿ 22 ಪಲಯಮ್‌ಕೊಟ್ಟೈ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 20:12 IST
Last Updated 20 ಜೂನ್ 2018, 20:12 IST
   

ಕಾಮುಕ ವ್ಯಾಘ್ರತನದ ಮೇಲೆ ಪ್ರೇಮದ ಮುಖವಾಡ ಧರಿಸಿ ಹೆಣ್ಣನ್ನು ಮೋಸ ಮಾಡಿ ವಂಚಿಸುವುದು ಹೊಸ ವಿಷಯವೇನಲ್ಲ. ಹಲವು ಸಿನಿಮಾಗಳಿಗೆ ಇದು ವಸ್ತುವಾಗಿದೆ. ಆದರೆ ಅದಕ್ಕೆ ಹೆಣ್ಣಿನಿಂದಲೇ ಸಮರ್ಥ ಪ್ರತಿಭಟನೆ ವ್ಯಕ್ತವಾಗುವುದು, ಅವಳೇ ಸಿಡಿದೆದ್ದು ‘ಪಾಠ’ ಕಲಿಸುವುದನ್ನು ತೋರಿಸುವಂಥ ಸಿನಿಮಾಗಳು ಕೊಂಚ ಕಡಿಮೆಯೇ. ಅದರಲ್ಲಿಯೂ ಇಂಥ ಕಥನಗಳನ್ನು ಕಟ್ಟುವವಳೂ ಹೆಣ್ಣೇ ಆಗಿದ್ದಾಗ ಅದರ ಮಹತ್ವ ಹೆಚ್ಚು.

‘ಮಾಲಿನಿ 22 ಪಲಯಮ್‌ಕೊಟ್ಟೈ’ ಸಿನಿಮಾ ಹೀಗೆ ಅನ್ಯಾಯಕ್ಕೊಳಗಾದ ಹೆಣ್ಣುಮಗಳೊಬ್ಬಳು ದುರುಳರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥನ. 2014ರಲ್ಲಿ ಬಿಡುಗಡೆಯಾದ ಈ ತೆಲುಗು ಸಿನಿಮಾ ನಿರ್ದೇಶಿಸಿದ್ದು ಶ್ರೀಪ್ರಿಯಾ. ಇವರು ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಯಾಗಿ ‌ಗುರ್ತಿಸಿಕೊಂಡವರು.

ಚಿತ್ರದ ನಾಯಕಿ ಮಾಲಿನಿ ನರ್ಸಿಂಗ್ ವಿದ್ಯಾರ್ಥಿನಿ. ಕೆನಡಾ ದೇಶಕ್ಕೆ ಹೋಗಿ ವೃತ್ತಿಬದುಕನ್ನು ರೂಪಿಸಿಕೊಳ್ಳುವ ಕನಸು ಕಟ್ಟಿಕೊಂಡವಳು. ಅವಳನ್ನು ಟ್ರಾವೆಲಿಂಗ್ ಏಜನ್ಸಿಯ ವರುಣ್ ಪ್ರೇಮಿಸುವ ನಾಟಕವಾಡಿ ಮೋಸಗೊಳಿಸುತ್ತಾನೆ. ಅವನ ಮೇಲಾಧಿಕಾರಿಯೂ ಅವನ ಜತೆ ಶಾಮೀಲಾಗಿರುತ್ತಾನೆ. ಕೊನೆಗೆ ಅವರ ತಂತ್ರಕ್ಕೆ ಬಲಿಯಾಗಿ ಮಾಲಿನಿ ಜೈಲಿಗೂ ಸೇರಬೇಕಾಗುತ್ತದೆ. ಜೈಲಿನಿಂದ ಹೊರಬಂದ ಮಾಲಿನಿ ತನ್ನನ್ನು ವಂಚಿಸಿದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಈ ಚಿತ್ರದ ಕಥೆ.

ADVERTISEMENT

ಬಿಗಿಯಾದ ಚಿತ್ರಕಥೆ, ಹದವಾದ ಸಂಗೀತ ಮತ್ತು ನಿತ್ಯಾ ಮೆನನ್‌ಳ ಪ್ರಬುದ್ಧ ನಟನೆ ಈ ಚಿತ್ರದ ಹೈಲೈಟ್ಸ್‌. ಕನಸುಗಂಗಳ ಹುಡುಗಿಯಾಗಿ, ಅಸಹಾಯಕ ಹೆಣ್ಣಾಗಿ, ಸಿಡಿದೆದ್ದ ರೋಷಾಗ್ನಿಯ ಮುಖವಾಗಿ ಅವರು ಮೂರು ಛಾಯೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪಕ್ಕಾ ಕಮರ್ಷಿಯಲ್ ಮಾದರಿಯ ಚಿತ್ರ. ತೀರಾ ತಾರ್ಕಿಕ ಸೂಕ್ಷ್ಮಗಳನ್ನಾಗಲಿ, ನೈತಿಕ ಪ್ರಶ್ನೆಗಳನ್ನಾಗಲಿ ಹುಟ್ಟಿಸುವ ಚಿತ್ರ ಅಲ್ಲ. ಆದರೆ ಕಮರ್ಷಿಯಲ್ ಚೌಕಟ್ಟಿನಲ್ಲಿಯೇ ಮಹಿಳಾ ಶೋಷಣೆಯ ವಿರುದ್ಧ ಪ್ರತಿಭಟನೆಯ ಧ್ವನಿ ಹೊರಡಿಸುವ ಕಾರಣಕ್ಕೆ ಇಷ್ಟವಾಗುತ್ತದೆ. ಅಂತರ್ಜಾಲದಲ್ಲಿhttps://bit.ly/2kVaLEA ಕೊಂಡಿ ಬಳಸಿ ಚಿತ್ರ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.