‘ಬಘೀರ’ ಚಿತ್ರದ ಬೆನ್ನಲ್ಲೇ ನಟ ಶ್ರೀಮುರಳಿ ಅವರ ಹೊಸ ಪ್ರಾಜೆಕ್ಟ್ ಸೆಟ್ಟೇರಿದೆ. ಹಾಲೇಶ್ ಕೋಗುಂಡಿ ಆ್ಯಕ್ಷನ್ ಕಟ್ ಹೇಳಲಿರುವ ‘ಪರಾಕ್’ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶ್ರೀಮುರಳಿ, ‘ಪರಾಕ್’ ಒಂದು ವಿಂಟೇಜ್ ಸ್ಟೈಲ್‌ನಲ್ಲಿ ನಡೆಯುವ ಸಿನಿಮಾ. ಮೊದಲು ಈ ಸಿನಿಮಾವನ್ನು ಅಚ್ಚುಕಟ್ಟಾಗಿ ಕನ್ನಡದಲ್ಲೇ ಮಾಡಲಿದ್ದೇವೆ. ನಂತರ ಬೇರೆಕಡೆ ತೆಗೆದುಕೊಂಡು ಹೋಗಬಹುದು ಎನ್ನಿಸಿದರೆ ಮಾತ್ರ ಬೇರೆ ಭಾಷೆಗಳಿಗೆ ಡಬ್ ಮಾಡಲಿದ್ದೇವೆ. ‘ಉಗ್ರಂ’ ಬಳಿಕ ಒಳ್ಳೊಳ್ಳೆಯ ಸಿನಿಮಾಗಳನ್ನೇ ಮಾಡುತ್ತಾ ಬಂದೆ. ‘ಬಘೀರ’ ಬಳಿಕ ಬಹಳ ಗೊಂದಲವಿತ್ತು. ಯಾವ ರೀತಿಯ ಕಥೆ, ಸಿನಿಮಾಗಳನ್ನು ಮಾಡಬೇಕು ಎನ್ನುವ ಪ್ರಶ್ನೆ ಎದ್ದಿತ್ತು. ಈ ಅವಧಿಯಲ್ಲಿ ಸುಮಾರು 200 ಕಥೆಗಳನ್ನು ಕೇಳಿದ್ದೇನೆ. ಎರಡು ವರ್ಷಗಳ ಹಿಂದೆಯೇ ‘ಪರಾಕ್’ ಕಥೆ ಕೇಳಿದ್ದೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಮುಂದೆ ಆದಷ್ಟು ವೇಗದಲ್ಲಿ ಸಿನಿಮಾಗಳನ್ನು ಮಾಡಲಿದ್ದೇನೆ. ಚರಣ್ ರಾಜ್ ಸಂಗೀತ ನಿರ್ದೇಶನ ಈ ಸಿನಿಮಾಗಿರಲಿದೆ. ಇದು ನನ್ನ ಅವರ ಕಾಂಬಿನೇಷನ್‌ನ ಮೊದಲ ಸಿನಿಮಾ. ‘ಬಘೀರ’ ಜೊತೆ ಇದನ್ನು ಹೋಲಿಸಲು ಸಾಧ್ಯವಿಲ್ಲ. ಇದು ಬೇರೆ ಲೋಕಕ್ಕೇ ಪ್ರೇಕ್ಷಕರನ್ನು ಕರೆದೊಯ್ಯಲಿದೆ’ ಎಂದರು.
ಕಿರುಚಿತ್ರಗಳನ್ನು ಮಾಡಿ ಅನುಭವಹೊಂದಿರುವ ಹಾಲೇಶ್ ಕೋಗುಂಡಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ‘ಪರಾಕ್’ ಸಿನಿಮಾ ನಿರ್ಮಾಣವಾಗುತ್ತಿದೆ. ಚರಣ್ ರಾಜ್ ಸಂಗೀತ, ಸಂದೀಪ್ ವಲ್ಲುರಿ ಛಾಯಾಚಿತ್ರಗ್ರಹಣ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ, ಇಂಚರಾ ಸುರೇಶ್ ವಸ್ತ್ರವಿನ್ಯಾಸ ಚಿತ್ರಕ್ಕಿದೆ. ಶೀಘ್ರದಲ್ಲೇ ತಾರಾಬಳಗದ ಮಾಹಿತಿಯನ್ನು ನೀಡಲಾಗುವುದು ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.