ADVERTISEMENT

ರಮೇಶ್‌ ಅರವಿಂದ್‌ ನಿರ್ದೇಶನದ ‘ಪ್ಯಾರಿಸ್ ಪ್ಯಾರಿಸ್‌’ ಒಟಿಟಿಯಲ್ಲಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 10:25 IST
Last Updated 20 ಜುಲೈ 2020, 10:25 IST
‘ಪ್ಯಾರಿಸ್‌ ಪ್ಯಾರಿಸ್’ ಚಿತ್ರದಲ್ಲಿ ಕಾಜಲ್‌ ಅಗರ್‌ವಾಲ್
‘ಪ್ಯಾರಿಸ್‌ ಪ್ಯಾರಿಸ್’ ಚಿತ್ರದಲ್ಲಿ ಕಾಜಲ್‌ ಅಗರ್‌ವಾಲ್   

ಹಿಂದಿಯ ‘ಕ್ವೀನ್‌’ ಚಿತ್ರವು ಕನ್ನಡದಲ್ಲಿ ‘ಬಟರ್‌ಫ್ಲೈ’ ಮತ್ತು ತಮಿಳಿನಲ್ಲಿ ‘ಪ್ಯಾರಿಸ್‌ ಪ್ಯಾರಿಸ್‌’ ಹೆಸರಿನಡಿ ನಿರ್ಮಾಣವಾಗಿರುವುದು ಎಲ್ಲರಿಗೂ ತಿಳಿದಿದೆ. ಈ ಎರಡೂ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವುದು ನಟ ರಮೇಶ್‌ ಅರವಿಂದ್‌. ಈಗಾಗಲೇ, ಇವುಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪೂರ್ಣಗೊಂಡು ಹಲವು ದಿನಗಳೇ ಕಳೆದಿವೆ.

ಕನ್ನಡ ಅವತರಣಿಕೆಯಲ್ಲಿ ಪಾರೂಲ್‌ ಯಾದವ್‌ ನಟಿಸಿದ್ದಾರೆ. ತಮಿಳು ಅವತರಣಿಕೆಯಲ್ಲಿ ಬಣ್ಣ ಹಚ್ಚಿರುವುದು ನಟಿ ಕಾಜಲ್‌ ಅಗರ್‌ವಾಲ್. ಯಾವಾಗ ಈ ಸಿನಿಮಾಗಳು ತೆರೆ ಕಾಣುತ್ತವೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ತಮಿಳಿನ ‘ಪ್ಯಾರಿಸ್‌ ಪ್ಯಾರಿಸ್‌’ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಶೀಘ್ರವೇ ಬಿಡುಗಡೆಯಾಗುವುದು ಖಾತ್ರಿಯಾಗಿದೆ. ಆದರೆ, ಇನ್ನೂ ಅಧಿಕೃತ ದಿನಾಂಕ ಪ್ರಕಟಗೊಂಡಿಲ್ಲ. ಕಳೆದ ವರ್ಷವೇ ಈ ಚಿತ್ರ ತೆರೆ ಕಾಣಬೇಕಿತ್ತು. ಅದರೆ, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು 25 ಕಟ್‌ಗಳ ಮೂಲಕ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿತು. ಹಾಗಾಗಿ, ನಿರ್ಮಾಪಕರು ಪರಿಶೀಲನಾ ಸಮಿತಿಯ ಮೊರೆ ಹೋಗಬೇಕಾಯಿತು. ಹಾಗಾಗಿ, ಸಿನಿಮಾ ಬಿಡುಗಡೆಗೆ ವಿಳಂಬವಾಗಿದೆ ಎಂಬುದು ಚಿತ್ರತಂಡದ ಸ್ಪಷ್ಟನೆ.

ADVERTISEMENT

ಪ್ರಸ್ತುತ ಚಿತ್ರಮಂದಿರಗಳು ತೆರೆಯುವುದು ಅನಿಶ್ಚಿತತೆಯಿಂದ ಕೂಡಿದೆ. ಹಾಗಾಗಿ, ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿದೆಯಂತೆ.

ಅಂದಹಾಗೆ ತೆಲುಗಿನಲ್ಲೂ ಈ ಚಿತ್ರ ‘ದಟ್‌ ಈಸ್‌ ಮಹಾಲಕ್ಷ್ಮಿ’ ಹೆಸರಿನಡಿ ರಿಮೇಕ್‌ ಆಗಿದೆ. ಇದಕ್ಕೆ ಪ್ರಶಾಂತ್‌ ವರ್ಮ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದರಲ್ಲಿ ತಮನ್ನಾ ಭಾಟಿಯಾ ‘ಮಹಾಲಕ್ಷ್ಮಿ’ ಪಾತ್ರದಲ್ಲಿ ನಟಿಸಿದ್ದಾರೆ. ‘ಪ್ಯಾರಿಸ್‌ ಪ್ಯಾರಿಸ್‌’ ಮತ್ತು ‘ದಟ್‌ ಈಸ್‌ ಮಹಾಲಕ್ಷ್ಮಿ’ ಸಿನಿಮಾಗಳು ಮಾತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯಂತೆ. ಕನ್ನಡ ಅವತರಣಿಕೆಯಾದ ‘ಬಟರ್‌ಫ್ಲೈ’ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆಯೇ ಎಂಬುದು ಇನ್ನೂ ಅಧಿಕೃತಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.