ADVERTISEMENT

ಗೆದ್ದ ಪತ್ತಾರ್‌ಗೆ ಸಿಕ್ಕಿತು ಸೈಟು!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:30 IST
Last Updated 22 ಆಗಸ್ಟ್ 2019, 19:30 IST
ಓಂಕಾರ್‌ ಪತ್ತಾರ್‌
ಓಂಕಾರ್‌ ಪತ್ತಾರ್‌   

ಅತ್ತ ‌ವಾಸದ ಮನೆ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದರೂ ಅಲ್ಲಿ ದುಃಖ ನುಂಗಿಕೊಂಡು,ಇತ್ತ ನಗುತ್ತಲೇಸಂಗೀತದ ರಾಗಸುಧೆ ಹರಿಸಿದ ಪೋರ ಈ ಬಾರಿಯ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16’ರ ಚಾಂಪಿಯನ್‌. ಅಲ್ಲದೆ, ಆತನ ದುಃಖ ಶಮನಗೊಳಿಸುವಂತೆ ಬೆಂಗಳೂರಿನಲ್ಲಿ ₹30 ಲಕ್ಷದ ನಿವೇಶನವೂ ಬಹುಮಾನವಾಗಿಸಿಕ್ಕಿದೆ.

ಹೌದು,ಜೀ ಕನ್ನಡ ವಾಹಿನಿಯ ಮ್ಯೂಸಿಕ್ ರಿಯಾಲಿಟಿ ಶೋ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16’ರ ಗ್ರಾಂಡ್‌ ಫಿನಾಲೆಯಲ್ಲಿ ವಿಜೇತನಾದ ಓಂಕಾರ್ ಪತ್ತಾರ್‌ನ ಯಶೋಗಾಥೆ ಇದು.

ಉದಯೋನ್ಮುಖ ಗಾಯಕ ಓಂಕಾರ್‌, ಅಕ್ಕಸಾಲಿಗ ಕೃಷ್ಣ ಪತ್ತಾರ್‌ ಮತ್ತು ಮುಕ್ತಾ ಪತ್ತಾರ್‌ ದಂಪತಿಯ ಪುತ್ರ.ಗೋಕಾಕದ ಶಂಕರಲಿಂಗ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಚಿಕ್ಕಂದಿನಿಂದಲೂ ಸಂಗೀತದ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದ. ಭಕ್ತಿ ಗೀತೆಗಳನ್ನು ತೊದಲು ನುಡಿಯಲ್ಲಿ ಹಾಡುತ್ತಿದ್ದ. ಅದನ್ನು ಶಿಕ್ಷಕರು ಗುರುತಿಸಿ, ಸಂಗೀತ ಕಲಿಯಲು ಹಚ್ಚಿದರು. ಗುರುಪಾದ ಮದನ್ನವರ್‌ ಆತನ ಸಂಗೀತ ಶಿಕ್ಷಕರು.

ADVERTISEMENT

ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಸಂಭವಿಸಿದಪ್ರವಾಹದಿಂದ ಗೋಕಾಕ್‌ನಲ್ಲಿ ಓಂಕಾರ್ ಮನೆ ಪ್ರವಾಹಕ್ಕೆ ಸಿಕ್ಕಿ, ಸಂಪೂರ್ಣ ಹಾಳಾಗಿದೆ. ಆಗಓಂಕಾರ್ ಹಾಗೂ ಆತನ ತಾಯಿ ಈ ರಿಯಾಲಿಟಿ ಶೋ ಕಾರಣಕ್ಕೆಬೆಂಗಳೂರಿನಲ್ಲಿದ್ದರು. ಪ್ರವಾಹದಲ್ಲಿ ಮನೆ ಮುಳುಗಿರುವುದನ್ನು ಓಂಕಾರ್‌ ತಂದೆ ತಿಳಿಸಿದಾಗ, ತಾಯಿ ದುಃಖ ತಡೆಯಲಾಗದೆ ಕಣ್ಣೀರು ಹಾಕಿದ್ದರಂತೆ. ಈ ನೋವನ್ನು ಮರೆತು, ಓಂಕಾರ್‌ ರಿಯಾಲಿಟಿ ಶೋನಲ್ಲಿ ಗಾಯನ ಮುಂದುವರಿಸಿದರು. ಸಂಗೀತಪ್ರಿಯರ ಮನವನ್ನೂ ಮನಗೆದ್ದರು. ‘ಕಲಾವಿದನಿಗೆ ಇರಬೇಕಾದ ನಿಷ್ಠೆ ಮತ್ತು ಬದ್ಧತೆ ನಿನ್ನಲ್ಲಿರುವುದರಿಂದ ಅದು ಮುಂದೆ ನಿನಗೆ ಪ್ರತಿಷ್ಠೆಯನ್ನು ತಂದುಕೊಡಲಿದೆ’ ಎಂದು ಹಂಸಲೇಖ ಅವರು, ಓಂಕಾರ್‌ನನ್ನು ಬೆನ್ನು ತಟ್ಟಿದ್ದಾರೆ.

‘ಓಂಕಾರ್‌ ಸಂಗೀತ ಕ್ಷೇತ್ರದಲ್ಲಿಯೇ ಮುಂದುವರಿಯುವ ಗುರಿಯನ್ನು ಇಟ್ಟುಕೊಂಡಿದ್ದಾನೆ’ ಎನ್ನುತ್ತಾರೆ ಈ ಬಾಲಕನ ತಂದೆ ಕೃಷ್ಣ ಪತ್ತಾರ್‌. ನೆಲೆ ಕಳೆದುಕೊಂಡಿರುವ ಓಂಕಾರ್‌ ಕುಟುಂಬಸದ್ಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದೆ.

ಜನಮನ ಸೆಳೆದ ಶೋ: 30 ಜಿಲ್ಲೆಗಳಲ್ಲಿ ನಡೆದ ಆಡಿಷನ್‌ನಲ್ಲಿ ಭಾಗವಹಿಸಿದ್ದ ಸಾವಿರಾರು ಪ್ರತಿಭೆಗಳ ಪೈಕಿ 19 ಸ್ಪರ್ಧಿಗಳು ಈ ಶೋಗೆಆಯ್ಕೆಯಾಗಿದ್ದರು. ಇವರಲ್ಲಿ ಆರು ಸ್ಪರ್ಧಿಗಳು ಫೈನಲ್ ಹಂತಕ್ಕೆ ಬಂದಿದ್ದರು.ಓಂಕಾರ್‌ಗೆ ಅಂತಿಮವಾಗಿ ವಿಜಯಲಕ್ಷ್ಮಿ ಒಲಿದರೆ, ಈ ಪೋರನಿಗೆ ಪೈಪೋಟಿ ನೀಡಿದ ಗುರುಕಿರಣ್ ಹೆಗಡೆ ಮೊದಲ ರನ್ನರ್ ಅಪ್, ಸುನಾದ್ ಪ್ರಸಾದ್ ಎರಡನೇ ರನ್ನರ್ ಅಪ್,ಅಭಿಸ್ಯಂತ್ ಮೂರನೇ ರನ್ನರ್ ಅಪ್ ಆದರು. 23 ವಾರಗಳ ಕಾಲ ನಡೆದ ‘ಸರಿಗಮಪ ಲಿಟಲ್ ಚಾಂಪ್ಸ್’ ವೀಕ್ಷಕರ ಮನರಂಜಿಸಿತು. ಫಿನಾಲೆ ಸ್ಪರ್ಧಿಗಳೆಲ್ಲರೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಸೂರೆಗೊಂಡರು.

ಫಿನಾಲೆಯಲ್ಲಿ ಎಲ್ಲರ ಮನಗೆದ್ದಗುರುಕಿರಣ್‌ ₹5ಲಕ್ಷ, ಸುನಾದ್ ₹3 ಲಕ್ಷ ನಗದು ಬಹುಮಾನ ಪಡೆದರು.ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಫಿನಾಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಂಗೀತ ಪ್ರೇಮಿಗಳು ಭಾಗವಹಿಸಿದ್ದರು. ಅನುಶ್ರೀ ನಿರೂಪಣೆ, ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರ ಮಾತು ಕಾರ್ಯಕ್ರಮಕ್ಕೆ ಸೊಗಸು ತುಂಬಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.