ಪವನ್ ಕಲ್ಯಾಣ್
ಅಮರಾವತಿ: ತೆಲುಗು ನಟ ಹಾಗೂ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ನಟನಿಗೆ ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಪವನ್ ಅಸಂಖ್ಯಾತ ಜನರ ಹೃದಯಗಳನ್ನು ಗೆದ್ದಿದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದು, ಆಂಧ್ರಪ್ರದೇಶದಲ್ಲಿ ಸರ್ಕಾರವನ್ನು ಬಲಪಡಿಸುತ್ತಿದ್ದಾರೆ. ಅವರಿಗೆ ಆಯಸ್ಸು, ಆರೋಗ್ಯ ಸಿಗಲಿ ಎಂದು ಹಾರೈಸಿದ್ದಾರೆ.
ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಒಬ್ಬ ಉತ್ತಮ ಸ್ನೇಹಿತ. ಸಾಮಾಜಿಕ ಪ್ರಜ್ಞೆಯೊಂದಿಗೆ ಜನರ ಸಮಸ್ಯೆಗಳ ಪರವಾಗಿ ನಿಲ್ಲುತ್ತಿದ್ದಾರೆ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಣ್ಣಿಸಿದ್ದಾರೆ.
'ಕೊಟ್ಟ ಮಾತಿನಂತೆ ಪವನ್ ನಡೆದುಕೊಳ್ಳುತ್ತಾರೆ. ಕಷ್ಟಗಳಿಗೆ ಸ್ಪಂದಿಸುವ ಹೃದಯ ಹೊಂದಿರುವ ಅವರು ರಾಜಕೀಯದ ಮೌಲ್ಯಗಳಿಗೆ ಬದ್ಧರಾಗಿದ್ದಾರೆ' ಎಂದೂ ನಾಯ್ಡು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
1996ರಲ್ಲಿ ತೆರೆಕಂಡ 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪವನ್ ಕಲ್ಯಾಣ್ ಪದಾರ್ಪಣೆ ಮಾಡಿದರು. ಥೋಲಿ ಪ್ರೇಮ, ಭದ್ರಿ, ಖುಷಿ ಸೇರಿದಂತೆ 33ಕ್ಕೂ ಹೆಚ್ಚು ಚಿತ್ರಗಳಲ್ಲಿ ಪವನ್ ನಟಿಸಿದ್ದಾರೆ. ಅವರು ನಟಿಸಿದ್ದ ಅನೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿವೆ.
2014ರಲ್ಲಿ ಜನ ಸೇನಾ ಪಕ್ಷವನ್ನು ಸ್ಥಾಪಿಸಿದರು. ಕಳೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 175 ವಿಧಾನಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಜನ ಸೇನಾ ಪಕ್ಷ ಗೆಲುವು ಸಾಧಿಸಿದೆ. ಆ ಮೂಲಕ ಪವನ್ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.