ADVERTISEMENT

ನಟ ಶಾರುಖ್‌ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

‘ಜೀರೊ‘ ಚಿತ್ರದ ಟ್ರೇಲರ್‌ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ

ಪಿಟಿಐ
Published 8 ನವೆಂಬರ್ 2018, 20:26 IST
Last Updated 8 ನವೆಂಬರ್ 2018, 20:26 IST
'ಜೀರೊ’ ಚಿತ್ರದ ಟ್ರೇಲರ್ ಬಿಡುಗಡೆಯಲ್ಲಿ ನಟ ಶಾರುಖ್‌ ಖಾನ್‌
'ಜೀರೊ’ ಚಿತ್ರದ ಟ್ರೇಲರ್ ಬಿಡುಗಡೆಯಲ್ಲಿ ನಟ ಶಾರುಖ್‌ ಖಾನ್‌   

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್ ಅವರು ತಮ್ಮ ಅಭಿನಯದ ‘ಜೀರೊ’ ಚಿತ್ರದ ಟ್ರೇಲರ್‌ನಲ್ಲಿ ಸಿಖ್‌ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಶಾರುಖ್‌ ಅಲ್ಲದೆ ಚಿತ್ರದ ನಿರ್ಮಾಪಕರಾದ ಗೌರಿ ಖಾನ್ ಮತ್ತು ಕರುಣಾ ಬದ್ವಾಲ್‌, ನಿರ್ದೇಶಕ ಆನಂದ್‌ ಎಲ್‌. ರಾಯ್‌, ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಪ್ರೈವೇಟ್ ಲಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಹಾಗೂ ಸಿಇಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು, ಅರ್ಜಿ ಸಲ್ಲಿಸಿರುವ ವಕೀಲ ಅಮೃತ್‌ ಪಾಲ್‌ ಸಿಂಗ್ ಖೋಸ್ಲಾ ಆಗ್ರಹಿಸಿದ್ದಾರೆ.

ಟ್ರೇಲರ್‌ನಲ್ಲಿ ಶಾರುಖ್‌ ಅವರು ತೋಳಿಲ್ಲದ ಅಂಗಿ ಮತ್ತು ಚಡ್ಡಿ ಧರಿಸಿದ್ದಾರೆ. ಕುತ್ತಿಗೆಗೆ ₹500ರ ನೋಟುಗಳನ್ನು ಹಾಕಿಕೊಂಡಿರುವ ಅವರು ‘ಕಿರ್ಪಾನ್‌‘ (ಸಿಖ್‌ ಸಮುದಾಯದವರು ಬಳಸುವ ಸಣ್ಣ ಕತ್ತಿ) ಅನ್ನು ದೇಹಕ್ಕೆ ಓರೆಯಾಗಿ ಹಿಡಿದುಕೊಂಡಿದ್ದಾರೆ.

ADVERTISEMENT

ಈ ದೃಶ್ಯವನ್ನು ದೂರಿನಲ್ಲಿ ಪ್ರಸ್ತಾಪ ಮಾಡಿರುವ ಖೋಸ್ಲಾ, ಕಿರ್ಪಾನ್‌ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದ್ದಾರೆ. ಸಿಖ್ ಸಮುದಾಯಕ್ಕೆ ಪರಿವರ್ತನೆಯಾದರೆ ಮಾತ್ರವೇ ಬೇರೆಯವರು ಇದನ್ನು ತೊಡಬಹುದು ಎಂದು ಹೇಳಿದ್ದಾರೆ.

ಧಾರ್ಮಿಕ ಭಾವನೆ ಹಾಗೂ ನಂಬಿಕೆಗೆ ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ನೋವು ಉಂಟು ಮಾಡಿದ್ದಾಗಿ ಇದನ್ನು ಪರಿಗಣಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.