ADVERTISEMENT

ನಿನಾಸಂ ಸತೀಶ್‌, ಹರಿಪ್ರಿಯಾ ನಟನೆಯ 'ಪೆಟ್ರೊಮ್ಯಾಕ್ಸ್‌’ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 11:00 IST
Last Updated 3 ಜನವರಿ 2021, 11:00 IST
ಪೆಟ್ರೊಮ್ಯಾಕ್ಸ್‌ ಚಿತ್ರತಂಡ
ಪೆಟ್ರೊಮ್ಯಾಕ್ಸ್‌ ಚಿತ್ರತಂಡ   

ವಿಜಯ್ ಪ್ರಸಾದ್ ನಿರ್ದೇಶನ ಮಾಡಿರುವ ‘ಪೆಟ್ರೊಮ್ಯಾಕ್ಸ್‌’ ಸಿನಿಮಾದ ಚಿತ್ರೀಕರಣ‌ ಮುಕ್ತಾಯವಾಗಿದೆ. ಬಹುತೇಕ ಸಿನಿಮಾವನ್ನು ಮೈಸೂರಿನಲ್ಲಿ ಶೂಟಿಂಗ್ ಮಾಡಿರುವ ತಂಡ, ಇದೀಗ ಕುಂಬಳಕಾಯಿಯನ್ನೂ ಅರಮನೆ ನಗರಿಯಲ್ಲಿಯೇ ಒಡೆದಿದೆ. ಈ ಶೂಟಿಂಗ್ ಪಯಣವನ್ನು ಮೆಲುಕು ಹಾಕುವ ಉದ್ದೇಶಕ್ಕೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ತಂಡದವರು ಒಬ್ಬೊಬ್ಬರೇ ಶೂಟಿಂಗ್ ನೆನಪುಗಳನ್ನು ಬಿಚ್ಚಿಟ್ಟರು.

ಮೊದಲಿಗೆ ಮಾತು ಆರಂಭಿಸಿದ ನಿರ್ದೇಶಕ ವಿಜಯ್ ಪ್ರಸಾದ್ ‘ಈ ಸಿನಿಮಾದಲ್ಲಿ ಚೇಷ್ಟೆಯೇ ಮುಖ್ಯ ಕಥಾಹಂದರ. ಆ ಹಿನ್ನೆಲೆಯನ್ನಿಟ್ಟುಕೊಂಡೇ ಈ ಸಿನಿಮಾ ನೋಡಿಸಿಕೊಂಡು ಹೋಗಲಿದೆ. ನನ್ನ ಸಿನಿಮಾ ನೋಡಿದ ಪ್ರತಿಯೊಬ್ಬರು ಪ್ರತಿ ಬಾರಿ ‘ಡಬಲ್ ಮೀನಿಂಗ್’ ಎಂದು ಕರೆಯುತ್ತಾರೆ. ನಾನು ಅದನ್ನು ಚೇಷ್ಟೆಗೆ ಹೋಲಿಸುತ್ತೇನೆ. ಮನರಂಜನೆ ಸಲುವಾಗಿ ಚೇಷ್ಟೆಯನ್ನು ಅಳವಡಿಸಿರುತ್ತೇನೆ. ಆದರೆ, ಇಡೀ ಸಿನಿಮಾ ಡಬಲ್ ಮೀನಿಂಗ್ ಇದ್ದಿದ್ದರೆ ಈ ಹಿಂದಿನ ನೀರ್ದೋಸೆ ಸಿನಿಮಾ ಫ್ಲಾಪ್ ಆಗಿರಬೇಕಿತ್ತು. ಗಾಢವಾದ ಕತೆಯ ಮೂಲಕ ಭಾವುಕ ಪಯಣವನ್ನು ಸೇರಿಸಿ ಗೆಲುವು ಕಂಡಿದ್ದೇವೆ’ ಎಂಬ ಆತ್ಮವಿಶ್ವಾಸ ಮಾತಗಳನ್ನಾಡಿದ್ದರು.

‘ಮೂರು ವರ್ಷದ ಹಿಂದೆಯೇ ಈ ಸಿನಿಮಾ ಶುರು ಆಗಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಆ ಬಗ್ಗೆ ನಿರ್ದೇಶಕರಿಗೆ ನಾನು ಕೇಳುತ್ತಲೇ ಬಂದೆ. ಕೊರೊನಾ ಸಮಯದಲ್ಲಿ ಚಿತ್ರ ಮಾಡುವ ಮನಸ್ಸಾಯ್ತು. ಇದೀಗ ಶೂಟಿಂಗ್ ಸಹ ಮುಗಿಸಿದ್ದೇವೆ’ ಎಂದರು ನಾಯಕ ಹಾಗೂ ನಿರ್ಮಾಣದ ಹೊಣೆ ಹೊತ್ತಿರುವ ನಿನಾಸಂ ಸತೀಶ್‌.

ADVERTISEMENT

ಚಿತ್ರದ ನಾಯಕಿ ಹರಿಪ್ರಿಯಾ ಮಾತನಾಡಿ ‘ಇದೊಂದು ಪ್ರಯೋಗಾತ್ಮಕ ಸಿನಿಮಾ. ನನ್ನ ಸಿನಿಮಾ ಪಯಣದಲ್ಲೇ ವಿಭಿನ್ನವಾದ ಪಾತ್ರವನ್ನು ಈ ಚಿತ್ರದಲ್ಲಿ ನಿಭಾಯಿಸಿದ್ದೇನೆ. ಚೇಷ್ಟೆ ಜತೆಗೆ ಅರ್ಥಪೂರ್ಣವಾದ ಕಥೆಯೂ ಈ ಸಿನಿಮಾದಲ್ಲಿದೆ. ಯುವಪೀಳಿಗೆ ಮತ್ತು ಕೌಟುಂಬಿಕ ಕಥೆಯೂ ಚಿತ್ರದ ಪ್ರಮುಖ ಎಳೆ’ ಎಂದರು.

ನಾಯಕ ನಟರಾಗಿ ಸತೀಶ್ ನೀನಾಸಂ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ನಟಿಸಿದ್ದಾರೆ. ನೀರ್ ದೋಸೆ ಸಿನಿಮಾವನ್ನು ಇಷ್ಟಪಟ್ಟ ಜನರು ಈ ಸಿನಿಮಾವನ್ನು ಸಹ ಇಷ್ಟಪಡುವ ವಿಶ್ವಾಸ ಇದೆ. ನೀರ್ ದೋಸೆ ರೀತಿಯಲ್ಲಿಯೇ ಈ ಸಿನಿಮಾದಲ್ಲೂ ಸಾಕಷ್ಟು ಚೇಷ್ಟೆ, ಎಮೋಷನಲ್ ಕಾಣಬಹುದು. ಹೀಗಾಗಿ ಈ ಸಿನಿಮಾ ಯುವ ಸಮುದಾಯ, ಕುಟುಂಬ ವರ್ಗದವರನ್ನು ಸಹ ಸೆಳೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿನಾಸಂ ಸತೀಶ್‌, ಹರಿಪ್ರಿಯಾ, ಕಾರುಣ್ಯರಾಮ್‌, ಗೊಂಬೆಗಳ ಲವ್ ಖ್ಯಾತಿ ಅರುಣ್‌, ನಾಗಭೂಷಣ್‌, ಭುವಿ ಮೊದಲಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಹಿರಿಯ ನಟಿ ವಿಜಯಲಕ್ಷ್ಮೀ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಒಟ್ಟು 36 ದಿನಗಳ ಕಾಲ ಚಿತ್ರದ ಚಿತ್ರೀಕರಣ ಮಾಡಿತ್ತು ಚಿತ್ರತಂಡ. ವಿಶೇಷ ಎಂದರೆ ಸತೀಶ್ ಪಿಕ್ಚರ್ ಹೌಸ್ ಅಡಿ ನೀನಾಸಂ ಸತೀಶ್‌ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಸ್ಟುಡಿಯೊ 18 ಮತ್ತು ಪೆಟ್ರೊಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದೆ. ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮೆರಾ ನಿರಂಜನ್‌ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.