ಶರತ್ ಲೋಹಿತಾಶ್ವ ಮುಖ್ಯಭೂಮಿಕೆಯಲ್ಲಿರುವ, ಸಂತೋಷ್ ಮಾಡ ನಿರ್ದೇಶನದ ತುಳು ಸಿನಿಮಾ ‘ಪಿದಾಯಿ’ ಕೋಲ್ಕತ್ತ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಡಿ.8 ಮತ್ತು 9ರಂದು ನಡೆಯುವ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.
‘ನಮ್ಮ ಕನಸು’ ಬ್ಯಾನರ್‌ನಡಿ ಕೆ. ಸುರೇಶ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ರಮೇಶ್ ಶೆಟ್ಟಿಗಾರ್ ಈ ಸಿನಿಮಾ ಕಥೆ ಬರೆದಿದ್ದಾರೆ. ರೂಪ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಮೋನಿಶ್, ತ್ರಿಷ, ದ್ರುವ, ನಿಹಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಉಣ್ಣಿ ಮಾಡವೂರ್ ಛಾಯಾಚಿತ್ರಗ್ರಹಣ, ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಸಂಭಾಷಣೆ ಚಿತ್ರಕ್ಕಿದ್ದು, ದಕ್ಷಿಣ ಕನ್ನಡದ ಮುಡಿಪು ಹಾಗೂ ಮಂಜೇಶ್ವರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಕೈತಪ್ರಮ್ ದಾಮೋದರನ್ ನಂಬೂದಿರಿ, ಸುಧೀರ್ ಅತ್ತಾವರ, ಕುಶಾಲಾಕ್ಷಿ ಕಣ್ವತೀರ್ಥ ಅವರ ಸಾಹಿತ್ಯ ಚಿತ್ರಕ್ಕಿದ್ದು, ಅಜಯ್ ನಂಬೂದಿರಿ ಸಂಗೀತ ನೀಡಿದ್ದಾರೆ. ವಿದ್ಯಾಭೂಷಣ್ ಅವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸುರೇಶ್ ಅರಸ್ ಸಂಕಲನ, ರಾಜೇಶ್ ಬಂದ್ಯೋಡು ಕಲಾ ನಿರ್ದೇಶನ ಚಿತ್ರಕ್ಕಿದೆ. ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.