ADVERTISEMENT

ಕನ್ನಡದ ‘ಲಾ’ ಸಿನಿಮಾ ಸೋರಿಕೆ ಮಾಡಿದ ತಮಿಳ್ ರಾಕರ್ಸ್‌

ಪ್ರಜಾವಾಣಿ ವಿಶೇಷ
Published 17 ಜುಲೈ 2020, 11:54 IST
Last Updated 17 ಜುಲೈ 2020, 11:54 IST
ತಮಿಳ್ ರಾಕರ್ಸ್‌ನಲ್ಲಿ ಕನ್ನಡ 'ಲಾ'
ತಮಿಳ್ ರಾಕರ್ಸ್‌ನಲ್ಲಿ ಕನ್ನಡ 'ಲಾ'   

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ ಕನ್ನಡದ ‘ಲಾ’ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಇಂದು ಬಿಡುಗಡೆಯಾಗಿದೆ. ರಘು ಸಮರ್ಥ ನಿರ್ದೇಶನದ ಈ ಚಿತ್ರದಲ್ಲಿ ನಟ ಪ್ರಜ್ವಲ್‌ ದೇವರಾಜ್‌ ಅವರ ಪತ್ನಿ ರಾಗಿಣಿ ಪ್ರಜ್ವಲ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಪರಾಧ, ಸೇಡು ಮತ್ತು ಕೋರ್ಟ್‌ ಡ್ರಾಮಾ ಇರುವ ಪ್ರಭೇದದ ಚಿತ್ರ ಇದು.

ಹೆಬ್ಬಾಳೆ ಕೃಷ್ಣ, ಅಚ್ಯುತಕುಮಾರ್, ರಾಜೇಶ್‌ ನಟರಂಗ, ಅವಿನಾಶ್, ಸಿರಿ ಪ್ರಹ್ಲಾದ್‌, ಮಂಡ್ಯ ರಮೇಶ್ ಮತ್ತು ‘ಮುಖ್ಯಮಂತ್ರಿ’ ಚಂದ್ರು ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಬಂಡವಾಳ ಹೂಡಿರುವುದು ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಮತ್ತು ಎಂ. ಗೋವಿಂದ. ಅಂದಹಾಗೆ ಇದು ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿ ತೆರೆಕಂಡಿರುವ ಮೂರನೇ ಚಿತ್ರ.

‘ಲಾ’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅದಕ್ಕೆ ಪೈರಸಿಯ ಕಾಟ ತಟ್ಟಿದೆ. ತಮಿಳು ರಾಕರ್ಸ್‌ ಈ ಸಿನಿಮಾದ ಎಚ್‌ಡಿ ವಿಡಿಯೊವನ್ನೇ ಸೋರಿಕೆ ಮಾಡಿದ್ದಾರೆ. ಇದು ಚಿತ್ರತಂಡಕ್ಕೆ ತಲೆನೋವು ತಂದಿದೆ.

ADVERTISEMENT

ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳದ ಸಿನಿಮಾಗಳನ್ನು ಸೋರಿಕೆ ಮಾಡುವುದರಲ್ಲಿ ತಮಿಳು ರಾಕರ್ಸ್‌ ಸಿದ್ಧಹಸ್ತರು. ಈ ದುಷ್ಕೃತ್ಯದಿಂದ ನಿರ್ಮಾಪಕರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ. ತಮಿಳು ರಾಕರ್ಸ್‌ ಕೇವಲ ಸಿನಿಮಾಗಳ ಸೋರಿಕೆಗೆ ಮಾತ್ರ ಸೀಮಿತವಾಗಿಲ್ಲ. ವೆಬ್‌ ಸರಣಿಗಳನ್ನೂ ಸೋರಿಕೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ಜ್ಯೋತಿಕಾ ನಟನೆಯ ತಮಿಳಿನ ‘ಪೊನ್ಮಗಲ್‌ ವಂದಲ್‌’ ಮತ್ತು ಕೀರ್ತಿ ಸುರೇಶ್‌ ನಟನೆಯ ‘ಪೆಂಗ್ವಿನ್’ ಸಿನಿಮಾಗಳನ್ನೂ ತಮಿಳು ರಾಕರ್ಸ್‌ ವೆಬ್‌ಸೈಟ್‌ನಲ್ಲಿ ಸೋರಿಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.