ADVERTISEMENT

ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಆರೋಪ: ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 16:12 IST
Last Updated 21 ಫೆಬ್ರುವರಿ 2021, 16:12 IST
ಪೋಸ್ಟರ್‌
ಪೋಸ್ಟರ್‌   

ಬೆಂಗಳೂರು: ಧ್ರುವ ಸರ್ಜಾ ಹಾಗೂ ರಶ್ಮಿಕಾಮಂದಣ್ಣ ನಟನೆಯ ‘ಪೊಗರು’ ಚಿತ್ರವು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳಿವೆ ಎಂದು ಆರೋಪಿಸಿರುವ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಅವರು, ಆ ದೃಶ್ಯಗಳನ್ನು ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.

‘ಇತ್ತೀಚಿಗಷ್ಟೆ ತೆರೆಕಂಡ ನಂದ ಕಿಶೋರ್ ನಿರ್ದೇಶನದ ಕನ್ನಡದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದು ನಿಜಕ್ಕೂ ಖಂಡನೀಯ. ಬ್ರಾಹ್ಮಣರು ತಿರುಗಿ ಬಿಳುವುದಿಲ್ಲ ಅನ್ನುವ ಆಲೋಚನೆ ಇದ್ದಾರೆ ಅದು ತಪ್ಪು ಕಲ್ಪನೆ. ನಾನು ನಿರ್ದೇಶಕರಿಗೆ ಈ ಕೂಡಲೇ ಅವಹೇಳನಕಾರಿ ದೃಶ್ಯವನ್ನು ಚಿತ್ರದಿಂದ ತೆಗೆದು ಹಾಕಬೇಕೆಂದು ಆಗ್ರಹಿಸುತ್ತೇನೆ. ಇಲ್ಲದಿದ್ದರೆ ಫೆ.23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸುತ್ತೇವೆ. ಮತ್ತು ಫೆ.24ರಂದು ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡಿ ನಂತರ ಕ್ಷಮೆಯಾಚಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ನೀವು ಹೀಗೆ ಮಾತನಾಡುವುದು ನಿಮಗೆ ಶೋಭೆ ತರುವಂತಹುದಲ್ಲ. ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಒಳ್ಳೆಯದು’ ಎಂದು ಮಂಡಳಿಯ ಫೇಸ್‌ಬುಕ್‌ ಪೇಜ್‌ನಲ್ಲಿ ಸಚ್ಚಿದಾನಂದಮೂರ್ತಿ ಪೋಸ್ಟ್‌ ಮಾಡಿದ್ದಾರೆ.

ಚಿತ್ರದಲ್ಲೇ ಏನಿದೆ?

ADVERTISEMENT

ಚಿತ್ರದ ಆರಂಭದಲ್ಲೇ ಯಜ್ಞ ಮಾಡುತ್ತಿದ್ದ ಪುರೋಹಿತರ ಮೇಲೆ ಖಳನಾಯಕನ ತಂಡದಲ್ಲಿದ್ದ ವ್ಯಕ್ತಿಯೊಬ್ಬ ಕಾಲಿಟ್ಟ ದೃಶ್ಯವಿದೆ. ಜೊತೆಗೆ ನಾಯಕನೇ ಬ್ರಾಹ್ಮಣರನ್ನು ಅವಹೇಳನ ಮಾಡುವ ಪದಗಳನ್ನು ಬಳಸಿದ್ದಾರೆ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.