ADVERTISEMENT

ಕ್ಯಾನ್ಸರ್ ಪೀಡಿತರ ಭಾವನೆಗಳ ಜೊತೆ ಆಟ ಬೇಡ: ಪೂನಂಗೆ ನೆಟ್ಟಿಗರ ಪಾಠ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2024, 11:54 IST
Last Updated 3 ಫೆಬ್ರುವರಿ 2024, 11:54 IST
ಪೂನಂ ಪಾಂಡೆ
ಪೂನಂ ಪಾಂಡೆ   

ವಿವಾದಾತ್ಮಕ ವಿಷಯಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ಪೂನಂ ಪಾಂಡೆ, ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತಾವು ಮೃತಪಟ್ಟಿರುವುದಾಗಿ ಶುಕ್ರವಾರ ಬಿಂಬಿಸಿದ್ದರು. ಇದೀಗ ವಿಡಿಯೊ ಸಂದೇಶದ ಮೂಲಕ ತಾವು ಬದುಕಿರುವುದಾಗಿ ತಿಳಿಸಿದ್ದಾರೆ.

ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಪೂನಂ ಉದ್ದೇಶವನ್ನು ಪ್ರಶಂಸಿಸಿರುವ ನೆಟ್ಟಿಗರು ಅವರು ಆಯ್ಕೆ ಮಾಡಿರುವ ಮಾರ್ಗವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿಯ ನಡೆಗಳು ಒಬ್ಬರಿಗಿರುವ ಪ್ರಚಾರದ ಹುಚ್ಚನ್ನು ತೋರಿಸುವುದಲ್ಲದೇ, ಕಾಯಿಲೆಯ ಗಂಭೀರತೆಯೇ ಅರಿವಿಲ್ಲ ಹಾಗೂ ನಿರ್ಲಕ್ಷ್ಯ ಭಾವನೆ ಹೊಂದಿರುವುದನ್ನೂ ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.

‘ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಆಕೆಯ ಖಾತೆಯನ್ನು ಅನ್‌ಫಾಲೋ ಮಾಡಬೇಕು. ಗಮನ ಸೆಳೆಯುವ ಉದ್ದೇಶದಿಂದ ಆಕೆ ಇಂತಹ ಕೆಲಸವನ್ನು ಮಾಡಿದ್ದಾಳೆ. ಪ್ರಚಾರದ ಹುಚ್ಚು ಇದರಲ್ಲಿ ಕಾಣಿಸುತ್ತದೆ. ಇದು ಈ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಮಾಡುವ ಅವಮಾನವಾಗಿದೆ’ ಎಂದು ನಟ ರಾಹುಲ್ ಖನ್ನಾ(@actorrahulkannan) ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ಜಾಗೃತಿ ಹೆಸರಿನಲ್ಲಿ ಪ್ರಚಾರ ಪಡೆಯುವ ಚಾಳಿ ನಿಜಕ್ಕೂ ಉತ್ತಮವಲ್ಲ. ಇಂತಹ ಗಮನ ಸೆಳೆಯುವ ನಡವಳಿಕೆಗಳು ಅಭಿಮಾನಿಗಳ(ಹೊಂದಿದ್ದರೆ) ಮತ್ತು ಪ್ರೀತಿಪಾತ್ರರ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಅಲ್ಲದೇ ಈ ಕಾಯಿಲೆ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಹೆಚ್ಚುವ ಸಾಧ್ಯತೆಯೂ ಇದೆ. ಗಂಭೀರವಾದ ಕಾಯಿಲೆಯೊಂದನ್ನು ಜಾಗೃತಿ ಹೆಸರಿನಲ್ಲಿ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ನಾಚಿಕೆಗೇಡಿನ ವಿಷಯ. ನಿಜವಾಗಿಯೂ ಈ ಕಾಯಿಲೆ ಇದ್ದವರ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನೇರವಾಗಿ ಆ ಬಗ್ಗೆ ಮಾತನಾಡಿ’ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

‘ಈ ಕಾಯಿಲೆಗೆ ತುತ್ತಾಗಿ ಬದುಕುಳಿದವರಲ್ಲಿ ನಾನು ಒಬ್ಬಳು. ಜಾಗೃತಿ ಮೂಡಿಸುವುದಕ್ಕೋಸ್ಕರ ಸತ್ತಿದ್ದೆನೆಂದು ನಾಟಕವಾಡುವುದು ಸರಿಯಲ್ಲ. ನಾನು ಹದಿಹರೆಯದವಳಾಗಿದ್ದಾಗ ಎಚ್‌ಪಿವಿ ಲಸಿಕೆಯನ್ನು ಪಡೆದುಕೊಂಡಿದ್ದೆ. ಆದರೂ ಈ ರೋಗಕ್ಕೆ ತುತ್ತಾಗಿದ್ದೆ. ಲಸಿಕೆಗಳು ಪೂರ್ತಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದಕ್ಕೆ ನಾನೇ ಉದಾಹರಣೆ. ಇಂತಹ ಜಾಗೃತಿ ಕಾರ್ಯಕ್ರಮಗಳು ರೋಗಿಯನ್ನು ಇನ್ನಷ್ಟು ಕಂಗೆಡಿಸುತ್ತದೆ. ಕ್ಯಾನ್ಸರ್‌ ಅನ್ನೋದು ಆಟವಲ್ಲ’ ಎಂದು ಬಾಂಗ್ರಾ(bhangrabychristine) ಎನ್ನುವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

‘ಪೂನಂ ಪಾಂಡೆ ಪ್ರಚಾರ ಪ್ರಿಯಳು ಎಂದು ತಿಳಿದು ಮಾಧ್ಯಮಗಳು ಇಂತಹ ಸುಳ್ಳು ಸುದ್ದಿಗಳನ್ನು ನಂಬಿ ಪ್ರಸಾರ ಮಾಡಿವೆ. ಪ್ರಚಾರಕ್ಕಾಗಿ ಆಕೆ ಏನು ಬೇಕಾದರೂ ಮಾಡಿಯಾಳು. ಆಕೆಯ ಕುಟುಂಬದಿಂದ ಖಚಿತಪಡಿಸಿಕೊಂಡಿದ್ದರೆ ಏನು ಆಗುತ್ತಿರಲಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ನನಗೆ ಮೊದಲೇ ತಿಳಿದಿತ್ತು’ ಎಂದು ವಿವೇಕ ತಿವಾರಿ ಎಂಬುವವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.