ADVERTISEMENT

ಪ್ರಭಾಸ್ ದೊಡ್ಡಪ್ಪ, ತೆಲುಗು ಹಿರಿಯ ನಟ ಕೃಷ್ಣಂ ರಾಜು ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2022, 4:28 IST
Last Updated 12 ಸೆಪ್ಟೆಂಬರ್ 2022, 4:28 IST
ಪ್ರಭಾಸ್ ಮತ್ತು ಕೃಷ್ಣಂ ರಾಜು
ಪ್ರಭಾಸ್ ಮತ್ತು ಕೃಷ್ಣಂ ರಾಜು   

ಹೈದರಾಬಾದ್‌: ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರ ದೊಡ್ಡಪ್ಪ, ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣಂ ರಾಜು ಅವರು ಇಂದು (ಭಾನುವಾರ) ಮುಂಜಾನೆ ನಿಧನರಾಗಿದ್ದಾರೆ.

ಕೃಷ್ಣಂ ರಾಜು ಅವರಿಗೆ 83 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 3.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಕೃಷ್ಣಂ ರಾಜು ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇಂದು ಸಂಜೆ ವೇಳೆಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಕೃಷ್ಣಂ ರಾಜು ಅವರು ಜನವರಿ 20, 1940 ರಂದು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರಿನಲ್ಲಿ ಜನಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1966ರಲ್ಲಿ ‘ಚಿಲಕಾ ಗೋರಿಂಕಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ ಅವರು, ಈವರೆಗೆ 187 ಚಿತ್ರಗಳಲ್ಲಿ ನಟಿಸಿದ್ದಾರೆ.

ಕೃಷ್ಣಂ ರಾಜು ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.