ಸಿನಿ ಸಮ್ಮಾನದ ಸಮಾರಂಭದಲ್ಲಿ ನಟಿ ರಾಧಿಕಾ ನಾರಾಯಣ್, ಖುಷಿ ರವಿ, ಚಂದನ ಅನಂತಕೃಷ್ಣ ಪ್ರಸ್ತುತಪಡಿಸಿದ ನೃತ್ಯಗಳ ಝಲಕ್
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿ ಕಳೆದ ಜೂನ್ 27ರ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ವೈಟ್‌ಪೆಟಲ್ಸ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಇಲ್ಲಿ ಚಂದನವನದ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಪ್ರಶಸ್ತಿ ಪಡೆದು ಸಂಭ್ರಮಿಸಿದರು.
ಇಳಿ ಸಂಜೆಯ ಹೊತ್ತು. ಶಾಪಗ್ರಸ್ತ ಗಂಧರ್ವರೇನೋ ಎಂಬಂತೆ ಕಟ್ಟುಮಸ್ತಾದ ಯುವಕರ ತಂಡವೊಂದು ಕಪ್ಪು ಉಡುಗೆಯಲ್ಲಿ ಅಲ್ಲಲ್ಲಿ ಕೈಕಟ್ಟಿ ನಿಂತಿದ್ದರು. ಮತ್ಸ್ಯಕನ್ಯೆಯರಂತಹ ಮೈಕಟ್ಟಿನ ಅಪ್ಸರೆಯರು ಅಲ್ಲಲ್ಲಿ ತೇಲಾಡುವಂತೆ ನಡೆಯುತ್ತಿದ್ದರು. ಅವರ ವಸ್ತ್ರವೈವಿಧ್ಯದ ಮಿಣಮಿಣ ಮಿಂಚುವ ಚುಕ್ಕಿಗಳು, ಬೆಳಕಿಗೆ ಕಣ್ಹೊಡೆದು ನಗುತ್ತಿದ್ದವು. ನಟ–ನಟಿಯರು ಕೆಂಪುಹಾಸಿನ ಮೇಲೆ ಪಕಳೆಗಳ ಮೇಲೆ ಪಾದ ಇಟ್ಟವರಂತೆ ಸಭಾಂಗಣ ಪ್ರವೇಶಿಸಿದಾಗ, ಕಣ್ಣುಕೋರೈಸುವ ಬೆಳಕು. ಅವರ ನಡಿಗೆ, ಅವರ ನಿಲುವು, ಅವರ ನೋಟ ಎಲ್ಲವನ್ನೂ ಸೆರೆಹಿಡಿಯುವ ಧಾವಂತ ಅಲ್ಲಿರುವ ಮೂರನೆಯ ಕಣ್ಣ ಕ್ಯಾಮೆರಾಗಳಿಗೆ. ನೂರಾರು ಕಣ್ಣು ಅವರ ಮೇಲೆ.
ಸಮಾರಂಭ ಆರಂಭವಾದಾಗ ಅನುಶ್ರೀ, ನಕ್ಷತ್ರ ತುಂಬಿದ ರಾತ್ರಿಯನ್ನೇ ಉಟ್ಟುಬಂದಂಥ ಉಡುಗೆಯಲ್ಲಿದ್ದರು. ವಜ್ರದಾಭರಣಗಳಿಗೆ ಮೆರಗು ನೀಡುವ ಪಚ್ಚೆಯ ಪದಕ ಅವರ ನಗೆಮಿಂಚಿಗೆ ಸವಾಲೊಡ್ಡುತ್ತಿತ್ತು. ಸದಾ ವಿಶೇಷ ಎಂಟ್ರಿ ನೀಡುವ ನಿರೂಪಕ ಅಕುಲ್ ಬಾಲಾಜಿ, ಈ ಸಲವೂ ವೀಕ್ಷಕರಿಗೆ ನಿರಾಸೆ ಮಾಡಲಿಲ್ಲ. ಪಲ್ಲಕ್ಕಿಯಲ್ಲಿ ಬಂದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.
ಕೆಂಪುಡುಗೆಯಲ್ಲಿ ಬಂದ ಪ್ರಿಯಾಂಕಾ ಉಪೇಂದ್ರ, ಹೊನ್ನ ಬಣ್ಣದ ಸೀರೆಯಲ್ಲಿ ಬಂದ ತಾರಾ ಅನೂರಾಧಾ, ನಕ್ಷತ್ರಗಳನ್ನೇ ಕಣ್ಣಾಗಿಸಿಕೊಂಡಿರುವ ಮಾಳವಿಕಾ, ಹಸಿರು ಷರ್ಟಿನಲ್ಲಿ ಬಂದ ಕರ್ನಾಟಕದ ಮನೆಮಗನಂತಿರುವ, ಕನ್ನಡಿಗರ ಶಿವಣ್ಣ, ಸೂಟುಬೂಟುಗಳಲ್ಲಿ ಠಾಕು ಠೀಕಾಗಿ ಬಂದ ರಮೇಶ ಅರವಿಂದ, ಆಕಾಶನೀಲಿ ಜುಬ್ಬಾದಲ್ಲಿ ಬಂದ ಅಜಾನುಬಾಹುವಿನಂತೆ ಕಾಣುತ್ತಿದ್ದ ಮುಖ್ಯಮಂತ್ರಿ ಚಂದ್ರು, ಪಾಠ ಮಾಡಲು ಈಗಲೂ ರೆಡಿ ಎಂದು ಬಂದ ಪ್ರೀತಿಯ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ, ಕಪ್ಪು ಬಣ್ಣದ ತುಂಬುತೋಳಿನ ಟೀಷರ್ಟಿನಲ್ಲಿ ಕಂಗೊಳಿಸುತ್ತಿದ್ದ ಪ್ರಣಯರಾಜ ಶ್ರೀನಾಥ, ಕಪ್ಪಂಗಿ, ವಿಶೇಷ ವಿನ್ಯಾಸದ ಬೂಟ್ಸುಗಳನ್ನು ತೊಟ್ಟು, ರಾತ್ರಿಯ ಝಗಮಗಿಸುವ ಬೆಳಕಿಗೆ ಅಡ್ಡಲಾಗಿ ತಂಪುಕನ್ನಡಕ ಧರಿಸಿ ಬಂದ ರವಿಚಂದ್ರನ್, ರೇಷ್ಮೆಯ ಕಫ್ತಾನಿನಲ್ಲಿ ನಗುತ್ತಿದ್ದ ಮಾಲಾಶ್ರೀ, ಬಿಳಿಯಂಗಿ ನೀಲಿ ಜೀನ್ಸು ತೊಟ್ಟು ಸಹಜವಾಗಿ ಬಂದ ವಿ.ಮನೋಹರ್, ಕೆಂಪಂಗಿಯಲ್ಲಿ ವಿ.ನಾಗೇಂದ್ರಪ್ರಸಾದ್ ಎಲ್ಲರೂ ತಮ್ಮ ಮನೆಯ ಸಂಭ್ರಮವೇನೋ ಎಂಬಂತೆ, ಸಭಾಂಗಣದಲ್ಲೆಲ್ಲ ನಗು ಚೆಲ್ಲುತ್ತ, ಕಣ್ಣರಳಿಸುತ್ತ, ಕೈಬೀಸುತ್ತ, ಗಾಳಿಯಲ್ಲೆಲ್ಲ ಪ್ರೀತಿ ತೂರಿದರು.
ಅಗೋ.. ಅಲ್ಲಿ.. ಸಾಯಿಕುಮಾರ್.. ಅಲ್ಲಿ ವಿನಯ್ ರಾಘವೇಂದ್ರ, ಯುವ ರಾಜ್‌ಕುಮಾರ್. ಅಲ್ನೋಡಿ ಅವರು ಬಂದ್ರು, ಇಲ್ನೋಡಿ ಅನುಪ್ರಭಾಕರ್ ಬಂದ್ರು.. ಓಹ್... ಅವರ ಉಡುಗೆ ನೋಡಿ.. ಆಹ್ ರಂಗಾಯಣ ರಘು ಬಂದ್ರು ಅವರ ಮೀಸೆ ಎಷ್ಟು ಚಂದ... ಅಲ್ಲಿ.. ಜನರ ನಡುವೆ.. ಕೊನೇಗೆ ಕಿಶೋರ್ ಕಾಣ್ತಿದಾರೆ ನೋಡು... ಏಯ್.. ಅವರು ಯಾಕೆ ಅಲ್ಲಿ ಕೂರ್ತಾರೆ... ಬೆಟ್ ಬೇಕಾದ್ರೆ, ಅಲ್ಲಿರೋರು ಕಿಶೋರ್.. ಹೀಗೆ ಪರಸ್ಪರ ಪಂದ್ಯ ಕಟ್ಟುತ್ತ, ತಮ್ಮ ಇಷ್ಟದ ನಟ–ನಟಿಯರನ್ನು ಕಣ್ತುಂಬಿಸಿಕೊಳ್ಳುತ್ತಿದ್ದರು. ಚೂರು, ಈ ಕಡೆ ತಲೆ ಮಾಡ್ಕೊ.. ತುಸು ಕುರ್ಚಿ ತುದಿಗೆ ಬಂದು ನೋಡು, ಕತ್ತು ಜಿರಾಫ್ ಮಾಡಿಕೊಂಡು, ವೇದಿಕೆಯ ಅಕ್ಕಪಕ್ಕದಲ್ಲಿರುವ ಟೀವಿ ಪರದೆಯಲ್ಲೊಮ್ಮೆ, ವೇದಿಕೆಯನ್ನೊಮ್ಮೆ ನೋಡಿ ಖುಷಿ ಪಡುತ್ತಿದ್ದ ಪ್ರೇಕ್ಷಕರು.
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದ ಝಲಕುಗಳಿವು.
ಸಮಾರಂಭದಲ್ಲಿ ನಟಿ ರಾಧಿಕಾ ನಾರಾಯಣ್, ಖುಷಿ ರವಿ, ಚಂದನ ಅನಂತಕೃಷ್ಣ ಪ್ರಸ್ತುತಪಡಿಸಿದ ನೃತ್ಯ
ಇಳಿಸಂಜೆಯಲ್ಲಿ ನಟಿ ಚಂದನ ಅನಂತಕೃಷ್ಣ ಮತ್ತು ಖುಷಿ ರವಿ ಅವರ ಫ್ಯೂಷನ್ ನೃತ್ಯ, ಪೃಥ್ವಿ ಅಂಬಾರ್ ಅವರ ‘ಜಾಕಿ ಜಾಕಿ’ ನೃತ್ಯಗಳು ಚಪ್ಪಾಳೆ, ಸಿಳ್ಳೆಗಳ ನಡುವೆ ಮನರಂಜನೆ ನೀಡಿದವು.
ಪ್ರಶಸ್ತಿ ಪ್ರದಾನಕ್ಕೆ ಮೊದಲು ನಾಮನಿರ್ದೇಶಿತರ ಪಟ್ಟಿ ಬಿಡುಗಡೆಯಾದಂತೆ, ಪರದೆಯ ಮೇಲೆ ಆಯಾ ಸಿನಿಮಾಗಳ ತುಣುಕು ಬಂದಂತೆ, ಅಭಿಮಾನಿಗಳು ಸಿಳ್ಳೆ ಹಾಕುತ್ತಿದ್ದರು. ತಮ್ಮ ಬೆಂಬಲ ತೋರಿಸುತ್ತಿದ್ದರು. ತೀರ್ಪುಗಾರರೊಂದಿಗೆ ‘ಪ್ರಜಾವಾಣಿ’ಯ ಓದುಗರೂ ತೀರ್ಪು ನೀಡಿ, ಜನಮೆಚ್ಚುಗೆಯನ್ನು ಪಡೆದ ವಿಜೇತರ ಘೋಷಣೆ ಆದಾಗ ಈ ಹರ್ಷೋದ್ಗಾರ ಸೂರು ಮುಟ್ಟುತ್ತಿತ್ತು.
ನಟ ಶಿವರಾಜ್‌ಕುಮಾರ್ ಅವರು ವೇದಿಕೆ ಹತ್ತಿದಾಗ ಎಲ್ಲರಿಗೂ ಭಾವುಕ ಕ್ಷಣ. ನೃತ್ಯಕ್ಕಾಗಿ ಅಪ್ಪುನನ್ನು ನೆನಪಿಸಿಕೊಂಡಾಗ ಕೇಕೆಗಳು, ಸಿಳ್ಳೆ ಚಪ್ಪಾಳೆಗಳು ಮಾರ್ದನಿಸತೊಡಗಿದ್ದವು.
ದುನಿಯಾ ವಿಜಯ್ ತಮ್ಮ ಸಂಭಾಷಣೆಯನ್ನು ಹೇಳಿದಾಗಲೂ, ತಮ್ಮ ನಡುವಿನ ವ್ಯಕ್ತಿಯೊಬ್ಬ ಹೀರೊ ಆಗಿ ಬೆಳೆದಿದ್ದನ್ನು ಮೆಚ್ಚುವಂತಹ ಕರತಾಡನ.
ಮಾಲಾಶ್ರೀ, ರವಿಚಂದ್ರನ್ ಜೊತೆಗೆ ಹೆಜ್ಜೆ ಹಾಕಿದರೆ ಕಾಲಚಕ್ರ ಮೂರು ದಶಕ ಹಿಂದೆ ಓಡಿದ ಅನುಭವ.
‘ಹಿತ್ತಲಕ ಕರಿಬ್ಯಾಡ ಮಾವ’ ಅಂತ ಹಾಡು ಹಾಡುತ್ತಾ ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದ ಶೃತಿ ಪ್ರಹ್ಲಾದ ಪ್ರಶಸ್ತಿಯನ್ನು ಅಪ್ಪ–ಅಮ್ಮನಿಗೆ ಸಮರ್ಪಿಸಿದರು. ಅವರೊಟ್ಟಿಗೆ ಬಂದಿದ್ದ ಅಮ್ಮ ಸಾಮಾನ್ಯರ ನಡುವೆ ಕುಳಿತು ತಮ್ಮ ಕಣ್ಣಪಸೆಯನ್ನು ಒರೆಸಿಕೊಂಡರು.
ಈ ಎಲ್ಲ ಸಂಭ್ರಮಗಳಿಗೆ ಕಳಶವಿಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿನಿಮಾದೊಂದಿಗಿನ ತಮ್ಮ ನಂಟನ್ನು, ತಮ್ಮ ಯೌವ್ವನದ ದಿನಗಳನ್ನು ನೆನಪಿಸಿಕೊಂಡರು.
‘ಇವರು ಬಣ್ಣ ಹಚ್ಚಿದಾಗಷ್ಟೇ ನಟಿಸುತ್ತಾರೆ, ನಾವು ದಿನಾಲೂ ಅದನ್ನೇ ಮಾಡುತ್ತೇವೆ’ ಎಂದು ಡಿ.ಕೆ.ಶಿವಕುಮಾರ್ ಅವರು ತಮ್ಮ ಮಾತಿನ ಕೊನೆಗೆ ಹೇಳಿದಾಗ ಸಭಾಂಗಣ ಜೋರಾದ ಚಪ್ಪಾಳೆಗೆ ಸಾಕ್ಷಿಯಾಯಿತು.
‘ನಡೆದಲ್ಲಿ ನೃತ್ಯ, ನಿಂತಲ್ಲಿ ಬಳಕು. ಅಪ್ಪುನ ಛವಿ ಹಂಗಿತ್ತು. ನಾನು ಸದಾ ಅವನನ್ನು ಸೋಜಿಗದಿಂದಲೇ ನೋಡುತ್ತಿದ್ದೆ. ಕೈ, ಮೈ ಅವ ಬಳ್ಳಿಯಂತೆ ತೂಗುತ್ತಿದ್ದ. ಡಾನ್ಸ್ ಅಂದ್ರೆ ನನಗೆ ಅಪ್ಪೂನೆ..’ ನೆನಪಿನಂಗಳದಲ್ಲಿ ಮೂಡುತ್ತಿದ್ದ ಕಣ್ಪಸೆಯನ್ನು ಅಭಿಮಾನದ ನೋಟದಿಂದಲೇ ಮುಚ್ಚಿಟ್ಟುಕೊಂಡವರು ಶಿವಣ್ಣ.
ಅಭಿಮಾನಿಗಳಿಗೇ ತಾವು ಅಭಿಮಾನಿ ಎನ್ನುತ್ತ, ಸಿನಿಮಾರಂಗದ ಎಲ್ಲರ ಪ್ರೋತ್ಸಾಹ ಮತ್ತು ಪ್ರೀತಿ ಅದ್ಹೇಗೆ ಅವರಿಗೆ ಶ್ರೀರಕ್ಷೆಯಾಯಿತು ಎಂದು ಋಣಿಯಾಗುತ್ತ ಮಾತಾಡಿದಾಗ, ವೇದಿಕೆಯ ಮುಂದೆ ಕುಳಿತಿದ್ದ ಪತ್ನಿ ಗೀತಾ ಶಿವರಾಜ್‌ಕುಮಾರ್ ಗದ್ಗದಿತರಾಗುತ್ತಿದ್ದರು. ಶಿವಣ್ಣ ತಮ್ಮ ಅನಾರೋಗ್ಯದ ದಿನಗಳನ್ನು ನೆನಪಿಸುವಾಗಲೂ ಗೀತಾ ಅವರು ಭಾವುಕರಾಗಿದ್ದರು. ಮತ್ತೆ ಸಭೆ ತಿಳಿಯಾಗಿದ್ದು ಅಪ್ಪುವಿನ ನೆನಪಿನಿಂದ. ‘ಅಪ್ಪಾಜಿ, ರಾಜಕುಮಾರ್ ಅಂದ್ರೆ’ ಅಂತ ಅನುಶ್ರೀ ಪ್ರಶ್ನೆ ಕೇಳಿದಾಗ, ಮುತ್ತು ಎಂದು ಶಿವಣ್ಣ ಉತ್ತರಿಸಿದರು.
ಪ್ರತಿ ಶುಕ್ರವಾರ ತಪ್ಪದೇ ಪ್ರಜಾವಾಣಿ ಓದು. ಸಿನಿಮಾ ವಿಮರ್ಶೆಯಲ್ಲಿರೋದನ್ನ ತಲೆಗೆ ಹಚ್ಕೊ, ಹೊಗಳಿದ್ದರೆ ಕೋಡು ಬರದಿರಲಿ, ಟೀಕಿಸಿದ್ದರೆ ಸರಿಪಡಿಸಿಕೊ ಎಂದು ಅಪ್ಪ ಹೇಳಿದ್ದರು ಎಂದು ರವಿಚಂದ್ರನ್ ಅವರು ತಮ್ಮ ತಂದೆ ವೀರಾಸ್ವಾಮಿ ಅವರನ್ನು ನೆನಪಿಸಿಕೊಳ್ಳುತ್ತಲೇ ‘ಪ್ರಜಾವಾಣಿ’ಯೊಂದಿಗಿನ ತಮ್ಮ ನಂಟನ್ನು ಬಿಚ್ಚಿಟ್ಟರು.
ಪ್ರಜಾವಾಣಿಯಲ್ಲಿ ನೇರವಾದ ವಿಮರ್ಶೆಯೇ ಬಂದಿದೆ. ಬೆಳೆಸುವವರನ್ನು ಬೆಳೆಸಿದೆ. ತಪ್ಪಾದಲ್ಲಿ ಎತ್ತಿ ಹಿಡಿಯುತ್ತದೆ. ಯಾವ ಭೇದವೂ ಇಲ್ಲದೆ ಎಲ್ಲವನ್ನೂ ಪಾರದರ್ಶಕವಾಗಿಯೇ ತೋರಿಸಿಕೊಡುತ್ತದೆ. ನಿಷ್ಪಕ್ಷಪಾತಿ ವಿಮರ್ಶೆಯನ್ನು ಈಗಲೂ ಪ್ರಜಾವಾಣಿಯಿಂದ ಮಾತ್ರ ನಿರೀಕ್ಷಿಸಬಹುದು ಎಂದು ಶಿವಣ್ಣ ‘ಪ್ರಜಾವಾಣಿ’ಯ ಬಗ್ಗೆ ನುಡಿದರು.
ಜೀವಮಾನ ಸಾಧನೆ ಪುರಸ್ಕೃತ ಪ್ರಣಯರಾಜ ಶ್ರೀನಾಥ ಅವರ ಸಿನಿಯಾನದ ವಿಡಿಯೊ ಮುಗಿದಾಗ ಎಲ್ಲರು ಎದ್ದುನಿಂತು ಗೌರವ ಸಮರ್ಪಿಸಿ, ಚಪ್ಪಾಳೆ ತಟ್ಟಿದರು.
ಶಿವರಾಜಕುಮಾರ್ ಅಪ್ಪುನನ್ನು ನೆನಪಿಸಿಕೊಂಡ ಕ್ಷಣ
‘ಜೇನಧನಿಯೋಳೆ’ ಹಾಡಿಗೆ ಪೂಜಾಗಾಂಧಿ, ಸುಮನ್‌ನಗರ್ಕರ್ ಕೊರಿಯೊಗ್ರಾಫರ್ ಶೇಖರ್ ಮಾಸ್ಟರ್ ಜೊತೆಗೆ ಹೆಜ್ಜೆ ಹಾಕಿದಾಗ
ಜಸ್ಕರಣ್ ಸಿಂಗ್ ‘ಜೇನುಧ್ವನಿಯೋಳೆ’ ಹಾಡು ಹಾಡಿದಾಗ
ದುನಿಯಾ ವಿಜಯ್ ಭೀಮ ಚಿತ್ರದ ಡೈಲಾಗುಗಳನ್ನು ಹೇಳಿದಾಗ
ನಟಿಸಲು ನಾಟಕ ಅತಿ ಮುಖ್ಯ, ಓದು ಅತಿ ಮುಖ್ಯವೆಂದು ಶ್ರೀನಾಥ್ ಅವರು ಹೇಳಿದಾಗ
ಜೀವನದುದ್ದಕ್ಕೂ ನಟಿಸುತ್ತಲೇ ಇರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಾಥ್ ಅವರಿಗೆ ಹೇಳಿದಾಗ
ಅನುಶ್ರೀ ಅವರ ಪ್ರಶ್ನೆಗೆ ಧ್ರುವ ಸರ್ಜಾ ಮುಗ್ಧರಾಗಿ ‘ನನಗದೆಲ್ಲ ಗೊತ್ತಿಲ್ಲ’ ಎಂದು ಮೈಕು ಒಪ್ಪಿಸಿದಾಗ
ರಂಗಾಯಣ ರಘು ಜನಮೆಚ್ಚಿದ ನಟ ಪ್ರಶಸ್ತಿ ಸ್ವೀಕರಿಸಿ, ಇದು ಎರಡನೆಯ ಪ್ರಶಸ್ತಿ ಎಂದು ಸಂತೋಷ ಹಂಚಿಕೊಂಡಾಗ.
ದುನಿಯಾ ವಿಜಯ್, ತಮ್ಮ ಬದುಕಿನಲ್ಲಿ ನೂರು ರೂಪಾಯಿ ಸಂಭಾವನೆ ಪಡೆಯುವಾಗಿನ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾದಾಗ
ಸಾಯಿಗೋಲ್ಡ್ ಮಾಲೀಕರಾದ ಸರವಣ ಅವರಿಗೆ ದುನಿಯಾ ವಿಜಯ್ ಚಿನ್ನದ ಕಿರೀಟಕ್ಕೆ, ಅನುಶ್ರೀ ವಜ್ರಖಚಿತ ಚಿನ್ನದ ಮೈಕಿಗೆ, ಅಕುಲ್ ಬಾಲಾಜಿ ಗದೆಗಾಗಿ ಬೇಡಿಕೆ ಇಟ್ಟಾಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.