ADVERTISEMENT

PV Cine Sammana-3: ‘ಅನಾಹಿತ’ಳಿಗೆ ಡಬಲ್‌ ಸಂಭ್ರಮ!

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:35 IST
Last Updated 3 ಜುಲೈ 2025, 23:35 IST
ಅಂಕಿತಾ ಅಮರ್‌ 
ಅಂಕಿತಾ ಅಮರ್‌    

ಅತ್ಯುತ್ತಮ ನಟಿ ಹಾಗೂ ಜನಮೆಚ್ಚಿದ ನಟಿ: ಅಂಕಿತಾ ಅಮರ್‌

ಚಿತ್ರ: ಇಬ್ಬನಿ ತಬ್ಬಿದ ಇಳೆಯಲಿ 

ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ಅಂಕಿತಾ ಅಮರ್‌ ಸದ್ಯ ಚಂದನವನದಲ್ಲಿ ತಮ್ಮ ಸಿನಿ ಬ್ಯಾಂಕ್‌ ಹಿಗ್ಗಿಸಿಕೊಳ್ಳುತ್ತಿರುವ ನಟಿ. ‘ನಮ್ಮನೆ ಯುವರಾಣಿ’ ಮೂಲಕ ಕರ್ನಾಕಟದ ಮನೆ ಮಾತಾದ ಇವರು, ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿಯೂ ಮಿಂಚಿದವರು. ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಮೂಲಕ ಕಮರ್ಷಿಯಲ್‌ ಸಿನಿ ಪಯಣ ಆರಂಭಿಸಿದ ಇವರು ಚೊಚ್ಚಲ ಚಿತ್ರದಲ್ಲೇ ತಮ್ಮ ನಟನೆಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಇದೇ ಸಿನಿಮಾದಲ್ಲಿ ನಟನೆಗಾಗಿ ಇದೀಗ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದಲ್ಲಿ ಅತ್ಯುತ್ತಮ ನಟಿ ಹಾಗೂ ಜನಮೆಚ್ಚಿದ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ADVERTISEMENT

ನಟಿ ಮಾಳವಿಕಾ ಅವಿನಾಶ್‌ ಹಾಗೂ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಂಕಿತಾ, ‘ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ ನನಗೆ ಸಿಗುತ್ತಿರುವ ಮೊದಲ ಪ್ರಶಸ್ತಿಯಿದು. ಒಂದೇ ದಿನ ಎರಡು ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ಇನ್ನೂ ಖುಷಿ ತಂದಿದೆ. ಪ್ರಶಸ್ತಿಯ ವಿನ್ಯಾಸದಲ್ಲೇ ಕರ್ನಾಟಕವಿದೆ. ಇದು ಬಹಳ ಖುಷಿಕೊಟ್ಟಿತು. ಪ್ರಜಾವಾಣಿ ತಂಡಕ್ಕೆ ಧನ್ಯವಾದ. ಸಾಕಷ್ಟು ಕಲಾವಿದರು ಒಂದು ವೇದಿಕೆಗಾಗಿ ಕಾಯುತ್ತಿರುತ್ತಾರೆ. ಯಾರಾದರೂ ಗುರುತಿಸಲಿ ಎಂದು ಕನಸು ಕಾಣುವ ಕಲಾವಿದರು ಇರುತ್ತಾರೆ. ನನ್ನ ನಿರ್ದೇಶಕ ಚಂದ್ರಜಿತ್‌ ಬೆಳ್ಯಪ್ಪ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಗುರುವಿನ ಸ್ಥಾನದಲ್ಲಿ ನಿಂತು ಅನಾಹಿತ ಪಾತ್ರಕ್ಕೆ ಜೀವ ತುಂಬಿಸಿದ್ದರು. ನಮ್ಮ ತಂಡದ ಮೇಲೆ ನಂಬಿಕೆ ಇಟ್ಟ ನಿರ್ಮಾಪಕರಾದ ರಕ್ಷಿತ್‌ ಶೆಟ್ಟಿ ಅವರಿಗೂ ಧನ್ಯವಾದ. ಪ್ರೇಕ್ಷಕರು ಇಲ್ಲದೆ ಸಿನಿಮಾ ಓಡಲು ಸಾಧ್ಯವಿಲ್ಲ. ಅವರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ವೈಯಕ್ತಿಕ ಜೀವನ ನೆಮ್ಮದಿಯಾಗಿದ್ದರಷ್ಟೇ ತೆರೆಯಲ್ಲಿ ನಟನೆ ಸಲೀಸಾಗಿ ಬರಲು ಸಾಧ್ಯ. ಇಂತಹ ಕುಟುಂಬ ನನ್ನ ಜೊತೆಗಿದೆ’ ಎಂದು ಅಭಿಮಾನ ಪಟ್ಟರು. 

ನಾಮನಿರ್ದೇಶನಗೊಂಡವರು: ಅಂಕಿತಾ ಅಮರ್‌ (ಇಬ್ಬನಿ ತಬ್ಬಿದ ಇಳೆಯಲಿ), ಸ್ವತಿಷ್ಠ ಕೃಷ್ಣನ್‌ (ಒಂದು ಸರಳ ಪ್ರೇಮಕಥೆ), ರೋಶಿನಿ ಪ್ರಕಾಶ್‌ (ಮರ್ಫಿ), ಶರಣಮ್ಮ ಚೆಟ್ಟಿ (ಶಿವಮ್ಮ ಯರೇಹಂಚಿನಾಳ), ಮಮತಾ ರಾಹುತ್‌ (ತಾರಿಣಿ), ಮಹಾಲಕ್ಷ್ಮಿ (ಕುಬುಸ), ನಿಶಾ ರವಿಕೃಷ್ಣ (ಅಂಶು).  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.