1961. ಉತ್ತರ ಕರ್ನಾಟಕದಲ್ಲಿ ನೆರೆ. ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸಲು ‘ಪ್ರಜಾವಾಣಿ’ ಮುಂದಾಗಿತ್ತು. ಆಗ ವರನಟ ಎಂದೇ ಗುಣವಿಶೇಷಣ ಸಂಪಾದಿಸಿದ್ದ ರಾಜ್‌ಕುಮಾರ್ ಜತೆಯಾದರು. ಅವರೇ ಬಂದಮೇಲೆ ಚಿತ್ರರಂಗದ ಇನ್ನಷ್ಟು ಜನರು ಬರದೇ ಇರಲು ಸಾಧ್ಯವೆ? ಮದ್ರಾಸ್‌ನಲ್ಲಿ ನೆಲೆಗೊಂಡಿದ್ದ ಕನ್ನಡ ಸಿನಿಮಾ ಚಿತ್ರೀಕರಣ ಚಟುವಟಿಕೆ ನಮ್ಮ ರಾಜ್ಯಕ್ಕೆ ಸ್ಥಳಾಂತರಗೊಳ್ಳಲು ಅಗತ್ಯವಿದ್ದ ಸ್ಫೂರ್ತಿಯ ಬೀಜ ಬಿತ್ತಿದ್ದು ಆ ಪರಿಹಾರ ಸಂಗ್ರಹ ಅಭಿಯಾನ.
ಪತ್ರಿಕೆ ಹಾಗೂ ಕನ್ನಡ ಚಿತ್ರರಂಗದ ನಡುವಿನ ಸಾಂಸ್ಕೃತಿಕ ಕೊಡು-ಕೊಳುವಿಕೆಯ ಗಟ್ಟಿತನಕ್ಕೆ ಇದು ಒಂದು ಉದಾಹರಣೆಯಷ್ಟೆ.
‘ಪ್ರಜಾವಾಣಿ’ ಮೊದಲಿನಿಂದಲೂ ಸಿನಿಮಾ ಕ್ಷೇತ್ರವನ್ನು ಕನ್ನಡ ಸಂಸ್ಕೃತಿಯ ಭಾಗವಾಗಿಯೇ ನೋಡುತ್ತಾ ಬಂದಿದೆ. ಮದ್ರಾಸ್‌ಗೂ ಆಗೀಗ ಬೆಂಗಳೂರಿನಿಂದ ಪ್ರಮುಖ ಹುದ್ದೆಯಲ್ಲಿದ್ದ ಪತ್ರಕರ್ತರು ಹೋಗಿ, ಸಿನಿಮಾ ವರದಿಗಳನ್ನು ಪ್ರಕಟಿಸಿದ್ದು ಗಮನಾರ್ಹ. ದೇಶದ ವಿವಿಧೆಡೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆದಾಗಲೂ ಪ್ರತ್ಯಕ್ಷ ವರದಿಗಾರಿಕೆಗೆ ಪತ್ರಿಕೆ ಒತ್ತುನೀಡಿತ್ತು.
ಕಿರುತೆರೆಯ ವ್ಯಾಪಕತೆ ಹೆಚ್ಚಾದ ಮೇಲೆ ಧಾರಾವಾಹಿ ತಂತ್ರಜ್ಞರ, ನಟ-ನಟಿಯರ ಪರಿಚಯ ಮಾಡಿಕೊಡಲೂ ಪುಟ ಮೀಸಲಿಟ್ಟ ಪತ್ರಿಕೆ ‘ಪ್ರಜಾವಾಣಿ’. ಸಿನಿಮಾ ವಿಮರ್ಶೆ, ವಿಶ್ಲೇಷಣೆ, ಅಂಕಣಗಳು ಮೊದಲಿನಿಂದಲೂ ಘನತೆ ಕಾಪಾಡಿಕೊಂಡು ಬಂದಿರುವುದು ಕೂಡ ಹೆಗ್ಗಳಿಕೆ.
‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ’ದ ಕಥಾಸ್ಪರ್ಧೆಯು ನಾಡಿನ ಹಮ್ಮೆಯ ಕಥೆಗಾರರನ್ನು ಬೆಳಕಿಗೆ ತಂದಿದೆ. ಆ ಮೂಲಕ ಸಾಹಿತ್ಯ ದೀವಿಗೆಗಳನ್ನು ತೇಲಿಬಿಟ್ಟಿದೆ. ಆ ದೀವಿಗೆಗಳ ಬೆಳಕು ಸದಾ ಕಾಲ ಉಳಿದಿರುವುದು ಹೆಮ್ಮೆ. ಇಂತಹುದೇ ಪರಂಪರೆಯನ್ನು ಸಿನಿಮಾ ಪ್ರಶಸ್ತಿಗಳ ಮೂಲಕವೂ ಸೃಷ್ಟಿಸುವುದು ಪತ್ರಿಕೆಯ ಹೆಬ್ಬಯಕೆ.
ಕನ್ನಡ ಚಿತ್ರರಂಗವೀಗ ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ಜತೆಗೆ ಸದ್ದೂ ಮಾಡತೊಡಗಿದೆ. ಜನಪ್ರಿಯತೆ ಹಾಗೂ ಗುಣಮಟ್ಟದ ದೃಷ್ಟಿಯಿಂದ ಹೊಮ್ಮಲಿರುವ ಗಟ್ಟಿ ಕಾಳುಗಳ ಸಂಖ್ಯೆ ಹೆಚ್ಚೇ ಆಗಲಿದೆ ಎನ್ನುವ ಆಶಾವಾದ ಪತ್ರಿಕೆಯದ್ದು. ಜನಪ್ರಿಯ ಹಾಗೂ ಪರ್ಯಾಯ ಎರಡೂ ಮಾದರಿಗಳಲ್ಲಿ ಗಮನಾರ್ಹವಾದ ಸಿನಿಮಾಗಳು ಮೂಡಿಬರುತ್ತಿವೆ. ಅವುಗಳ ಸಂಖ್ಯಾಸಮೃದ್ಧಿಯ ಆಶಯದೊಂದಿಗೆ ಇಂಧನ ರೂಪದಲ್ಲಿ ‘ಪ್ರಜಾವಾಣಿ ಸಿನಿ ಸಮ್ಮಾನ’ವನ್ನು ಪ್ರಾರಂಭಿಸುತ್ತಿದೆ. 2022ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಪ್ರಶಸ್ತಿಗಳು ಯಾರು ಯಾರಿಗೆ ಸಲ್ಲಲಿವೆ ಎನ್ನುವ ಕುತೂಹಲ ತಣಿಯಲು ದಿನಗಣನೆ ಶುರುವಾಗುತ್ತಿದೆ.
ಸಂಕೀರ್ಣವೂ ಪಾರದರ್ಶಕವೂ ಆದ ಆಯ್ಕೆ ಪ್ರಕ್ರಿಯೆಯ ಈ ಪ್ರಶಸ್ತಿ ಕನ್ನಡ ಚಿತ್ರರಂಗದ ನಿಜಸಾಧಕರ ಕಿರೀಟಕ್ಕೆ ಹೊಳೆಯುವ ಗರಿಯಾದೀತೆಂಬ ಸದಾಶಯ ಪತ್ರಿಕೆಯದ್ದು.
ಪ್ರಶಸ್ತಿಯ ರೂಪುರೇಷೆ ಹಾಗೂ ಪತ್ರಿಕೆಗೂ ಚಿತ್ರರಂಗಕ್ಕೂ ಇರುವ ನಂಟಿನ ಇನ್ನಷ್ಟು ಮಾಹಿತಿ ನಿತ್ಯವೂ ಓದುಗರಿಗೆ ಇನ್ನು ಕೆಲವು ದಿನಗಳ ಕಾಲ ಈ ಪುಟದಲ್ಲಿ ಲಭ್ಯವಾಗಲಿದೆ. ಕುತೂಹಲದ ಕಣ್ಣು ಎಲ್ಲ ಓದುಗರದೂ ಆಗಲಿ ಎನ್ನುವುದು ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.