ADVERTISEMENT

Interview | ಇಷ್ಟವಾದರೆ ಯಾವ ಪಾತ್ರವಾದರೂ ಸೈ: ಪ್ರಮೋದ್‌ ಶೆಟ್ಟಿ 

ಅಭಿಲಾಷ್ ಪಿ.ಎಸ್‌.
Published 28 ನವೆಂಬರ್ 2024, 23:30 IST
Last Updated 28 ನವೆಂಬರ್ 2024, 23:30 IST
<div class="paragraphs"><p>ಪ್ರಮೋದ್‌ ಶೆಟ್ಟಿ&nbsp;</p></div>

ಪ್ರಮೋದ್‌ ಶೆಟ್ಟಿ 

   

*‘ಉಳಿದವರು ಕಂಡಂತೆ’ಯಿಂದ ಇಲ್ಲಿಯವರೆಗಿನ ಸಿನಿಪಯಣ ನಿಮ್ಮಲ್ಲಿ ತಂದ ಬದಲಾವಣೆ ಏನು?

ರಂಗಭೂಮಿಯ ಒಲವೇ ನನಗೆ ಹೆಚ್ಚಿತ್ತು. ಸಿನಿಮಾ ಬಗ್ಗೆ ಯೋಚಿಸಿಯೇ ಇರಲಿಲ್ಲ. ಅಂಥ  ಯೋಚನೆಯೇ ಇಲ್ಲದವನಿಗೆ ‘ಉಳಿದವರು ಕಂಡಂತೆ’ ಸಿನಿಮಾಕ್ಕೆ ನನ್ನ ಮೇಲೆ ಒತ್ತಡ ಹಾಕಿ ರಿಷಬ್‌ ಹಾಗೂ ರಕ್ಷಿತ್‌ ಕರೆತಂದರು. ಈ ಸಿನಿಮಾ ಬಳಿಕವೇ ನನಗೆ ಸಿನಿಮಾ ಮೇಲೆ ಪ್ರೀತಿ, ಆಸಕ್ತಿ ಹುಟ್ಟಿದ್ದು. ಅಲ್ಲಿಂದ ಇಲ್ಲಿಯವರೆಗೆ ಮಾಡಿದಂತಹ ಯಾವ ಪಾತ್ರಗಳೂ ನನಗೆ ನಿರಾಶೆ ಮಾಡಿಲ್ಲ. ಸಿಕ್ಕಿದಂತಹ ಎಲ್ಲ ಪಾತ್ರಗಳಲ್ಲೂ ಹೊಸತನ ಹುಡುಕಿಕೊಂಡಿದ್ದೇನೆ. ನನ್ನ ಜೀವನದ ದೊಡ್ಡ ಬದಲಾವಣೆ ಎಂದರೆ ಪೋಷಕ ಪಾತ್ರದ ಮೂಲಕ ಬಂದವನು ಇಂದು ಹೀರೊ ಆಗಿ ನಿಂತಿದ್ದೇನೆ. ಜನ ನನ್ನನ್ನು, ನನ್ನ ಪಾತ್ರಗಳನ್ನು ಪ್ರೀತಿಸಿದ್ದೇ ಇದಕ್ಕೆ ಕಾರಣ ಎಂದುಕೊಂಡಿದ್ದೇನೆ. ಹೊಸ ಉದ್ಯಮಕ್ಕೆ ಬಂದಾಗ ನಾವು ಹೊಂದಿಕೊಂಡು ಹೋಗಬೇಕು ಎನ್ನುವುದನ್ನು ಕಲಿತೆ.

ADVERTISEMENT

ರಂಗಭೂಮಿಯಲ್ಲಿರುವ ವೇದಿಕೆ ಸ್ವಾತಂತ್ರ್ಯ ಸಿನಿಮಾದಲ್ಲಿ ಇಲ್ಲ. ಇದು ಹಿಂಸೆ ಎನಿಸಿದರೂ ಇದಕ್ಕೂ ಒಗ್ಗಿಕೊಂಡೆ. ಹೀಗಾಗಿ ಬೆಳವಣಿಗೆ ಸಾಧ್ಯವಾಯಿತು. ಇವತ್ತಿಗೂ ಪೋಷಕ ಪಾತ್ರದ ಅವಕಾಶ ಬಂದರೆ ಬಿಡುವುದಿಲ್ಲ. ಒಮ್ಮೆ ಹೀರೊ ಆದ ಮೇಲೆ ಬೇರೆ ಪಾತ್ರಗಳನ್ನು ಮಾಡುವುದಿಲ್ಲ ಎನ್ನುವ ಧೋರಣೆ, ಮನಃಸ್ಥಿತಿ ನನ್ನಲ್ಲಿ ಇಲ್ಲ. ನಾನು ಕೇವಲ ಪಾತ್ರವನ್ನು ನೋಡುತ್ತೇನೆ. ಜನಕ್ಕೆ ಇಷ್ಟವಾದರೆ ಯಾವ ಪಾತ್ರದಲ್ಲಾದರೂ ನಮ್ಮನ್ನು ನೋಡುತ್ತಾರೆ. 

*ಕನ್ನಡದಲ್ಲಿ ಹಾಸ್ಯಪ್ರಧಾನ ಸಿನಿಮಾಗಳಿಗೆ ಹೀರೊ ಕೊರತೆ ಇದೆಯೇ? 

ಹೌದು. ಒಂದು ಇಂಡಸ್ಟ್ರಿಗೆ ಎಲ್ಲ ರೀತಿಯ ನಾಯಕರ ಅವಶ್ಯಕತೆ ಇದೆ. ಕಮರ್ಷಿಯಲ್‌ ಸಿನಿಮಾ ನೋಡುವವರ ಸಂಖ್ಯೆ ಎಷ್ಟಿದೆಯೋ ಅಷ್ಟೇ ಕ್ಲಾಸ್‌ ಸಿನಿಮಾ ನೋಡವವರ ಸಂಖ್ಯೆಯೂ ಇದೆ. ನಮ್ಮಲ್ಲಿ ಸಿನಿಮಾವನ್ನು ಏಕಪರದೆಗೆ, ಮಲ್ಟಿಪ್ಲೆಕ್ಸ್‌ಗೆ ಎಂದು ವಿಭಾಗ ಮಾಡುತ್ತಾರೆ. ಏಕಪರದೆ ಚಿತ್ರಮಂದಿರಗಳಿಗೆ ಮಾಸ್‌ ಸಿನಿಮಾ ಬೇಕು. ನೋಡಲು ಅಷ್ಟೇನು ಚೆನ್ನಾಗಿ ಇಲ್ಲದೇ ಇದ್ದರೂ ಕೆಲವರು ನಟನೆಯಿಂದಷ್ಟೇ ಮಾಸ್‌ ಹೀರೊ ಆಗುವ ಸಾಮರ್ಥ್ಯ ಹೊಂದಿದ್ದಾರೆ. ರಕ್ಷಿತ್‌, ಯಶ್‌ ರೀತಿ ನೋಡಲು ಚೆಂದವಾಗಿರುವವರೂ ಮಾಸ್‌ ಹೀರೊ ಆಗುತ್ತಾರೆ. ಕನ್ನಡ ಚಿತ್ರರಂಗದಲ್ಲಿ ವಿಜಯ್‌ ಸೇತುಪತಿ, ಜೋಜು ಜಾರ್ಜ್‌ ಮಾದರಿಯ ನಟರ ಕೊರತೆ ಇದೆ ಎಂದು ಹಲವರು ಹೇಳುತ್ತಾರೆ. ಗಂಭೀರವಾದ ಪಾತ್ರವನ್ನೂ, ಹಾಸ್ಯಪ್ರಧಾನ ಸಿನಿಮಾಗಳನ್ನೂ ಇವರು ಮಾಡುತ್ತಾರೆ. ನನ್ನಲ್ಲಿ ಈ ರೀತಿ ಸಾಮರ್ಥ್ಯವಿದೆ ಎಂದು ನನಗೆ ಕಥೆ ಹೇಳಲು ಬರುವವರು, ಸ್ನೇಹಿತರು ಹೇಳುತ್ತಾರೆ. ಪ್ರಸ್ತುತ ಮಾಸ್‌ ಹೀರೊ ಮತ್ತು ಕ್ಲಾಸ್‌ ಹೀರೊಗಳ ಸಿನಿಮಾಗಳ ಸಮತೋಲನದ ಅಗತ್ಯವಿದೆ.

*‘ಲಾಫಿಂಗ್‌ ಬುದ್ಧ’ ಸಿನಿಮಾ ನೀಡಿದ ಅನುಭವ...

ಈ ಸಿನಿಮಾಗಾಗಿ ನಾನು ದೈಹಿಕವಾಗಿ ಬಹಳಷ್ಟು ಬದಲಾವಣೆ ತಂದುಕೊಂಡಿದ್ದೆ. ತೂಕ ಹೆಚ್ಚಿಸಿಕೊಂಡು ಪಾತ್ರದೊಳಗೆ ಪ್ರವೇಶಿಸಿದ್ದೆ. ಒಂದು ಹಾಸ್ಯಪ್ರಧಾನ ಕೌಟುಂಬಿಕ ಸಿನಿಮಾ ಮಾಡುವುದು ಪ್ರಸ್ತುತ ಸಮಯದ ಅಗತ್ಯವಾಗಿದೆ. ಈ ಸಿನಿಮಾದ ಹಿಂದೆ ಬಂದ ‘ಭೀಮ’ ಹಾಗೂ ‘ಕೃಷ್ಣಂ ಪ್ರಣಯ ಸಖಿ’ ಪ್ರೇಕ್ಷಕರನ್ನು ಸೆಳೆದಿದ್ದು ‘ಲಾಫಿಂಗ್‌ ಬುದ್ಧ’ಕ್ಕೂ ಸಹಕಾರಿಯಾಯಿತು. ನನ್ನ ಈ ಸಿನಿಮಾ ಜನರಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ರುಚಿಯನ್ನು ಮತ್ತೊಮ್ಮೆ ಹತ್ತಿಸಿತು ಎನ್ನುವುದು ಖುಷಿಯ ವಿಷಯ. ‘ಲಾಫಿಂಗ್‌ ಬುದ್ಧ’ದಲ್ಲಿ ನನ್ನ ಪಾತ್ರಕ್ಕೆ ಹಾಸ್ಯದ ಸ್ಪರ್ಶವಿತ್ತು. ಇದಕ್ಕೆ ತದ್ವಿರುದ್ಧವಾದ ಗುಣವುಳ್ಳ ಪೊಲೀಸ್‌ ಪಾತ್ರ ‘ಜಲಂಧರ’ ಸಿನಿಮಾದಲ್ಲಿದೆ. ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾಯುತ್ತಿದ್ದೇನೆ.  

*ಏನಿದು ಜಲಂಧರ? 

‘ಜಲಂಧರ’ ಒಬ್ಬ ರಾಕ್ಷಸನ ಹೆಸರು. ನೀರಿನೊಳಗೆ ಇರುವ ರಾಕ್ಷಸನನ್ನು ಕಂಡುಹಿಡಿಯುವ ಕೆಲಸ ನನ್ನ ಈ ಪಾತ್ರದ್ದು. ನೀರು ಕಂಡ ತಕ್ಷಣ ಎಲ್ಲರೂ ಒಮ್ಮೆ ಹುಚ್ಚುಕಟ್ಟಿ ಹಾರುತ್ತಾರೆ. ಅದರೊಳಗೆ ಅಡಗಿರುವ ರಾಕ್ಷಸನ ಅರಿವು ಅವರಿಗೆ ಇರುವುದಿಲ್ಲ. ‘ನೀರಿನೊಳಗೆ ಮುಳುಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಾರೆ’ ಎಂದು ಕಥೆಯನ್ನು ಲೋಕಿ ಬಂದು ಹೇಳಿದಾಗ ಇದರಲ್ಲಿ ಹೊಸದೇನಿದೆ ಎಂದುಕೊಳ್ಳುತ್ತಿದೆ. ಆದರೆ ಇದಕ್ಕೆ ಭಿನ್ನ ತಿರುವೊಂದನ್ನು ಅವರು ನೀಡಿದ್ದರು. ಇದು ನನ್ನನ್ನು ಸೆಳೆಯಿತು. ಈ ಮಾದರಿಯ ಸಿನಿಮಾವನ್ನು ನಾನು ಎಲ್ಲೂ ನೋಡಿಲ್ಲ. ಘಟನೆಗಳು ಆಕಸ್ಮಿಕವೇ ಅಥವಾ ದುಷ್ಕೃತ್ಯವೇ ಎನ್ನುವುದು ಇಡೀ ಸಿನಿಮಾದ ಎಳೆ. ಒಂದು ಪ್ರಕರಣವನ್ನು ನನ್ನ ಪಾತ್ರ ಭೇದಿಸಿದಾಗ ಇಡೀ ಸಿನಿಮಾ ತೆರೆದುಕೊಳ್ಳುತ್ತದೆ. 

*ಯಾವ ಸಿನಿಮಾಗಳು ಬಿಡುಗಡೆಗೆ ಸಿದ್ಧವಿವೆ?

‘ಮ್ಯಾಕ್ಸ್‌’, ‘ಚೀತಾ’ ಹಾಗೂ ತಮಿಳಿನಲ್ಲಿ ಯೋಗಿಬಾಬು ಅವರ ಜೊತೆಗಿನ ‘ಸನ್ನಿಧಾನಂ ಪಿ.ಒ.’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ‘ಕಾಂತಾರ’ದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಕಥೆಗಳಿದ್ದರೆ ಹೇಳಿ ಸಿನಿಮಾ ಮಾಡುತ್ತೇವೆ ಎಂದು ಮೂರ್ನಾಲ್ಕು ಜನ ನಿರ್ಮಾಪಕರು ಬಂದಿದ್ದಾರೆ. ನಿರ್ದೇಶಕರೂ ಬಂದಿದ್ದರು. ಆದರೆ ಕಥೆಗಳು ಅದ್ಭುತ ಎನಿಸಲಿಲ್ಲ. ‘ರಿಚರ್ಡ್‌ ಆ್ಯಂಟನಿ’ ಕಥೆ ಪೂರ್ಣಗೊಳ್ಳುತ್ತಿದೆ. ಚಿತ್ರೀಕರಣದ ಸ್ಥಳಗಳ ಹುಡುಕಾಟ ನಡೆಯುತ್ತಿದೆ. ಮುಂದಿನ ವರ್ಷಾರಂಭದಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಈ ಪಾತ್ರಕ್ಕಾಗಿ ‘ಲಾಫಿಂಗ್‌ ಬುದ್ಧ’ದ ಬಳಿಕ 27 ಕೆ.ಜಿ. ತೂಕ ಇಳಿಸಿಕೊಂಡಿದ್ದೆ. ‘ಲಾಫಿಂಗ್‌ ಬುದ್ಧ’ ಸಿನಿಮಾದ ಸಂಭ್ರಮದಿಂದ ನಾಲ್ಕೈದು ಕೆ.ಜಿ. ತೂಕ ಏರಿಕೆಯಾಗಿದೆ. ಡಿಸೆಂಬರ್‌ನಿಂದ ಮತ್ತೆ ತೂಕ ಇಳಿಕೆಯತ್ತ ಗಮನಹರಿಸಿಬೇಕು. 

*ನಿರ್ದೇಶನದ ಕನಸು ಇದೆಯೇ?

ಖಂಡಿತಾ ಇದೆ. ರಂಗಭೂಮಿಯಿಂದ ಬಂದವನು ನಾನು. ಆದರೆ ಸದ್ಯ ನಟನಾಗಿ ಕೈತುಂಬಾ ಕೆಲಸ ಇದೆ. ಹೀಗಾಗಿ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ನಿರ್ದೇಶನ ಎಂದರೆ ಕನಿಷ್ಠ ಒಂದು ವರ್ಷ ಅದಕ್ಕೇ ಮೀಸಲಿಡಬೇಕು. ಬರೆದಿರುವ ಕಥೆಗಳನ್ನು ಬದಿಗೆ ಇಟ್ಟಿದ್ದೇನೆ. ಅದು ಯಾವ ಕಾಲಘಟ್ಟಕ್ಕಾದರೂ ಮಾಡಬಹುದಾದ ಸಿನಿಮಾ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.