ADVERTISEMENT

ಸಂದರ್ಶನ | ಏರುಪೇರು ಎಲ್ಲಾ ಕಡೆ ಇದ್ದದ್ದೇ: ನಟ ಪ್ರವೀಣ್‌ ತೇಜ್‌ ಸಿನಿಪಯಣ

ವಿನಾಯಕ ಕೆ.ಎಸ್.
Published 12 ಸೆಪ್ಟೆಂಬರ್ 2025, 0:30 IST
Last Updated 12 ಸೆಪ್ಟೆಂಬರ್ 2025, 0:30 IST
<div class="paragraphs"><p>ಜಂಬೂ ಸರ್ಕಸ್‌ ಚಿತ್ರದಲ್ಲಿ ನಟ&nbsp;ಪ್ರವೀಣ್‌ ತೇಜ್‌ ಹಾಗೂ ಅಂಜಲಿ ಅನೀಶ್</p></div>

ಜಂಬೂ ಸರ್ಕಸ್‌ ಚಿತ್ರದಲ್ಲಿ ನಟ ಪ್ರವೀಣ್‌ ತೇಜ್‌ ಹಾಗೂ ಅಂಜಲಿ ಅನೀಶ್

   
ಪ್ರವೀಣ್‌ ತೇಜ್‌ ನಟನೆಯ ಜಂಬೂ ಸರ್ಕಸ್‌ ಚಿತ್ರ ಇಂದು (ಸೆ.12) ತೆರೆ ಕಾಣುತ್ತಿದೆ. ಚಿತ್ರರಂಗದಲ್ಲಿ ಒಂದೂವರೆ ದಶಕ ಪೂರೈಸಿರುವ ಅವರು ತಮ್ಮ ಸಿನಿಪಯಣ ಕುರಿತು ಮಾತನಾಡಿದ್ದಾರೆ. 

ನಿಮ್ಮ ಪಾತ್ರ ಕುರಿತು...

ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ‘ಆಕಾಶ್‌’ ಎಂಬ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಿರುವೆ. ಮಿಡಲ್‌ ಕ್ಲಾಸ್‌ ಕುಟುಂಬದಿಂದ ಬಂದಿರುತ್ತೇನೆ. ಕೌಟಂಬಿಕ ಮೌಲ್ಯ ಹೊಂದಿರುವ ಅಪ್ಪ, ಅಮ್ಮ, ಅಜ್ಜಿ ಜತೆ ಬೆಳೆದಿರುತ್ತೇನೆ. ಕಾಲೇಜಿನಲ್ಲಿ ಪ್ರೇಮಕಥೆ ಶುರುವಾಗುತ್ತದೆ. ಇದಕ್ಕೂ ಚಿತ್ರದ ಮುಖ್ಯ ಕಥೆಗೂ ಸಂಬಂಧವಿದೆ. 

ADVERTISEMENT

ಮೊದಲ ಸಿನಿಮಾ ಮಾಡಿದ ನಿರ್ದೇಶಕನ ಜತೆ ದಶಕದ ಬಳಿಕ ಸಿನಿಮಾ ಮಾಡಿದ ಅನುಭವ ಹೇಗಿತ್ತು?

ನನ್ನನ್ನು ‘ಜಾಲಿಡೇಸ್‌’ ಚಿತ್ರದ ಮೂಲಕ ಮೊದಲು ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕ ಎಂ.ಡಿ.ಶ್ರೀಧರ್‌. ಹದಿನೈದು ವರ್ಷಗಳ ಬಳಿಕ ಮತ್ತೆ ಅವರದ್ದೇ ನಿರ್ದೇಶನದ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂಬುದು ಅತ್ಯಂತ ಖುಷಿಯ ಸಂಗತಿ. ಕಥೆ ಹೇಗಿದೆ ಅಥವಾ ಪಾತ್ರ ಹೇಗಿದೆ ಎಂಬುದನ್ನು ಆಚೆಯಿಟ್ಟು ಎಂ.ಡಿ.ಶ್ರೀಧರ್‌ ಅವರು ನಟಿಸಲು ಕೇಳಿದ ತಕ್ಷಣ ಈ ಚಿತ್ರ ಒಪ್ಪಿಕೊಂಡೆ. ನಂತರ ಕಥೆ ಕೇಳಿದೆ. ಅದೂ ಚೆನ್ನಾಗಿತ್ತು. ಎಲ್ಲವೂ ಕೂಡಿಬಂತು. ಚಿತ್ರೀಕರಣದಲ್ಲಿ ಸಿನಿಮಾ ಬಗ್ಗೆ ಅಷ್ಟು ಗೊತ್ತಾಗಲಿಲ್ಲ. ಆದರೆ ಪೂರ್ತಿ ಸಿನಿಮಾ ನೋಡಿದಾಗ ಹೆಮ್ಮೆ ಎನಿಸಿತು.  

ನಿಮ್ಮ ಈತನಕದ ಸಿನಿಪಯಣ ಹೇಗಿತ್ತು?

ಚೆನ್ನಾಗಿತ್ತು. ಮೂರು ಸಿನಿಮಾಗಳಲ್ಲಿ ನಟಿಸಿದ ಬಳಿಕ ಧಾರಾವಾಹಿಯಲ್ಲಿ ನಟಿಸಿದೆ. ಮತ್ತೆ ಚಿತ್ರರಂಗಕ್ಕೆ ಮರಳಿದೆ. ಏರಿಳಿತ ಇದ್ದೇ ಇರುತ್ತದೆ. ಯಾವುದೇ ವೃತ್ತಿಯಲ್ಲೂ ಇದು ಸಹಜ. 15 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಉದ್ಯಮದಲ್ಲಿದ್ದಾಗ, ಒಂದೆರಡು ವರ್ಷ ಚೆನ್ನಾಗಿ ನಡೆಯುತ್ತೆ. ಮತ್ತೊಂದೆರಡು ವರ್ಷ ಹಿನ್ನಡೆ ಇರುತ್ತದೆ. ಈ ಏರುಪೇರು ಇದ್ದೇ ಇರುತ್ತದೆ.

ಈತನಕ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ ಎನ್ನಿಸುತ್ತಿದೆಯಾ?

ಯಶಸ್ಸು ನಮ್ಮ ಕೈಯಲ್ಲಿ ಇಲ್ಲ. ಪ್ರಾರಂಭದಲ್ಲಿ ಯಾಕೆ ಹಿಟ್‌ ಆಗುತ್ತಿಲ್ಲ ಎಂದು ಯೋಚಿಸುತ್ತಿದ್ದೆ. ಕಾಲ ಕಳೆಯುತ್ತಿದ್ದಂತೆ ಯಾಕೆ ಒಂದು ಸಿನಿಮಾ ಓಡಿಲ್ಲ ಎಂಬುದು ನಮಗೇ ಅರ್ಥವಾಗುತ್ತ ಹೋಗುತ್ತದೆ. ಎಷ್ಟೋ ಸಲ ಸಿನಿಮಾ ಚೆನ್ನಾಗಿರುತ್ತದೆ. ಆದರೆ ಜನಕ್ಕೆ ತಲುಪಿರುವುದಿಲ್ಲ. ಜನಕ್ಕೆ ತಲುಪುವ ವೇಳೆ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದಿರುತ್ತಾರೆ. ಇಲ್ಲಿ ಎಲ್ಲವೂ ಹಣದ ಮೇಲೆ ನಿಂತಿದೆ. ಎಷ್ಟೋ ಸಿನಿಮಾಗಳಲ್ಲಿ ಸಿನಿಮಾ ಮುಗಿಯುವ ಹೊತ್ತಿಗೆ ನಿರ್ಮಾಪಕರಿಗೆ ಸುಸ್ತಾಗಿರುತ್ತದೆ. ಪ್ರಚಾರಕ್ಕೆ ಹಣವೇ ಇರುವುದಿಲ್ಲ. ಇದೊಂದು ದೊಡ್ಡ ಹಣದ ಆಟ. ಇಲ್ಲಿ ನಮ್ಮ ಯೋಚನೆಗೆ ಮೀರಿದ್ದು ಸಾಕಷ್ಟಿದೆ. ಹೀಗಾಗಿ ಯಶಸ್ಸಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸದಲ್ಲಿ ಶೇಕಡ ನೂರರಷ್ಟು ಶ್ರಮ ಹಾಕುತ್ತೇನೆ. 

ಅವಕಾಶಗಳಿಗೆ ಯಶಸ್ಸು ಎಷ್ಟು ಮುಖ್ಯವಾಗುತ್ತದೆ? 

ಅವಕಾಶಗಳಿಗೆ ಇದು ತುಂಬ ಮುಖ್ಯ. ನಮಗೆ ಸಿಗುವ ಸಿನಿಮಾಗಳು ನಮ್ಮ ಹಿಂದಿನ ಸಿನಿಮಾಗಳನ್ನು ಅವಲಂಬಿಸಿ ಇರುತ್ತವೆ. ಬಜೆಟ್‌ ಕೂಡ ನಮ್ಮ ಹಿಂದಿನ ಫಲಿತಾಂಶ, ವಹಿವಾಟು ಮೇಲೆಯೇ ಆಧಾರಿತವಾಗಿರುತ್ತದೆ. ಮಾರ್ಕೆಟಿಂಗ್‌ ಬಜೆಟ್‌ ಕೂಡ ಅದರ ಮೇಲೆಯೇ ನಿಂತಿದೆ. ಯಶಸ್ಸು ಇದ್ದಾಗ ಒಂದು ರೀತಿಯ ವಹಿವಾಟು ನಡೆಯುತ್ತದೆ. ಜನಕ್ಕೆ ಮನರಂಜನೆಗಾಗಿ ತುಂಬ ಅವಕಾಶಗಳಿವೆ. ಹೀಗಾಗಿ ಜನ ಸಿನಿಮಾಕ್ಕೆ ಬರುವಂತೆ ಮಾಡುವ ಹೊಣೆ ನಮ್ಮ ಮೇಲೆಯೇ ಇದೆ.

ನೀವು ಪ್ರಯೋಗಾತ್ಮಕ ಚಿತ್ರಗಳ‌ನ್ನು ಮಾಡಿದ್ದೇ ಹೆಚ್ಚು. ಆ್ಯಕ್ಷನ್‌ ಹೀರೊ ಕನಸಿಲ್ಲವೆ?

ಪ್ರಯೋಗಾತ್ಮಕ ಸಿನಿಮಾಗಳು ಒಂದು ರೀತಿ ಸುರಕ್ಷಿತ. ಉತ್ತಮ ವಿಮರ್ಶೆ ಪಡೆದುಕೊಂಡು ಒಂದಷ್ಟು ಜನ ಬರುತ್ತಾರೆ. ಒಂದಷ್ಟು ಆದಾಯ ಮರಳಿ ಬರುತ್ತದೆ. ಆ್ಯಕ್ಷನ್‌ ಸಿನಿಮಾಗಳಿಗೆ ಅವುಗಳದ್ದೇ ಆದ ಒಂದು ಲೆಕ್ಕಾಚಾರವಿದೆ. ಹಿಂದಿನ ಸಿನಿಮಾ ‘ಜಿಗರ್‌’ ಆ್ಯಕ್ಷನ್‌ ಸಿನಿಮಾವೇ ಆಗಿತ್ತು. ಆದರೆ ಹೆಚ್ಚು ಜನರಿಗೆ ತಲುಪಲಿಲ್ಲ. ದೊಡ್ಡ ನಟರಿದ್ದಾಗ ಆ್ಯಕ್ಷನ್‌ ಸಿನಿಮಾಗಳು ಹೆಚ್ಚು ಯಶಸ್ಸು ಗಳಿಸುತ್ತವೆ. ನಾನು ಆ ಹಂತ ತಲುಪಿಲ್ಲ ಎನ್ನಿಸುತ್ತದೆ. ‘ಜಂಬೂ ಸರ್ಕಸ್‌’ ಕೂಡ ದರ್ಶನ್‌ ರೀತಿ ಸ್ಟಾರ್‌ ನಟರು ಮಾಡಿದ್ದರೆ ನಿರ್ಮಾಪಕರಿಗೆ ಹೆಚ್ಚು ಅನುಕೂಲವಾಗುತ್ತಿತ್ತೇನೋ, ನನ್ನಿಂದ ಅವರಿಗೆ ತೊಂದರೆಯಾಯಿತೇನೋ ಎಂಬ ನೋವು ನನ್ನಲ್ಲಿ ಇದೆ.

ಈ ಚಿತ್ರ ಗೆದ್ದರೇ ದೊಡ್ಡ ಪ್ರಮಾಣದಲ್ಲಿ ಗೆಲ್ಲುತ್ತದೆ, ಇಲ್ಲವಾದಲ್ಲಿ ಸದ್ದಿಲ್ಲದೇ ಹೋಗುತ್ತದೆ ಎಂಬ ರೀತಿಯ ಸಿನಿಮಾ.

ನಿಮ್ಮ ಮುಂದಿನ ಸಿನಿಮಾಗಳು...

ಕನ್ನಡದಲ್ಲಿ ಒಂದು ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲಿಯೇ ಅದರ ಮಾಹಿತಿ ನೀಡುತ್ತೇವೆ. ತೆಲುಗಿನಲ್ಲಿ ಒಂದು ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಒಂದು ವೆಬ್‌ ಸರಣಿಯಲ್ಲಿ ನಟಿಸುತ್ತಿರುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.