ADVERTISEMENT

ಸುಂದರಮ್ಮಳ ವಿರಾಟ ಪರ್ವ: ಟಾಲಿವುಡ್‌ಗೆ ಮರಳಿದ ಪ್ರಿಯಾಮಣಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 9:50 IST
Last Updated 5 ಜೂನ್ 2020, 9:50 IST
ಪ್ರಿಯಾಮಣಿ
ಪ್ರಿಯಾಮಣಿ   

ನಟ ಪ್ರಕಾಶ್‌ ರೈ ನಿರ್ದೇಶನದ ‘ಇದೊಳ್ಳೆ ರಾಮಾಯಣ’ ಚಿತ್ರ ತೆರೆಕಂಡಿದ್ದು 2016ರಲ್ಲಿ. ಇದು ತೆಲುಗಿನಲ್ಲೂ ‘ಮನ ಒರಿ ರಾಮಾಯಣಂ’ ಹೆಸರಿನಲ್ಲಿ ಬಿಡುಗಡೆಗೊಂಡಿತು. ಇದರಲ್ಲಿ ಪ್ರಿಯಾಮಣಿ ನಾಯಕಿಯಾಗಿ ನಟಿಸಿದ್ದರು. ಇದಾದ ಬಳಿಕ ಆಕೆ ಟಾಲಿವುಡ್‌ನ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ನಾಲ್ಕು ವರ್ಷದ ಬಳಿಕ ‘ನಾರಪ್ಪ’ ಮತ್ತು ‘ವಿರಾಟ ಪರ್ವಂ’ ಚಿತ್ರದ ಮೂಲಕ ಮತ್ತೆ ಅವರು ಟಾಲಿವುಡ್‌ ಅಂಗಳ ಪ್ರವೇಶಿಸಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ ಅವರದ್ದು ವಿಭಿನ್ನ ಪಾತ್ರ. ಆಕೆಯ ಜನ್ಮದಿನದ ಅಂಗವಾಗಿ ಈ ಸಿನಿಮಾ ನಿರ್ಮಾಣ ಸಂಸ್ಥೆಗಳು ಪ್ರಿಯಾಮಣಿಯ ಫಸ್ಟ್‌ಲುಕ್‌ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿವೆ.

ವೆಂಕಟೇಶ್‌ ದಗ್ಗುಬಾಟಿ ನಾಯಕರಾಗಿರುವ ‘ನಾರಪ್ಪ’ ತಮಿಳಿನ ‘ಅಸುರನ್‌’ ಚಿತ್ರದ ತೆಲುಗು ರಿಮೇಕ್. ಶ್ರೀಕಾಂತ್‌ ಅಡ್ಡಲ ನಿರ್ದೇಶನದ ಇದರಲ್ಲಿ ಪ್ರಿಯಾಮಣಿ ಅವರದು ನಾರಪ್ಪನ ಪತ್ನಿ ಸುಂದರಮ್ಮಳ ಪಾತ್ರ. ಥೇಟ್‌ ಗ್ರಾಮೀಣ ಮಹಿಳೆಯಾಗಿ ಕೆಂಪು ಸೀರೆಯುಟ್ಟು ಎತ್ತಿನಗಾಡಿಯ ಮೇಲೆ ಕುಳಿತಿರುವ ಆಕೆಯ ಫಸ್ಟ್‌ಲುಕ್‌ ಗಮನ ಸೆಳೆಯುತ್ತದೆ. ಇದಕ್ಕೆ ಡಿ. ಸುರೇಶ್‌ಬಾಬು ಮತ್ತು ಕಲೈಪುಲಿ ಎಸ್‌. ಥನು ಬಂಡವಾಳ ಹೂಡಿದ್ದಾರೆ.

ತಮಿಳಿನಲ್ಲಿ ಧನುಷ್‌ ನಿರ್ವಹಿಸಿದ್ದ ಪಾತ್ರದಲ್ಲಿ ವೆಂಕಟೇಶ್‌ ಕಾಣಿಸಿಕೊಂಡಿದ್ದಾರೆ. ಶ್ಯಾಮ್‌ ಕೆ. ನಾಯ್ಡು ಅವರ ಛಾಯಾಗ್ರಹಣವಿದೆ. ಮಣಿ ಅವರ ಸಂಗೀತ ನಿರ್ದೇಶನವಿದೆ. ಈಗಾಗಲೇ, ವೆಂಕಟೇಶ್‌ ಅವರ ಫಸ್ಟ್‌ಲುಕ್‌ ಕೂಡ ಬಿಡುಗಡೆಯಾಗಿದೆ.

ADVERTISEMENT

ವೆಟ್ರಿಮಾರನ್‌ ನಿರ್ದೇಶಿಸಿದ್ದ ‘ಅಸುರನ್‌’, ‘ವೆಕ್ಕೈ’ ಎಂಬ ಕಾದಂಬರಿ ಆಧಾರಿತ ಚಿತ್ರ. ಎಂಬತ್ತರ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಜಾತಿ ತಾರತಮ್ಯ ಮತ್ತು ರಾಜಕಾರಣವನ್ನು ಪ್ರಧಾನವಾಗಿಟ್ಟುಕೊಂಡು ಇದರ ಕಥೆ ಹೆಣೆಯಲಾಗಿದೆ. ಇದರಲ್ಲಿ ಧನುಷ್‌ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 37 ವರ್ಷದ ಅವರು 60ರ ಪ್ರಾಯದ ವ್ಯಕ್ತಿಯ ಪಾತ್ರಕ್ಕೆಜೀವ ತುಂಬಿದ್ದರು. ಗಲ್ಲಾಪೆಟ್ಟಿಗೆಯಲ್ಲೂ ಇದು ಭರ್ಜರಿ ಯಶಸ್ಸು ಕಂಡಿತ್ತು.

ಅಂದಹಾಗೆ ಕನ್ನಡದಲ್ಲಿಯೂ ಈ ಸಿನಿಮಾ ರಿಮೇಕ್‌ ಆಗುತ್ತಿದ್ದು, ನಟ ಶಿವರಾಜ್‌ಕುಮಾರ್‌ ಇದರಲ್ಲಿ ನಾಯಕ ನಟನಾಗಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ವೆಟ್ರಿಮಾರನ್‌ ಅವರೇ ಇದಕ್ಕೆ ಬಂಡವಾಳ ಹೂಡಲಿದ್ದಾರಂತೆ. ಈಗಾಗಲೇ, ಇಬ್ಬರ ನಡುವೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ಕೊರೊನಾ ಭೀತಿ ಕಾಣಿಸಿಕೊಳ್ಳದಿದ್ದರೆ ಈ ವೇಳೆಗೆ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿತ್ತು.

ನಕ್ಸಲ್‌ ಅವತಾರ

ವೇಣು ಉದುಗುಲ ಆ್ಯಕ್ಷನ್‌ ಕಟ್‌ ಹೇಳಿರುವ ‘ವಿರಾಟ ಪರ್ವಂ’ ಸಿನಿಮಾದಲ್ಲಿ ಪ್ರಿಯಾಮಣಿ ನಕ್ಸಲ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಕ್‌ಡೌನ್‌ ಪರಿಣಾಮ ಆಕೆಯ ಪಾತ್ರದ ಶೂಟಿಂಗ್‌ ಪೂರ್ಣಗೊಂಡಿಲ್ಲ. ಹಾಗಾಗಿ, ಮರು ಚಿತ್ರೀಕರಣಕ್ಕೆ ಚಿತ್ರತಂಡ ನಿರ್ಧರಿಸಿದೆಯಂತೆ. ಈ ಚಿತ್ರದ ಪೋಸ್ಟರ್‌ ಕೂಡ ಬಿಡುಗಡೆಗೊಂಡಿದ್ದು, ಬೆನ್ನಹಿಂದೆ ಬಂದೂಕು ಸಿಕ್ಕಿಸಿಕೊಂಡು ನಕ್ಸಲ್‌ ಸಮವಸ್ತ್ರದಲ್ಲಿ ಮುಗುಳ್ನಗುತ್ತಿರುವ ಪ್ರಿಯಾಮಣಿ ಅವರ ಪೋಸ್ಟರ್‌ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.