ADVERTISEMENT

ಸೈನೈಡ್ ಸಿನಿಮಾದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಪ್ರಿಯಾಮಣಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 6:34 IST
Last Updated 5 ಅಕ್ಟೋಬರ್ 2020, 6:34 IST
ಪ್ರಿಯಾಮಣಿ
ಪ್ರಿಯಾಮಣಿ   

ಬಹುಭಾಷಾ ನಟಿ ಪ್ರಿಯಾಮಣಿ ‘ಸೈನೈಡ್’‌ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಈ ಹಿಂದೆ ತಿಳಿಸಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ರಾಜೇಶ್‌ ಟಚ್‌ರಿವರ್‌ ಈ ಸಿನಿಮಾಗೆ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ಸಿನಿಮಾವು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಲಿದೆ. ಪ್ರಿಯಾಮಣಿ ಮೂರು ಭಾಷೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾದಲ್ಲಿ ಪ್ರಿಯಾ ಸರಣಿ ಕೊಲೆಗಾರನ ಪ್ರಕರಣವನ್ನು ಭೇದಿಸುವ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷದ ‘ನನ್ನ ಪ್ರಕಾರ’ ಸಿನಿಮಾದ ಬಳಿಕ ಪ್ರಿಯಾಮಣಿ ಕನ್ನಡದಲ್ಲಿ ನಟಿಸಿರಲಿಲ್ಲ. ಈಗ ಸೈನೈಡ್ ಮೂಲಕ ಮತ್ತೆ ಚಂದನವನಕ್ಕೆ ಮರಳಿದ್ದಾರೆ. ಇದು ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವಾಗಿದೆ.

1991ರಲ್ಲಿ ನಡೆದ ರಾಜೀವ್‌ ಗಾಂಧಿ ಹತ್ಯೆ ಆಧರಿಸಿದ ‘ಸೈನೈಡ್’ ಸಿನಿಮಾ 2006ರಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಸೈನೈಡ್‌ ಸಿನಿಮಾ ಸರಣಿ ಹಂತಕ ಮೋಹನ್ ಕುಮಾರ್ ಕತೆ ಆಧಾರಿತವಾಗಿದೆ. 20 ಮಂದಿ ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆಯೊಂದಿಗೆ ಸೈನೈಡ್ ನೀಡಿ ಕೊಲೆ ಮಾಡಿದ್ದ ಮೋಹನ್ ಕುಮಾರ್ ಸೈನೈಡ್ ಮೋಹನ್ ಎಂದೇ ಕುಖ್ಯಾತಿ ಪಡೆದಿದ್ದಾನೆ. 2009ರಲ್ಲಿ ಬಂಧಿಸಲ್ಪಟ್ಟ ಮೋಹನ್‌ ಕುಮಾರ್ 32 ಮಂದಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಕುಮಾರ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ನೀಡಿಲ್ಲ.

ADVERTISEMENT

ಈ ಸಿನಿಮಾದ ಹಿಂದಿ ಆವೃತ್ತಿಯಲ್ಲಿ ಪ್ರಿಯಾ ಪಾತ್ರದಲ್ಲಿ ಯಶ್‌ಪಾಲ್‌ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಶೂಟಿಂಗ್‌ ಜನವರಿ 2021ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.