ADVERTISEMENT

‘ರಾಜು’ ಪೋಸ್ಟರ್‌ ಹಂಚಿಕೊಂಡ ಅಪ್ಪು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 19:30 IST
Last Updated 12 ಅಕ್ಟೋಬರ್ 2020, 19:30 IST
ಪುನೀತ್ ರಾಜ್‌ಕುಮಾರ್‌ 
ಪುನೀತ್ ರಾಜ್‌ಕುಮಾರ್‌    
""

ನಟ ಪುನೀತ್‌ ರಾಜ್‌ಕುಮಾರ್‌ ತಮ್ಮ ಹೊಸ ಯೋಜನೆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಖುಷಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

‘ಮೈ ನೇಮ್‌ ಈಸ್‌ ರಾಜು’ ಹೆಸರಿನ ಕಿರುಚಿತ್ರವೊಂದು ಶೀಘ್ರ ಬರಲಿದೆ ಎಂದಿದ್ದಾರೆ. ಪತ್ರಗಳ ಹಿಂದಿನ ಕಥನ (ಎ ಸ್ಟೋರಿ ಬಿಹೈಂಡ್‌ ದಿ ಲೆಟರ್ಸ್‌) ಈ ಚಿತ್ರದ ಟ್ಯಾಗ್‌ಲೈನ್‌. ಸ್ಕ್ರೀನ್‌ಶಾಟ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ ಪಿಆರ್‌ಕೆ ಆಡಿಯೋ ಸಂಸ್ಥೆ ಈ ಕಿರುಚಿತ್ರ ನಿರ್ಮಿಸುತ್ತಿದೆ. ಸುಮಂತ್‌ ಆಚಾರ್ಯ ಈ ಚಿತ್ರದ ಕಥೆ ಬರೆದು ನಿರ್ದೇಶಿಸಿದ್ದಾರೆ. ಸುನಿಲ್‌ ರಾವ್‌ ಈ ಕಥೆಯನ್ನು ನಿರೂಪಿಸಿದ್ದಾರೆ. ಒಂದಿಷ್ಟು ದಾಖಲೆ, ಕಾಗದ ಪತ್ರಗಳ ರಾಶಿ ನಡುವೆ ‘ರಾಜು’ ಶೀರ್ಷಿಕೆ ಎದ್ದು ಕಾಣುವುದು ಕಥೆ ಏನಿರಬಹುದು ಎಂಬ ಕುತೂಹಲ ಸಹಜವಾಗಿ ಹುಟ್ಟಿಸುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ಪೋಸ್ಟರ್‌ ಹಂಚಿಕೊಂಡ 18 ಗಂಟೆಗಳಲ್ಲಿ 42,838 ಜನ ಅಭಿಮಾನಿಗಳು ಅದನ್ನು ಇಷ್ಟಪಟ್ಟಿದ್ದಾರೆ.

ADVERTISEMENT

ಪುನೀತ್‌ ಅವರು ಪ್ರವೀಣ್‌ ತೇಜ್‌ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಪುನೀತ್‌ ಅವರು ‘ಯುವರತ್ನ’ ಮತ್ತು ‘ಜೇಮ್ಸ್‌’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

‘ಯುವರತ್ನ’ ಚಿತ್ರದ ಪರಿಚಯಾತ್ಮಕ ಹಾಡಿನ ಶೂಟಿಂಗ್‌ ಇತ್ತೀಚೆಗೆ ನಡೆದಿದೆ. ಅದರಲ್ಲಿ ಪುನೀತ್‌ ಅವರು ಕಾವ್ಯಾ ಶೆಟ್ಟಿ ಅವರೊಂದಿಗೆ ಚಿತ್ರೀಕರಣದಲ್ಲಿ ತೊಡಗಿದ್ದರು. ಶೂಟಿಂಗ್‌ನ ಕೆಲವು ದೃಶ್ಯಗಳ ಚಿತ್ರಗಳನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಪುನೀತ್‌ ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ಕಾತರತೆ ಹೆಚ್ಚಿಸಿದೆ. ಕೆಲವು ವರ್ಷಗಳ ನಂತರ ಪುನೀತ್‌ ಅವರು ಮತ್ತೊಮ್ಮೆ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಜೇಮ್ಸ್‌’ ಚಿತ್ರದಲ್ಲಿ ಪುನೀತ್‌ ಅವರದ್ದು ಪೂರ್ಣ ಪ್ರಮಾಣದ ಆ್ಯಕ್ಷನ್‌ ಪಾತ್ರ. ಎರಡೂ ಚಿತ್ರಗಳ ಶೂಟಿಂಗ್‌ ಪ್ರಗತಿಯಲ್ಲಿದೆ. ಲಾಕ್‌ಡೌನ್‌ ಕಾರಣಕ್ಕೆ ಕೆಲಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಅಕ್ಟೋಬರ್‌ ಮೊದಲ ವಾರದಿಂದಲೇ ‘ಜೇಮ್ಸ್‌’ನ ಚಿತ್ರೀಕರಣ ಪುನರಾರಂಭವಾಗಿದೆ. ಚಿತ್ರದ ಫಸ್ಟ್‌ ಲುಕ್‌ ಕೂಡಾ ಈಗಾಗಲೇ ಬಿಡುಗಡೆ ಆಗಿದ್ದು ಪುನೀತ್‌ ಅಭಿಮಾನಿಗಳ ಮನಗೆದ್ದಿದೆ. ಇದರಲ್ಲಿ ಸ್ವಲ್ಪ ಹೊಸ ಮಾದರಿಯಲ್ಲಿ ರೂಪಿಸಲಾದ ಕಾರಿನ ಜತೆ ಪುನೀತ್‌ ಕಾಣಿಸಿಕೊಂಡಿದ್ದಾರೆ. ಪುನೀತ್‌ ಅವರಷ್ಟೇ ಈ ಕಾರು ಕೂಡಾ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.