ADVERTISEMENT

ಎಲ್ಲರ ಪ್ರೀತಿ ದೋಚಲೆಂದೇ ಹುಟ್ಟಿದ ಮಗು ಈ ಅ‌ಪ್ಪು!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 19:30 IST
Last Updated 6 ನವೆಂಬರ್ 2021, 19:30 IST
ಪುನೀತ್‌ ರಾಜ್‌ಕುಮಾರ್‌ ಬಾಲ್ಯದ ಚಿತ್ರ
ಪುನೀತ್‌ ರಾಜ್‌ಕುಮಾರ್‌ ಬಾಲ್ಯದ ಚಿತ್ರ   

ಅದು 1975. ರಾಜ್‌ಕುಮಾರ್ ಅವರ ಜೊತೆಗೆ ನಾನು ನಟಿಸಿದ ಮೊದಲ ಸಿನಿಮಾ ‘ಪ್ರೇಮದ ಕಾಣಿಕೆ’ಯ ಶೂಟಿಂಗ್ ಶಿಮ್ಲಾದಲ್ಲಿ ನಡೆದಿತ್ತು. ನಾವು ಇಲ್ಲಿಂದ ಹೋಗುವಾಗಲೇ ಪಾರ್ವತಮ್ಮ ಅವರು ತುಂಬು ಗರ್ಭಿಣಿ. ಶಿಮ್ಲಾದಿಂದ ಪ್ರತಿದಿನ ಟ್ರಂಕ್‌ ಕಾಲ್ ಮಾಡಿ ರಾಜ್‌ಕುಮಾರ್ ಅವರು ಪಾರ್ವತಮ್ಮನವರ ಆರೋಗ್ಯ ವಿಚಾರಿಸುತ್ತಿದ್ದರು. ನಮ್ಮ ಶೂಟಿಂಗ್ ಮುಗಿಯುವ ಹೊತ್ತಿಗೆ (ಆಗ ರಾಜ್‌ಕುಮಾರ್‌ ಅವರ ಮಯೂರ ಚಿತ್ರದ ಚಿತ್ರೀಕರಣವೂ ಶುರುವಾಗಿತ್ತು) ಪಾರ್ವತಮ್ಮನವರಿಗೆ ಹೆರಿಗೆಯಾದ ಮತ್ತು ತಾಯಿ–ಮಗು ಆರೋಗ್ಯವಾಗಿರುವ ಸುದ್ದಿ ಚೆನ್ನೈನಿಂದ (ಆಗ ಮದ್ರಾಸ್‌) ಬಂತು. ನಮ್ಮ ತಂಡ ಮರುದಿನ ಶೂಟಿಂಗ್ ಪ್ಯಾಕಪ್ ಮಾಡಿ ಬಂದು ನೇರವಾಗಿ ಹೋದದ್ದೇ ಆಸ್ಪತ್ರೆಗೆ. ಎಲ್ಲರಿಗೂ ಅಮ್ಮ ಮಗುವನ್ನು ನೋಡುವ ಆಸೆ. ಮುದ್ದಾದ ಆರೋಗ್ಯಪೂರ್ಣ ಗಂಡು ಮಗು. ಹಾಗೆ ನಾನು ಅಪ್ಪುವನ್ನು ಮೊದಲು ನೋಡಿದ್ದು ಆಸ್ಪತ್ರೆಯಲ್ಲಿ.

‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ರಾಜ್‌ಕುಮಾರ್ ಅವರ ಪುತ್ರಿ ಪೂರ್ಣಿಮಾ ನನ್ನ ಮಗಳ ಪಾತ್ರ ಮಾಡಿದ್ದಳು. ಆಗ ಪೂರ್ಣಿಮಾಗೆ ಏಳೆಂಟು ವರ್ಷ ಆಗಿರಬೇಕು. ಆ ಸಿನಿಮಾದಲ್ಲಿ ಇಬ್ಬರು ಪುಟ್ಟ ಮಕ್ಕಳ ನಟನೆ ಇತ್ತು. ಹಾಡಿನ ದೃಶ್ಯದಲ್ಲಿ ಟ್ರಾಲಿನಲ್ಲಿ ಮಗು ಇತ್ತಲ್ಲ, ನಾವು ಎತ್ತಿಕೊಂಡು ಹಾಡೋದು- ಅದು ಅಪ್ಪು. ಅದಕ್ಕಿನ್ನೂ ಆರೇಳು ತಿಂಗಳಾಗಿರಬೇಕು. ಇನ್ನೊಂದು ಸ್ಕರ್ಟ್ ಹಾಕಿ ನಮ್ಮ ಜೊತೆಗೆ ನಡೆಯುವ ಮಗು ಇದೆಯಲ್ಲ- ಅದು ರಾಜೇಶ್ವರಿ, ರಾಜ್‌ಕುಮಾರ್ ಅವರ ತಂಗಿ ಮಗಳು. ನನ್ನದು ಅದು ರಾಜ್‌ಕುಮಾರ್ ಜೊತೆಗೆ ಮೊದಲ ಸಿನಿಮಾ, ಅಪ್ಪುವಿನದ್ದೂ ಮೊದಲ ಸಿನಿಮಾ!

‘ಬೆಟ್ಟದ ಹೂವು’ ಚಿತ್ರಕ್ಕೆ ಅವನು ಶೂಟಿಂಗ್‌ಗೆ ಹೋಗಿ ಬಂದಾಗ ಅವನ ಸಹಜ ಅಭಿನಯದ ಬಗ್ಗೆ ಅಶ್ವತ್ಥ್‌, ಸಂಪತ್ ಅವರಂತಹ ಹಿರಿಯರೂ ಮಾತನಾಡುತ್ತಿದ್ದರು. ಸಂಪತ್ ಅವರಿಗಂತೂ ಆ ಕುಟುಂಬದ ಜೊತೆಗೆ ತುಂಬ ಪ್ರೀತಿ. ಅವರನ್ನು ರಾಜ್‌ಕುಮಾರ್ ಅಪ್ಪಾಜಿ ಅಂತಲೇ ಕರೆಯುತ್ತಿದ್ದರು. ಅಪ್ಪು ಶೂಟಿಂಗ್ ತಂಡದ ಜೊತೆಗೇ ಬೆಳೆದವನು. ಹೊನ್ನವಳ್ಳಿ ಕೃಷ್ಣ, ನಿರ್ದೇಶಕ ರಾಜ್‌ಶೇಖರ್, ಭಟ್ಟಿ ಮಹಾದೇವಪ್ಪ, ಶನಿ ಮಹಾದೇವಪ್ಪ... ಅಲ್ಲಿ ಇದ್ದ ತಂಡದ ಎಲ್ಲರೂ ಅವನನ್ನು ಹೆಗಲ ಮೇಲೆ ಕೂಸುಮರಿ ಮಾಡಿ ಬೆಳೆಸಿದವರು.

ADVERTISEMENT

1978ರವರೆಗೂ ನಾನು ರಾಜ್‌ಕುಮಾರ್ ಅವರ ಜೊತೆಗೆ ಉದ್ದಕ್ಕೂ ಪಾತ್ರ ಮಾಡಿದೆ. ನಾವೂ ಹೈಲ್ಯಾಂಡ್ಸ್ ಹೋಟೆಲ್‌ನಲ್ಲೇ ವಾಸವಿದ್ದೆವು. ಪದೇ ಪದೇ ಚಿಕ್ಕಮಗಳೂರಿಗೆ ಹೋಗಲು ಆಗುತ್ತಿರಲಿಲ್ಲ. ಆಗೆಲ್ಲ ಇಡೀ ಯೂನಿಟ್‌ನವರನ್ನು ಕೆಂಪೇಗೌಡ ಥಿಯೇಟರಿಗೆ ರಾಜ್‌ಕುಮಾರ್ ಅವರ ಹಳೆಯ ಸಿನಿಮಾಗಳನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದರು. ಪಾರ್ವತಮ್ಮನವರು ಯಾವುದಾದರೂ ಸಿನಿಮಾ ನೋಡಿಲ್ಲ ಎಂದರೆ ಅವರೂ ಥಿಯೇಟರಿಗೆ ಬರೋರು. ಅಪ್ಪುವನ್ನು ಎತ್ತಿಕೊಂಡು ಬಂದು ತೊಡೆಯಲ್ಲಿ ಮಲಗಿಸಿಕೊಂಡು ಸಿನಿಮಾ ನೋಡೋರು. ಒಮ್ಮೊಮ್ಮೆ ಅಪ್ಪುವನ್ನು ನಾವು ಯಾರಾದರೂ ಎತ್ಕೊಳ್ತಿದ್ದೆವು. ಅಪ್ಪೂನೂ ಸಿನಿಮಾ ನೋಡ್ತಿದ್ದ. ಹೀಗೆ ಬೆಳೆದ ಮಗು ಅದು. ಅವನು ಜೀವನದಲ್ಲಿ ಸಿನಿಮಾ ಬಿಟ್ಟು ಬೇರೆ ಏನನ್ನಾದರೂ ಯೋಚಿಸಲು ಸಾಧ್ಯವಿತ್ತೇ?

ಪೂರ್ಣಿಮಾ ಹುಟ್ಟಿದ ಬಹಳ ವರ್ಷಗಳ ನಂತರ ಅಪ್ಪು ಹುಟ್ಟಿದ್ದು. ಅವಳ ಮೇಲೆ ನಮಗೆಲ್ಲರಿಗೂ ಪ್ರೀತಿ. ಅದರ ನೂರರಷ್ಟು ಪ್ರೀತಿ ಅಪ್ಪುವಿಗೆ ಸಿಕ್ಕಿತ್ತು. ಪ್ರೀತಿ ಅಂದ್ರೆ ರಾಜ್‌ಕುಮಾರ್ ಅವರ ಮಕ್ಕಳು ಎಂಬ ಪ್ರೀತಿಯಲ್ಲ. ಆ ಮನೆಯ ವಾತಾವರಣವೇ ಬೇರೆ. ಆ ಮನೆಗೆ ಎಲ್ಲರೂ ತನ್ನವರೇ. ಕೋಡಂಬಾಕ್ಕಂನಲ್ಲಿ ಇದ್ದ ರಾಜ್‌ಕುಮಾರ್ ಅವರ ಮನೆಯಲ್ಲಿ ಸುಮಾರು 50-60 ಜನ ಇದ್ದರು. ಎಲ್ಲರೂ ಕುಟುಂಬದ ಸದಸ್ಯರೇ, ಜೊತೆಗೆ ಬಳಗವೂ ಇತ್ತು. ಯಾರನ್ನೂ ಆ ಕುಟುಂಬ ಬೇರೆಯವರಾಗಿ ನೋಡಲಿಲ್ಲ.

ಎಲ್ಲರಿಗೂ ಪ್ರೀತಿ ಹಂಚಲೆಂದೇ ಹುಟ್ಟಿದವನಂತೆ ಅಪ್ಪು ಇದ್ದ. ನಾನು ಯಾವತ್ತೂ ಪುನೀತ್ ಅಂತ ಅವನನ್ನು ಕರೆದೇ ಇಲ್ಲ. ಅವನು ಯಾವತ್ತೂ ಅಪ್ಪುವೇ. ನನ್ನ ಪುಣ್ಯದಿಂದಾಗಿ ರಾಜ್‌ಕುಮಾರ್ ಅವರ ಜೊತೆಗೆ ನಟಿಸಲು ಅವಕಾಶ ಸಿಕ್ಕಿತು. ಶೂಟಿಂಗ್ ಸಮಯದಲ್ಲಿ ರಾಜ್‌ಕುಮಾರ್ ಅವರ ದಿನಚರಿ ಎಲ್ಲರಿಗೂ ಗೊತ್ತಿರುವಂಥದ್ದೇ. ಅವರು ಬೆಳಿಗ್ಗೆ ನಾಲ್ಕು ಗಂಟೆಗೆ ಏಳುತ್ತಿದ್ದರು. ಯೋಗಾಸನ ಮಾಡುತ್ತಿದ್ದರು. ಕೆಲವು ಸಲ ರಾಜ್‌ಕುಮಾರ್ ಅವರು ಸ್ವಲ್ಪ ಬೇಗ ಮಲಗುತ್ತಿದ್ದರು. ಆಗ ಮಗು ಅತ್ತರೆ ಅವರ ನಿದ್ರೆಗೆ ತೊಂದರೆ ಆದೀತೆಂದು ಪಾರ್ವತಮ್ಮ ಅಪ್ಪುವನ್ನು ಎತ್ತಿಕೊಂಡು ನಮ್ಮ ರೂಮಿಗೆ ಬರುತ್ತಿದ್ದರು. ಅವನಿಗೆ ಹಾಲು ಕುಡಿಸಿ ನನ್ನ ಪಕ್ಕನೇ ಮಲಗಿಸುತ್ತಿದ್ದರು. ನಾನು ಅವನಿಗೆ ತಟ್ಟಿ ಮಲಗಿಸುತ್ತಿದ್ದೆ. ನಾನು ಅವನಿಗೆ ಊಟ ಮಾಡಿಸಿದ್ದೀನಿ. ಎಷ್ಟೋ ಸಲ ಅವನ ಕಕ್ಕಾನೂ ತೊಳೆದಿದ್ದೀನಿ, ಅವನಿಗೆ ಸ್ನಾನಾನೂ ಮಾಡಿಸಿದ್ದೀನಿ.

ಅವನು ಬೆಳೆದು ದೊಡ್ಡವನಾದ ಬಳಿಕವೂ ನಾನು ಅವನಿಗೆ ಹೇಳಿದ್ದುಂಟು -ಲೋ ಅಪ್ಪೂ... ನಿನ್ನ ಕಕ್ಕ ತೊಳೆದಿದ್ದೀನಲ್ಲೋ... ಸ್ನಾನ ಮಾಡಿಸಿದ್ದೀನಲ್ಲೋ- ಅಂತ. ಅವನು ಬಂದು ತಬ್ಕೊಂಡು, ‘ಆಂಟೀ... ಆಂಟೀ...’ ಅಂತ ನಾಚಿಕೆಯಿಂದ ಹೇಳುತ್ತಿದ್ದ. ಆ ಮಗುವಿನ ಮುಖವೇ ನನಗೆ ಈಗಲೂ ನೆನಪಿಗೆ ಬರುವುದು. ಮೊನ್ನೆ ಅವನ ಮುಖ ನೋಡಿದಾಗ ಬಹಳ ದುಃಖವಾಯಿತು. ಎಷ್ಟೊಂದು ಜೀವಗಳು ಇವತ್ತು ಅಪ್ಪುವಿಗಾಗಿ ಮರುಗುತ್ತಿವೆ. ಇಷ್ಟೊಂದು ಅಗಾಧ ಪ್ರೀತಿಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತ ಹೇಗೆ ಸಂಪಾದಿಸಿದ ಎಂದು ಆಶ್ಚರ್ಯವಾಗುತ್ತಿದೆ. ಆತ ನಿರ್ಗಮಿಸಿದ ಬಳಿಕ ಯಾರಿಗೆಲ್ಲ ಎಷ್ಟು ಪ್ರೀತಿ ಹಂಚಿದ್ದ, ಎಷ್ಟೊಂದು ಜನರಿಗೆ ಹೇಗೆಲ್ಲ ಸಹಾಯ ಮಾಡಿದ್ದ ಎನ್ನುವುದು ಗೊತ್ತಾಗುತ್ತಿದೆ. ಮನುಷ್ಯನೊಬ್ಬನ ನಿಜವಾದ ಸಾಧನೆ ಅವನ ಸಾವಿನಲ್ಲಿ ಗೊತ್ತಾಗುತ್ತದೆ ಅಂತಾರೆ. ಅದು ನಿಜ. ನಮಗೆಲ್ಲ ವಯಸ್ಸಾಗ್ತಿದೆ. ನಮ್ಮನ್ನು ಕೊನೆಯದಾಗಿ ನೋಡಲು ಬರಬೇಕಿದ್ದ ಮಕ್ಕಳು ನಮಗಿಂತ ಮುಂಚೆ ಹೋಗ್ಬಿಡ್ತಿದ್ದಾರಲ್ಲ... ನಿಜಕ್ಕೂ ಸಂಕಟವಾಗುತ್ತಿದೆ.

ಹೈಲ್ಯಾಂಡ್ ಹೋಟೆಲ್‌ನಲ್ಲಿ ಇದ್ದಾಗ ಅವನಿಗೆ ಟ್ಯೂಷನ್ ಕೊಡಲು ಮೇಷ್ಟ್ರು ಬರೋರು. ಅಮ್ಮಂಗೆ ಮತ್ತು ರಾಜ್‌ಕುಮಾರ್ ಅವರಿಗೆ ಒಂದು ಚಿಂತೆ ಇತ್ತು. ಅವನಿಗೆ ರೆಗ್ಯುಲರ್ ಸ್ಕೂಲ್‌ಗೆ ಕಳಿಸಲು ಆಗಲಿಲ್ಲ ಅಂತ. ಆದರೆ ಆ ಹುಡುಗನನ್ನು ನೋಡಿ- ಯಾರಾದರೂ ಅವನು ಸ್ಕೂಲ್‌ಗೆ ಹೋಗಿಲ್ಲ ಎನ್ನಲು ಸಾಧ್ಯವಿತ್ತೇ? ಯಾವ ಯೂನಿವರ್ಸಿಟಿಯಲ್ಲಿ ಕಲಿತವರೂ ಅವನಷ್ಟು ಚೆನ್ನಾಗಿ ಮಾತನಾಡುತ್ತಿರಲಿಲ್ಲ. ಎಷ್ಟೊಂದು ವಿಷಯಜ್ಞಾನ ಇತ್ತು. ವಿಶ್ವ ಸಿನಿಮಾದ ಬಗ್ಗೆ, ಫ್ಯಾಷನ್ ಬಗ್ಗೆ, ಎಕಾನಮಿ ಬಗ್ಗೆ, ಟೆಕ್ನಾಲಜಿ ಬಗ್ಗೆ ಅಪಾರಜ್ಞಾನ ಅವನಲ್ಲಿತ್ತು.

ರಾಜ್‌ಕುಮಾರ್‌ ಅವರ ಮನೇಲಿ ಹೆಚ್ಚು ಚರ್ಚೆ ಆಗುತ್ತಿದ್ದುದೇ ಸಿನಿಮಾದ ಬಗ್ಗೆ. ಹೊಸ ಹೊಸ ಲೆನ್ಸುಗಳನ್ನು ತರಿಸೋರು. ಅಮ್ಮ ಹೇಳ್ತಿದ್ರು - ಇವ್ನು ಬಂದ್ನಪ್ಪಾ... ಆ ಲೆನ್ಸ್ ತರಿಸು, ಈ ಲೆನ್ಸ್ ತರಿಸು ಅಂತ ದುಂಬಾಲು ಬೀಳ್ತಾನೆ– ಅಂತ. ತಾಯಿ ಗಲ್ಲ ಸವರಿ, ‘ಅಮ್ಮಾ ಇದು ನೋಡು, ಇದನ್ನು ನಾವು ತರಿಸ್ಬೇಕು’ ಅಂತ ಹೇಳ್ತಿದ್ದ. ಅವರದ್ದೇ ಯೂನಿಟ್ ಇತ್ತಲ್ಲಾ? ಬರೀ ಸಿನಿಮಾದ ಮಾತು. ಕಂಡವರ ಬಗ್ಗೆ ಮಾತಾಡಿದ್ದು ಆ ಕುಟುಂಬದಲ್ಲಿ ನಾನು ನೋಡಿಯೇ ಇಲ್ಲ. ಅಪ್ಪೂಗೆ ಅಪ್ಪ-ಅಮ್ಮನಿಂದ ಬಳುವಳಿಯಾಗಿ ಬಂದ ಗುಣವದು.

ಅಪ್ಪು ಇಷ್ಟೊಂದು ಎತ್ತರಕ್ಕೆ ಬೆಳೆದು, ತಾನು ದುಡಿದದ್ದನ್ನು ಇನ್ನೊಂದು ಕೈಗೆ ಗೊತ್ತಾಗದಂತೆ ಬಡವರಿಗಾಗಿ, ನಿರ್ಗತಿಕರಿಗಾಗಿ ಖರ್ಚು ಮಾಡಿದ್ದು ಎಂತಹ ಆದರ್ಶದ ಗುಣ. ಎಷ್ಟೊಂದು ಮಕ್ಕಳ ವಿದ್ಯಾಭ್ಯಾಸಕ್ಕೆ ಅವನು ಸದ್ದಿಲ್ಲದೆ ನೆರವು ನೀಡಿದ್ದ! ನಮ್ಮ ಮೈಸೂರಿನ ಅಬಲೆಯರ ಆಶ್ರಯತಾಣ ಶಕ್ತಿಧಾಮಕ್ಕೆ ತೊಂದರೆ ಬಂದಾಗಲೂ ಅವನು ನೆರವಾಗಿದ್ದ. ಶಕ್ತಿಧಾಮವನ್ನು ಕಟ್ಟಿದ್ದು ರಾಜ್‌ಕುಮಾರ್. ಬೆಳೆಸಿದ್ದು ಪಾರ್ವತಮ್ಮ. ಇವತ್ತು ಬೆಳೆಸಿಕೊಂಡು ಹೋಗುತ್ತಿರುವವರು ಗೀತಾ ಶಿವರಾಜ್‌ಕುಮಾರ್. ಹಣದ ಅವಶ್ಯಕತೆ ಇದೆ, ಯಾವ ಸರ್ಕಾರವನ್ನೂ ಹೋಗಿ ಕೇಳಲು ಆಗುವುದಿಲ್ಲ ಎಂದಾಗ ಮೂವರೂ ಮಕ್ಕಳು ಪಿಲ್ಲರ್‌ಗಳಂತೆ ನಿಂತು ನೆರವಾದವರು. ಸಿನಿಮಾದ ಒಂದು ಕಾರ್ಯಕ್ರಮ ಮಾಡಿದಾಗ ಅದರ ಹಣ ನೇರವಾಗಿ ಶಕ್ತಿಧಾಮಕ್ಕೆ ಹೋಗುತ್ತಿತ್ತು. ಆ ಕುಟುಂಬ ನೀಡಿದ ನೆರವು ಎಷ್ಟು ಹೇಳಿದರೂ ಸಾಲದು. ಅದರಲ್ಲೂ ಅಪ್ಪುವಿನ ಪಾತ್ರ ಮಹತ್ವದ್ದು. ‘ಅಪ್ಪೂ... ಎಷ್ಟೊಂದು ದುಡ್ಡು ಕೊಟ್ಟಿದ್ದೀಯಾ!’ ಅಂದ್ರೆ ‘ಅಯ್ಯೋ ಆಂಟಿ... ನೀವು ಬೇರೆ...’ ಅಂತ ಕತ್ತು ಕೆಳಗೆ ಹಾಕಿ ಸಣ್ಣದಾಗಿ ನಗುತ್ತಿದ್ದ!

ನನಗೆ ಇವತ್ತು ಅನ್ನಿಸ್ತಿದೆ- ಈ ಹುಡುಗ ಇನ್ನೂ 20-30 ವರ್ಷ ಎಷ್ಟೊಂದು ಸಿನಿಮಾಗಳನ್ನು ಮಾಡಬೇಕಿತ್ತು, ಎಷ್ಟು ಲಕ್ಷಾಂತರ ಜನರಿಗೆ ನೆರವಾಗಬೇಕಿತ್ತು. ಸೂಪರ್ ಸ್ಟಾರ್ ಆಗಿದ್ದವನು ಅವನು. ಅವನ ಜೊತೆಗೆ ಎಷ್ಟೊಂದು ನಟ, ನಟಿಯರು, ನಿರ್ಮಾಪಕರು ಬೆಳೆಯುತ್ತಿದ್ದರು. ಎಷ್ಟೊಂದು ಕುಟುಂಬಗಳನ್ನು ಉಳಿಸುತ್ತಿದ್ದ. ನಮ್ಮ ಇಂಡಸ್ಟ್ರಿ ಎಷ್ಟೊಂದು ಎತ್ತರಕ್ಕೆ ಬೆಳೆಯುತ್ತಿತ್ತು! ಈಗ ಯೋಚನೆ ಮಾಡಿದಾಗ ನಮ್ಮ ಅಪ್ಪು ನಮ್ಮ ಕಣ್ಮುಂದೆನೇ ಇಲ್ಲ ಅನ್ನೋದು ಇದೆಯಲ್ಲ, ನನಗೆ ನಿಜಕ್ಕೂ ಕಷ್ಟ ಆಗ್ತಿದೆ. ಅವನ ಚೈತನ್ಯದ ಹಿಂದೆ ಪ್ರೇರಣೆಯಾಗಿ ಅಶ್ವಿನಿ ಇದ್ದಳು, ಪ್ರೀತಿಸಿ ಮದುವೆಯಾದವಳು. ಇಬ್ಬರು ಮಕ್ಕಳು. ಆ ಇಡೀ ಕುಟುಂಬ ಒಗ್ಗಟ್ಟಿನ ಕುಟುಂಬ, ಅಣ್ಣಂದಿರು, ಅಕ್ಕಂದಿರು ಎಲ್ಲರ ಪ್ರೀತಿಯ ದೊಡ್ಡ ಹೊರೆ ಆತನ ಮೇಲಿತ್ತು. ಬಹುಶಃ ನೂರು ವರ್ಷಕ್ಕೆ ಮಾಡೋದನ್ನು ಎಲ್ಲವನ್ನೂ ಮಾಡಿ ಬಿಟ್ಟು ಈಗ ನಿಶ್ಯಬ್ದವಾಗಿ ಮಲಗಿಬಿಟ್ಟ.

ನನಗೆ ಈಗಲೂ ನೆನಪಿದೆ. ಅಪ್ಪುವಿನ ‘ರಾಜ್’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಅಮ್ಮ ಫೋನ್ ಮಾಡಿದರು. ‘ಜಯಮಾಲಾ... ಅಣ್ಣಾವ್ರ ಜೊತೆ ನಟಿಸಿದ ಐದು ಜನ ಹೆಣ್ಣುಮಕ್ಕಳ ಹಾಡುಗಳನ್ನು ಈ ಚಿತ್ರದಲ್ಲಿ ರಿಶೂಟ್ ಮಾಡ್ತಿದೀವಿ ಕಣೇ, ಅಪ್ಪು ಜೊತೆಗೆ. ನೀನೂ ಅದರಲ್ಲಿ ಆ್ಯಕ್ಟ್ ಮಾಡಬೇಕು. ಒಬ್ಬೊಬ್ಬರದ್ದೂ ಒಂದೊಂದು ತುಣುಕು ಹಾಡು ಬರುತ್ತೆ, ನೀನೂ ಅದರಲ್ಲಿ ಇರಬೇಕು’ ಅಂತ. ನಾನು, ‘ಅಮ್ಮಾ... ನಾನಾ? ಇಷ್ಟು ದಪ್ಪ ಆಗಿದ್ದೀನಿ, ಈವಾಗ ನಾನು ಬೇಡಮ್ಮಾ...’ ಅಂದೆ. ಒಂದ್ನಿಮಿಷಕ್ಕೇ ಫೋನ್‌ನಲ್ಲಿ ಅಪ್ಪು! ‘ಆಂಟೀ... ನೀವು ಈವಾಗ ಹೇಗಿದ್ದೀರಾ ಅನ್ನೋದು ಪ್ರಶ್ನೆಯೇ ಅಲ್ಲ ಆಂಟೀ. ನೀವು ಈ ಪಿಕ್ಚರಲ್ಲಿ ಮಾಡ್ತೀರ ಅಂದ್ರೆ ಮಾಡ್ತೀರಾ... ಅಷ್ಟೆ. ಅಪ್ಪಾಜಿ ಹೆಸರು ಇರೋದದು. ಅಪ್ಪಾಜಿ ಜೊತೆಯಲ್ಲಿ ನೀವು ಮಾಡಿದ ಆ ಹಾಡು ಮತ್ತೆ ನೀವು ನನ್ಜೊತೆ ಮಾಡ್ತೀರಾ’ ಅಂದ.

ನನಗೆ ಎಷ್ಟು ಸಂತೋಷವಾಯಿತೆಂದರೆ ನಾನು ವಯಸ್ಸಾಗಿರೋದನ್ನು, ದಪ್ಪ ಇರೋದನ್ನೂ ಮರೆತುಬಿಟ್ಟೆ. ಬಹುಶಃ ಎರಡು ದಿನ ಶೂಟಿಂಗ್ ಮಾಡಿದೆವು. ಆ ಹುಡುಗನ ಜೊತೆ ಭಾರತಿ, ಜಯಂತಿ, ಜಯಪ್ರದಾ, ಊರ್ವಶಿ ಮತ್ತು ನಾನು ಹೆಜ್ಜೆ ಹಾಕಿದೆವು. ಎಷ್ಟು ಲವಲವಿಕೆಯ ಹುಡುಗ. ಜೊತೆಯಲ್ಲಿ ಕಾನ್ಫಿಡೆನ್ಸ್. ದೃಶ್ಯಗಳ ಬಗ್ಗೆ ಅವನದ್ದೇ ಆದ ನಿಲುವುಗಳಿದ್ದವು. ಭಾರತಿಯವ್ರದ್ದು ಬಹುಶಃ ‘ಬಾಳ ಬಂಗಾರ ನೀನು’ ಹಾಡು. ನನ್ನದು ಗಿರಿಕನ್ಯೆ ಸಿನಿಮಾದ್ದು. ಎಲ್ಲವೂ ಸೂಪರ್ ಹಿಟ್ ಹಾಡುಗಳು, ಎಲ್ಲರದ್ದೂ ಒಂದೊಂದು ಹಾಡು ಹಾಕಿ ನಾವು ಐದೂ ಜನರ ಜೊತೆಯಲ್ಲಿ ಆ ರಾಜ್ ಅನ್ನುವ ಹೆಸರು, ಅವನು ರಾಜ್‌ಕುಮಾರ್ ಆಗಿ. ನಿಜಕ್ಕೂ ಆನಂದದ ದಿನಗಳು. ಹುಡುಗ ಎಷ್ಟು ಸಿಂಪಲ್. ‘ಆಂಟೀ ನನ್ಜೊತೆಗೆ ಆ್ಯಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್’ ಎಂದಾಗ ನಂಗಾದ ಖುಷಿ ವರ್ಣಿಸಲು ಸಾಧ್ಯವಿಲ್ಲ.

ಪಾರ್ವತಮ್ಮ ಮತ್ತು ರಾಜ್‌ಕುಮಾರ್ ಇಬ್ಬರಿಗೂ ಬಾಲ್ಯದಿಂದಲೇ ಅಪ್ಪು ಎಂದರೆ ಪಂಚಪ್ರಾಣ. ಅವನು ಸದಾ ತಂದೆಯ ನೆರಳು. ಶೂಟಿಂಗ್‌ನಲ್ಲಿ ‘ಅಪ್ಪಾಜಿ ಅಪ್ಪಾಜಿ’ ಅಂತ ಸುತ್ತಲೂ ಓಡಾಡುತ್ತಿದ್ದ. ಅಪ್ಪಾಜಿಗೆ ಹತ್ತಾರು ಪ್ರಶ್ನೆಗಳನ್ನು ಕೇಳೋನು. ಅವರೂ ತಾಳ್ಮೆಯಿಂದ ಉತ್ತರ ಹೇಳೋರು. ಅಪ್ಪುವನ್ನು ಯಾರಾದರೂ ಹೊಗಳುತ್ತಿದ್ದರೆ ಅಮ್ಮನಿಗೆ ತಡೆಯಲಾಗದ ಸಂತೋಷ. ಅವ್ರು ಹೇಳೋರು- ‘ಜಯಮಾಲಾ ನೀ ನೋಡ್ತಿರು... ನಮ್ಮ ಅಪ್ಪೂ ಅವರ ಅಪ್ಪಾಜಿಯನ್ನೂ ಮೀರಿಸಿ ಬೆಳೆಯುತ್ತಾನೆ’ ಅಂತ. ಅವನು ಸೂಪರ್‌ಸ್ಟಾರ್ ಆಗಿಯೇ ಬಿಟ್ಟ. ತಾನೂ ಬೆಳೆದ. ಚಿತ್ರರಂಗವನ್ನೂ ಬೆಳೆಸಿದ. ಈಗ ಹೀಗೆ ಹೇಳದೆ ಕೇಳದೆ ಹೊರಟುಬಿಟ್ಟ. ಇವತ್ತು ಬಹುಶಃ ಪಾರ್ವತಮ್ಮ ಏನಾದರೂ ಇದ್ದಿದ್ದರೆ, ಈ ದೃಶ್ಯವನ್ನು ಅವರಿಗೆ ಅರಗಿಸಿಕೊಳ್ಳುವುದು ಸಾಧ್ಯವೇ ಇರುತ್ತಿರಲಿಲ್ಲ!

ನಿರೂಪಣೆ: ಬಿ.ಎಂ. ಹನೀಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.